SK Home Ad
Home ನಮ್ಮ ಜಿಲ್ಲೆ ಧಾರವಾಡ ಜೀವವೈವಿಧ್ಯದ ಜಗತ್ತಿಗೆ ಕಿಟಕಿ: ಹಳ್ಳಿಗೇರಿಯಲ್ಲಿ 63 ಕೀಟ-ಜೇಡಗಳ ಅನಾವರಣ!

ಜೀವವೈವಿಧ್ಯದ ಜಗತ್ತಿಗೆ ಕಿಟಕಿ: ಹಳ್ಳಿಗೇರಿಯಲ್ಲಿ 63 ಕೀಟ-ಜೇಡಗಳ ಅನಾವರಣ!

0
1

ಖ್ಯಾತ ನೇತ್ರ ತಜ್ಞ ಹುಬ್ಬಳ್ಳಿಯ ಡಾ. ಸತೀಶ ಹಳ್ಳಿಕೇರಿ ಅವರು ಸೆರೆಹಿಡಿದ ಅಪರೂಪದ ಜೇಡ ಪ್ರಭೇದದ ನೋಟ.

ಧಾರವಾಡ: ಕೇವಲ ಎರಡು ದಿನ, 35 ಜನ ವಿಜ್ಞಾನಿಗಳ ಕಣ್ಣು… ಸಿಕ್ಕಿದ್ದು ಬರೋಬ್ಬರಿ 63 ಪ್ರಭೇದಗಳ ಜೀವವೈವಿಧ್ಯದ ಬುತ್ತಿ!
ಹಳ್ಳಿಗೇರಿಯ ಪರಿಸರ ಶಿಕ್ಷಣ ಪಾಠಶಾಲೆ, ನೇಚರ್ ಫಸ್ಟ್ ಇಕೋ ವಿಲೇಜಿನಲ್ಲಿ ನೇಚರ್ ರಿಸರ್ಚ್ ಸೆಂಟರ್ (ಧಾರವಾಡ ನ್ಯಾಚುರಲ್ ಹಿಸ್ಟರಿ ಸೊಸೈಟಿ) ಆಯೋಜಿಸಿದ್ದ ವಿಶಿಷ್ಟ ಜನ ವಿಜ್ಞಾನ ಕ್ಷೇತ್ರ ಕಾರ್ಯಾಗಾರ (ಆ.೨೨ರಿಂದ ೨೩ರವರೆಗೆ ) ಯಶಸ್ವಿಯಾಗಿ ನಡೆಯಿತು.

ಕಾರ್ಯಾಗಾರದಲ್ಲಿ ಏನು ಸಿಕ್ಕಿತು?: ಪುಣೆಯ ಪ್ರತಿಷ್ಠಿತ ಎಂಟಮಾನ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ವರ್ಟಿಬ್ರೇಟ್ ಝೂವಾಲಜಿಯ ಸಂಸ್ಥಾಪಕ ನಿರ್ದೇಶಕ, ಖ್ಯಾತ ಕೀಟತಜ್ಞ ಈಶಾನ ಪಹಾಡೆ ಹಾಗೂ ಜೇಡಗಳ ತಜ್ಞ ಅಥರ್ವ ಕುಲಕರ್ಣಿ ನೇತೃತ್ವದ ತಂಡ, ಜನ ಮತ್ತು ವಿಜ್ಞಾನಿಗಳೊಂದಿಗೆ ಸೇರಿ ೩೫ಕ್ಕೂ ಹೆಚ್ಚು ಕೀಟ ಪ್ರಭೇದ ಹಾಗೂ ೨೮ಕ್ಕೂ ಅಧಿಕ ಜೇಡ ಪ್ರಭೇದಗಳನ್ನು ಗುರುತಿಸಿ ದಾಖಲಿಸಿದೆ.

ಪರಿಸರಾಸಕ್ತರು, ಸಂಶೋಧಕರು, ವಿದ್ಯಾರ್ಥಿಗಳು ಸೇರಿ ೩೫ಕ್ಕೂ ಹೆಚ್ಚು ಜನ ಪಾಲ್ಗೊಂಡು, ಐ-ನ್ಯಾಚುರಲಿಸ್ಟ್ ಆ್ಯಪ್ ಮೂಲಕ ಜೀವವೈವಿಧ್ಯ ದಾಖಲಾತಿಯ ರೀತಿ-ನೀತಿಗಳನ್ನು ಕಲಿತರು. ಈ ದಾಖಲೆಗಳು ಜೀವ ವೈವಿಧ್ಯ ಮಂಡಳಿ ಹಾಗೂ ಜನ ವಿಜ್ಞಾನಕ್ಕೆ ಅಪರೂಪದ ಆಕರವಾಗಲಿವೆ.

ಮಹತ್ವದ ಹೆಜ್ಜೆ: ಹಿರಿಯ ಪರಿಸರವಾದಿ ಪಂಚಾಕ್ಷರಿ ಹಿರೇಮಠ ಅವರ ನೇತೃತ್ವದಲ್ಲಿ, ಹಳ್ಳಿಗೇರಿಯಲ್ಲಿ ಅಪರೂಪದ ಚಿಟ್ಟೆ, ಹಾತೆ, ಜೇಡ, ಜೇನು ಮತ್ತು ಕೀಟ ಪ್ರಪಂಚದ ವಿಶೇಷ ಉದ್ಯಾನ ರೂಪಿಸಲು ಎಂಟಮಾನ್ ಇನ್‌ಸ್ಟಿಟ್ಯೂಟ್ ಒಡಂಬಡಿಕೆಗೆ ಸಹಿ ಹಾಕಿತು.

ಕಾರ್ಯಾಗಾರದಲ್ಲಿ ಡಾ. ಧೀರಜ ವೀರನಗೌಡರ, ಕೃಷ್ಣಕುಮಾರ ಭಾಗವತ, ಆರ್.ಜಿ. ತಿಮ್ಮಾಪುರ, ಕಲಕೇರಿ ಸಂಗೀತ ವಿದ್ಯಾಲಯ ಹಾಗೂ ಬಾಲಬಳಗ ಶಾಲೆಯ ವಿಜ್ಞಾನ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜನ ವಿಜ್ಞಾನ ಪರಿಚಾರಕ ಹರ್ಷವರ್ಧನ ಶೀಲವಂತ ಅವರು ಈ ಕಾರ್ಯಾಗಾರ ಸಂಯೋಜಿಸಿದ್ದರು.