SK Home Ad
Home ಸುದ್ದಿ ದೇಶ ವನ್ಯಜೀವಿಗಳ ಆರೈಕೆಗೆ ವನತಾರಾ–ಇಂಡೋನೇಷ್ಯಾ ಸಹಭಾಗಿತ್ವ

ವನ್ಯಜೀವಿಗಳ ಆರೈಕೆಗೆ ವನತಾರಾ–ಇಂಡೋನೇಷ್ಯಾ ಸಹಭಾಗಿತ್ವ

0
6

ಜಕಾರ್ತಾ: ವನತಾರಾ ಸಂಸ್ಥೆಯ ಸಹಯೋಗದೊಂದಿಗೆ ವನ್ಯಜೀವಿಗಳ ಆರೋಗ್ಯ ಮತ್ತು ಸ್ಥಳದಲ್ಲೇ ಸಂರಕ್ಷಣಾ ಉಪಕ್ರಮಗಳನ್ನು ಆರಂಭಿಸುವುದಾಗಿ ಇಂಡೋನೇಷ್ಯಾದ ಅರಣ್ಯ ಸಚಿವ ರಾಜಾ ಜುಲಿ ಆಂಟೋನಿ ಘೋಷಿಸಿದ್ದಾರೆ. ಆರಂಭಿಕ ಹಂತದಲ್ಲಿ ಸಾಮರ್ಥ್ಯ ವೃದ್ಧಿ ತರಬೇತಿಗಳು, ಸಂಚಾರಿ ಆಸ್ಪತ್ರೆಗಳು ಮತ್ತು ಉನ್ನತೀಕರಿಸಲಾದ ವೇ ಕಂಬಾಸ್ ಆನೆ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.

ಇಂಡೋನೇಷ್ಯಾದ ಅರಣ್ಯ ಸಚಿವರಾದ ರಾಜಾ ಜುಲಿ ಆಂಟೋನಿ ಅವರು ಜಕಾರ್ತಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಂಡೋನೇಷ್ಯಾದ ವನ್ಯಜೀವಿ ಆರೋಗ್ಯ ಮತ್ತು ಸ್ಥಳದಲ್ಲೇ ಸಂರಕ್ಷಣಾ ಪ್ರಯತ್ನಗಳ ಪ್ರಮುಖ ವಿಸ್ತರಣೆಯನ್ನು ಇಂದು ಅಧಿಕೃತವಾಗಿ ಘೋಷಿಸಿದರು. ಈ ಕಾರ್ಯಕ್ರಮಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಂತ್ ಅಂಬಾನಿ ಅವರು ಸ್ಥಾಪಿಸಿರುವ ವಿಶ್ವದ ಬೃಹತ್ ವನ್ಯಜೀವಿ ಸಂರಕ್ಷಣಾ ಸಂಸ್ಥೆಯಾದ ʻವನತಾರಾʼ ಹಾಗೂ ಇಂಡೋನೇಷ್ಯಾದ ಹೆಸರಾಂತ ವನ್ಯಜೀವಿ ಸಂಸ್ಥೆಯಾದ ʻಪಿಟಿ ಫೌನಾ ಲ್ಯಾಂಡ್ ಗ್ರೂಪ್ʼ ಸಹಯೋಗ ನೀಡುತ್ತಿವೆ ಎಂದರು.

ಸಚಿವ ರಾಜಾ ಜುಲಿ ಆಂಟೋನಿ ಮಾತನಾಡುತ್ತಾ, “ವನ್ಯಜೀವಿ ಸಂರಕ್ಷಣೆ ಎಂಬುದು ಅಂತಿಮವಾಗಿ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಮ್ಮ ವನ್ಯಜೀವಿಗಳಿಗೆ ಯಾವಾಗ ಮತ್ತು ಎಲ್ಲೇ ಅಗತ್ಯವಿದ್ದರೂ ಅವುಗಳನ್ನು ನೋಡಿಕೊಳ್ಳಲು ಅಗತ್ಯವಿರುವ ಸೌಲಭ್ಯಗಳು, ಪರಿಣತಿ ಮತ್ತು ಸಂಪನ್ಮೂಲಗಳು ಇಂಡೋನೇಷ್ಯಾದಲ್ಲಿರುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಈ ಪಾಲುದಾರಿಕೆಯ ಮೂಲಕ ನಮ್ಮ ಸ್ವಂತ ವನ್ಯಜೀವಿ ಆರೋಗ್ಯ ಮತ್ತು ಸಂರಕ್ಷಣಾ ಮೂಲಸೌಕರ್ಯವನ್ನು ನಾವು ಬಲಪಡಿಸುತ್ತಿದ್ದೇವೆ. ವನತಾರಾ ತನ್ನ ಅನುಭವ, ಪರಿಣತಿ ಮತ್ತು ಸಂಪನ್ಮೂಲಗಳ ಮೂಲಕ ನಮಗೆ ಬೆಂಬಲ ನೀಡುತ್ತಿದೆ. ಈ ಸಹಕಾರದಡಿಯಲ್ಲಿ ಬರುವ ಎಲ್ಲಾ ಸೌಲಭ್ಯಗಳು ಮತ್ತು ಕಾರ್ಯಕ್ರಮಗಳನ್ನು ಇಂಡೋನೇಷ್ಯಾ ಸರ್ಕಾರದ ಹಾಗೂ ಸಂಬಂಧಿತ ಪ್ರಾಧಿಕಾರಗಳೇ ಸ್ವಂತವಾಗಿ ಹೊಂದಿದ್ದು, ನಿರ್ವಹಿಸಿ ಮುನ್ನಡೆಸಲಿವೆ. ಇದು ಮುಂಬರುವ ಪೀಳಿಗೆಗಳಿಗಾಗಿ ಇಂಡೋನೇಷ್ಯಾದ ಸಂರಕ್ಷಣಾ ಪ್ರಾಮುಖ್ಯತೆಗಳು ಮತ್ತು ನಮ್ಮ ವನ್ಯಜೀವಿಗಳ ಸೇವೆಗೆ ಮೀಸಲಿರುವುದನ್ನು ಇದು ಖಚಿತಪಡಿಸುತ್ತದೆ” ಎಂದರು.

ವನತಾರಾದ ಸಿಇಒ ವಿವಾನ್ ಕರಾನಿ ಮಾತನಾಡಿ, “ಇಂಡೋನೇಷ್ಯಾ ಸರ್ಕಾರದೊಂದಿಗೆ ಕೆಲಸ ಮಾಡಲು ಮತ್ತು ದೇಶದ ವನ್ಯಜೀವಿ ಸಂರಕ್ಷಣಾ ಪ್ರಯತ್ನಗಳಿಗೆ ಕೊಡುಗೆ ನೀಡಲು ನಮಗೆ ಸಿಕ್ಕಿರುವ ಈ ಅವಕಾಶ ಹಾಗೂ ವಿಶ್ವಾಸಕ್ಕಾಗಿ ನಾವು ಕೃತಜ್ಞರಾಗಿದ್ದೇವೆ. ಇಂಡೋನೇಷ್ಯಾವು ವಿಶ್ವದ ಅತ್ಯಂತ ಅಸಾಧಾರಣ ಜೀವವೈವಿಧ್ಯತೆಯನ್ನು ಹೊಂದಿರುವ ನಾಡಾಗಿದೆ. ಈ ಪ್ರಾಕೃತಿಕ ಪರಂಪರೆಯನ್ನು ಭವಿಷ್ಯದ ಪೀಳಿಗೆಗಾಗಿ ರಕ್ಷಿಸುವಲ್ಲಿ ಇಂಡೋನೇಷ್ಯಾಕ್ಕೆ ಬೆಂಬಲ ನೀಡುವುದು ವನತಾರಾಗೆ ದೊರೆತ ಸೌಭಾಗ್ಯವಾಗಿದೆ. ವನತಾರಾ ಸಂಸ್ಥೆಯು ವನ್ಯಜೀವಿ ಆರೋಗ್ಯ, ಪಶುವೈದ್ಯಕೀಯ ಆರೈಕೆ, ಪ್ರಾಣಿ ಸಾಕಣೆ ಮತ್ತು ಸಂರಕ್ಷಣೆ ಕ್ಷೇತ್ರಗಳಲ್ಲಿ ಆಳವಾದ ಪರಿಣತಿಯನ್ನು ಅಭಿವೃದ್ಧಿಪಡಿಸಿದ್ದು, ಆ ಅನುಭವವನ್ನು ಇಂಡೋನೇಷ್ಯಾ ಜೊತೆ ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ. ಅಲ್ಲದೆ, ಈ ದೇಶದ ದೀರ್ಘಕಾಲದ ಸಂರಕ್ಷಣಾ ಅನುಭವದಿಂದ ಕಲಿಯಲು ನಾವು ಎದುರು ನೋಡುತ್ತಿದ್ದೇವೆ. ಅತ್ಯಂತ ಮುಖ್ಯವಾಗಿ, ಈ ಪಾಲುದಾರಿಕೆಯು ವನ್ಯಜೀವಿಗಳಿಗೆ ಪ್ರಾಯೋಗಿಕ ಹಾಗೂ ಶಾಶ್ವತವಾದ ಪ್ರಯೋಜನವನ್ನು ತಂದುಕೊಡಬೇಕೆಂಬುದು ನಮ್ಮ ಆಶಯವಾಗಿದೆ” ಎಂದು ತಿಳಿಸಿದರು.

ಫೌನಾ ಲ್ಯಾಂಡ್‌ನ ಸಿಇಒ ಡ್ಯಾನಿ ಗುನಾಲನ್ ಮಾತನಾಡಿ, “ಇಂಡೋನೇಷ್ಯಾದಲ್ಲಿ ಅಸಾಧಾರಣ ವನ್ಯಜೀವಿ ಮತ್ತು ಜೀವವೈವಿಧ್ಯತೆಯ ಸಂಪತ್ತಿದೆ. ಈ ಪ್ರಾಕೃತಿಕ ಪರಂಪರೆಯನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇಂಡೋನೇಷ್ಯಾ ಸರ್ಕಾರ ಮತ್ತು ವನತಾರಾದೊಂದಿಗೆ ಜತೆಗೂಡಿ ಕೆಲಸ ಮಾಡಲು ನಾವು ಹರ್ಷಿಸುತ್ತೇವೆ. ನಮ್ಮೆಲ್ಲರ ಅನುಭವ ಮತ್ತು ಪರಿಣತಿಯನ್ನು ಒಟ್ಟುಗೂಡಿಸಿ ದೇಶಾದ್ಯಂತ ವನ್ಯಜೀವಿಗಳ ಆರೋಗ್ಯ ಹಾಗೂ ಆರೈಕೆಯನ್ನು ಬಲಪಡಿಸಲು ಇದು ಸಹಕಾರಿಯಾಗಿದೆ. ಈ ಪಾಲುದಾರಿಕೆಯು ಸ್ಥಳೀಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ವನ್ಯಜೀವಿಗಳಿಗೆ ಲಭ್ಯವಿರುವ ಮೂಲಸೌಕರ್ಯವನ್ನು ಬಲಪಡಿಸುತ್ತದೆ ಮತ್ತು ಅತ್ಯಂತ ಮುಖ್ಯವಾಗಿ ಪ್ರಾಣಿಗಳಿಗೆ ಹಾಗೂ ಅವುಗಳನ್ನು ರಕ್ಷಿಸಲು ಶ್ರಮಿಸುತ್ತಿರುವ ಜನರಿಗೆ ನಿಜವಾದ ಹಾಗೂ ಶಾಶ್ವತವಾದ ವ್ಯತ್ಯಾಸವನ್ನು ತರುತ್ತದೆ ಎಂದು ನಾವು ನಂಬುತ್ತೇವೆ” ಎಂದರು.

ಈ ಕಾರ್ಯಕ್ರಮವು ಇಂಡೋನೇಷ್ಯಾದ ವನ್ಯಜೀವಿ ಆರೋಗ್ಯ ಮೂಲಸೌಕರ್ಯ ಮತ್ತು ಕ್ಷೇತ್ರ ಸಾಮರ್ಥ್ಯಗಳನ್ನು ಬಲಪಡಿಸಲಿದ್ದು, ಇಂಡೋನೇಷ್ಯಾದ ಪ್ರಾಧಿಕಾರಗಳ ನೇತೃತ್ವದ ಕಾರ್ಯಕ್ರಮಗಳಿಗೆ ವನತಾರಾ ವಿಶೇಷ ಪಶುವೈದ್ಯಕೀಯ ಪರಿಣತಿ, ತಾಂತ್ರಿಕ ಬೆಂಬಲ, ಮೂಲಸೌಕರ್ಯ ನೆರವು ಮತ್ತು ಸಾಮರ್ಥ್ಯ ವೃದ್ಧಿ ತರಬೇತಿಗಳನ್ನು ಒದಗಿಸಲಿದೆ.

ಘೋಷಿಸಲಾದ ಉಪಕ್ರಮಗಳು: ಆನೆ ಪಾಲಕರು, ಪಶುವೈದ್ಯರು ಮತ್ತು ಇಂಡೋನೇಷ್ಯಾದಲ್ಲಿ ವನ್ಯಜೀವಿ ನಿರ್ವಹಣೆಯಲ್ಲಿ ತೊಡಗಿರುವ ಇತರ ಅಧಿಕಾರಿಗಳಿಗೆ ಸಾಮರ್ಥ್ಯ ವೃದ್ಧಿ ತರಬೇತಿಗಳು. ಇಂಡೋನೇಷ್ಯಾಾದಾದ್ಯಂತ ಕಾಡುಪ್ರಾಣಿಗಳ ಅಗತ್ಯಗಳನ್ನು ಸ್ಥಳದಲ್ಲೇ ಪೂರೈಸಲು ʻ10 ಸಂಚಾರಿ ಆಸ್ಪತ್ರೆಗಳುʼ.

ವೇ ಕಂಬಾಸ್ ಆನೆ ಆಸ್ಪತ್ರೆಯನ್ನು ಅತ್ಯಾಧುನಿಕ ಉಪಕರಣಗಳು, ಸಲಕರಣೆಗಳು ಮತ್ತು ತಂತ್ರಜ್ಞಾನಗಳೊಂದಿಗೆ ʻಆನೆ ಚಿಕಿತ್ಸಾ ಮತ್ತು ಆರೈಕೆ ಕೇಂದ್ರʼವಾಗಿ ಉನ್ನತೀಕರಿಸುವುದು. ಈ ನವೀಕರಿಸಿದ ಆಸ್ಪತ್ರೆಯು ಮಾನವನ ಆರೈಕೆಯಲ್ಲಿರುವ 62 ಸುಮಾತ್ರ ಆನೆಗಳಿಗೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿರುವ ಸುಮಾರು 100 ಕಾಡು ಸುಮಾತ್ರಾ ಆನೆಗಳಿಗೆ ರಕ್ಷಣೆ ನೀಡಲಿದೆ.

ಈ ಉಪಕ್ರಮಗಳು ಇಂಡೋನೇಷ್ಯಾ ಸರ್ಕಾರ ಮತ್ತು ವನತಾರಾ ನಡುವಿನ ವಿಶಾಲ ಸಹಕಾರ ಒಪ್ಪಂದದ ಒಂದು ಭಾಗವಾಗಿದ್ದು, ಇದು ವನ್ಯಜೀವಿ ಆರೋಗ್ಯ, ಪ್ರಾಣಿ ಕಲ್ಯಾಣ ಮತ್ತು ಸಂರಕ್ಷಣೆಯಾದ್ಯಂತ ಸಹಕಾರಕ್ಕೆ ಒಂದು ಚೌಕಟ್ಟನ್ನು ಒದಗಿಸುತ್ತದೆ. ಈ ಒಡಂಬಡಿಕೆಯಡಿಯಲ್ಲಿ, ಇಂಡೋನೇಷ್ಯಾದ ರಾಷ್ಟ್ರೀಯ ಸಂರಕ್ಷಣಾ ಪ್ರಾಮುಖ್ಯತೆಗಳಿಗೆ ಅನುಗುಣವಾಗಿ ಉಭಯ ಪಕ್ಷಗಳು ಸಹಕಾರದ ಪ್ರಾಥಮಿಕ ಕ್ಷೇತ್ರಗಳನ್ನು ಗುರುತಿಸಿವೆ.

ವನತಾರಾ ತನ್ನ ಪಶುವೈದ್ಯಕೀಯ, ಪ್ರಾಣಿ ಆರೈಕೆ ಮತ್ತು ಸಂರಕ್ಷಣಾ ಪರಿಣತಿ, ತಾಂತ್ರಿಕ ಸಾಮರ್ಥ್ಯಗಳು, ಮೂಲಸೌಕರ್ಯ ಬೆಂಬಲ ಮತ್ತು ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ಕೊಡುಗೆಯಾಗಿ ನೀಡಲಿದ್ದು, ಇಂಡೋನೇಷ್ಯಾ ಸರ್ಕಾರ, ಸಂಬಂಧಿತ ರಾಷ್ಟ್ರೀಯ ಸಂಸ್ಥೆಗಳು ಮತ್ತು ಫೌನಾ ಲ್ಯಾಂಡ್‌ನೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲಿದೆ.