ಹುಬ್ಬಳ್ಳಿ: ಹೆಸ್ಕಾಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗೃಹ ಜ್ಯೋತಿ ಫಲಾನುಭವಿಗಳ ಮನೆ-ಮನೆ ಸಮೀಕ್ಷೆಗೆ ನೀಡಿರುವ ಗಡುವು ಅಕ್ಟೋಬರ್ 31ಕ್ಕೆ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳದ ಗ್ರಾಹಕರು ಅಗತ್ಯ ದಾಖಲಾತಿಗಳನ್ನು ಹೆಸ್ಕಾಂ ಉಪ ವಿಭಾಗ ಕಚೇರಿಗೆ ಖುದ್ದಾಗಿ ತೆರಳಿ ಸಲ್ಲಿಸಲು ಹೆಸ್ಕಾಂ ವಿನಂತಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಳೆದ ಮೂರುವರೆ ತಿಂಗಳಿನಿಂದ ನಡೆಯುತ್ತಿರುವ ಸಮೀಕ್ಷೆಯಲ್ಲಿ ಮನೆಗೆ ಬೀಗ ಹಾಕಿರುವ, ಮನೆ ಖಾಲಿ ಇರುವ ಹಾಗೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಗ್ರಾಹಕರಿಗೆ ಹೆಸ್ಕಾಂ ಕಚೇರಿಗೆ ತೆರಳಿ ದಾಖಲಾತಿ ಸಲ್ಲಿಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದ್ದು, ಗಡುವಿನೊಳಗೆ ದಾಖಲಾತಿ ಸಲ್ಲಿಸಲು ಹೆಸ್ಕಾಂ ಮನವಿಮಾಡಿದ್ದು, ದಾಖಲಾತಿ ಸಲ್ಲಿಸಲು ಇದು ಕೊನೆಯ ಅವಕಾಶ ಎಂದು ಹೇಳಿದೆ.
ಸಮೀಕ್ಷೆ ಸಂದರ್ಭದಲ್ಲಿ ಬೀಗ ಹಾಕಿರುವ, ಖಾಲಿ ಇರುವ ಮನೆಗಳಿಗೆ ಹೆಸ್ಕಾಂ ಸಿಬ್ಬಂದಿ ಮೂರು ಬಾರಿ ಭೇಟಿ ನೀಡಿದ್ದು, ಈ ವರ್ಗಗಳ ಗ್ರಾಹಕರ ಮೊಬೈಲ್ ಗೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಸಂದೇಶವನ್ನು ಕೂಡ ಕಳುಹಿಸಲಾಗಿತ್ತು. ಇಂತಹ ಗ್ರಾಹಕರಿಗೆ ದಾಖಲಾತಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನಾಂಕವಾಗಿದ್ದು, ಕೇವಲ ಐದು ದಿನಗಳು ಮಾತ್ರ ಬಾಕಿ ಉಳಿದಿದ್ದು, ಗಡುವು ವಿಸ್ತರಣೆ ಇಲ್ಲ ಎಂದು ಹೆಸ್ಕಾಂ ಸ್ಪಷ್ಟಪಡಿಸಿದೆ.




















