SK Home Ad
Home ಸಿನಿ ಮಿಲ್ಸ್ ಗನ್ ಜಾಮ್ ಆಗಿದ್ದೇ ಟೈಗರ್ ಶ್ರಾಫ್‌ಗೆ ವರ! ಅಸಲಿ ಟಾರ್ಗೆಟ್ ಅಮೀರ್-ಸಲ್ಮಾನ್: ಸೂರತ್‌ನಲ್ಲಿ ಫ್ಲಾಪ್ ಆದ...

ಗನ್ ಜಾಮ್ ಆಗಿದ್ದೇ ಟೈಗರ್ ಶ್ರಾಫ್‌ಗೆ ವರ! ಅಸಲಿ ಟಾರ್ಗೆಟ್ ಅಮೀರ್-ಸಲ್ಮಾನ್: ಸೂರತ್‌ನಲ್ಲಿ ಫ್ಲಾಪ್ ಆದ ಗ್ಯಾಂಗ್ ಪ್ಲಾನ್ ಏನು?

0
13

ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಮುಂಬೈನ ಜುಹುವಿನಲ್ಲಿ ನಡೆದ ಭೀಕರ ಗುಂಡಿನ ದಾಳಿ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಪೊಲೀಸರ ವಿಚಾರಣೆಯಲ್ಲಿ ಬೆಚ್ಚಿಬೀಳಿಸುವ ಆಘಾತಕಾರಿ ಸತ್ಯಗಳು ಬಯಲಾಗಿವೆ. ದಾಳಿಗೆ ಬಳಸಲಾಗಿದ್ದ ಪಿಸ್ತೂಲ್ ಮತ್ತು ಉಳಿದ ಜೀವಂತ ಗುಂಡುಗಳನ್ನು ದಾಳಿಯ ಬಳಿಕ ವಾಪಸ್ ದೆಹಲಿಗೆ ತೆಗೆದುಕೊಂಡು ಹೋಗಿ ನಾಶಪಡಿಸಲು ಯೋಜಿಸಲಾಗಿತ್ತು.

 ಆದರೆ, ಮುಂಬೈ ಪೊಲೀಸರು ಬೆನ್ನತ್ತಿದ ತಕ್ಷಣ ಗಾಬರಿಗೊಂಡ ಆರೋಪಿಗಳು ಗುಜರಾತ್‌ನ ಸೂರತ್‌ನಲ್ಲಿ ಆಯುಧಗಳನ್ನು ಎಸೆದು ಪರಾರಿಯಾಗಿದ್ದರು ಎಂಬ ರಹಸ್ಯ ಬಯಲಾಗಿದೆ. ದೆಹಲಿ ಮತ್ತು ಹರಿಯಾಣದಲ್ಲಿ ಬಂಧಿತರಾಗಿರುವ ಸುಮಿತ್, ಕುನಾಲ್, ರಾಧಾ ಮತ್ತು ಬಬಿತಾ ಎಂಬ ನಾಲ್ವರು ಆರೋಪಿಗಳನ್ನು ಅಕ್ಟೋಬರ್ 28 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇವರ ಮೊಬೈಲ್ ಫೋನ್‌ಗಳಿಂದ ವಶಪಡಿಸಿಕೊಂಡ ವಾಯ್ಸ್ ನೋಟ್‌ಗಳಲ್ಲಿ ಆಯುಧಗಳನ್ನು ವಿಲೇವಾರಿ ಮಾಡುವ ಸಂಭಾಷಣೆ ಪತ್ತೆಯಾಗಿದೆ.

ಜುಹುವಿನಲ್ಲಿ ಫುಟ್‌ಬಾಲ್ ಆಡಿ ಬಿಎಂಡಬ್ಲ್ಯೂ ಕಾರಿನಲ್ಲಿ ಹೊರಬರುತ್ತಿದ್ದ ಟೈಗರ್ ಶ್ರಾಫ್ ಅವರತ್ತ ಶೂಟರ್ ಗುರಿ ಇಟ್ಟು ಟ್ರಿಗರ್ ಒತ್ತಿದಾಗ ಅದೃಷ್ಟವಶಾತ್ ಗನ್ ಜಾಮ್ ಆಗಿತ್ತು. ಇದರಿಂದ ಟೈಗರ್ ಶ್ರಾಫ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದರೆ, ಅಲ್ಲಿ ನೆರೆದಿದ್ದ ಸಾರ್ವಜನಿಕರೊಬ್ಬರಿಗೆ ಗುಂಡು ತಗುಲಿತ್ತು.

ತನಿಖೆಯಲ್ಲಿ ಬಯಲಾದ ಅತಿ ದೊಡ್ಡ ಟ್ವಿಸ್ಟ್ ಎಂದರೆ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಅಸಲಿ ಟಾರ್ಗೆಟ್ ಟೈಗರ್ ಶ್ರಾಫ್ ಆಗಿರಲೇ ಇಲ್ಲ ಸಲ್ಮಾನ್ ಖಾನ್ ಜೊತೆ ನಿಕಟ ಸಂಪರ್ಕ ಹೊಂದಿರುವವರನ್ನು ಮುಗಿಸುವುದಾಗಿ ಬೆದರಿಕೆ ಹಾಕಿದ್ದ ಈ ಗ್ಯಾಂಗ್‌ನ ಮೊದಲ ಗುರಿ ಸಲ್ಮಾನ್ ಖಾನ್, ಅಮೀರ್ ಖಾನ್, ಅಮಿತಾಭ್ ಬಚ್ಚನ್ ಹಾಗೂ ಅಕ್ಷಯ್ ಕುಮಾರ್ ಆಗಿದ್ದರು.

ಅಮೀರ್ ಖಾನ್ ಅವರ ಬಾಂದ್ರಾ ನಿವಾಸದ ಬಳಿ ಮೂರು ಬಾರಿ ರೇಖಿ ಕೂಡ ನಡೆಸಲಾಗಿತ್ತು. ಆದರೆ, ಈ ಸ್ಟಾರ್ ನಟರ ಬಿಗಿ ಭದ್ರತೆಯನ್ನು ಭೇದಿಸಲು ಸಾಧ್ಯವಾಗದೆ, ಯಾವುದೇ ಭದ್ರತೆಯಿಲ್ಲದೆ ಜನಸಾಮಾನ್ಯರಂತೆ ಓಡಾಡುತ್ತಿದ್ದ ಟೈಗರ್ ಶ್ರಾಫ್ ಅವರನ್ನು ಸುಲಭದ ತುತ್ತಾಗಿ ಆಯ್ಕೆ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಪ್ರಕರಣದಲ್ಲಿ ಇದುವರೆಗೆ ಒಟ್ಟು 11 ಆರೋಪಿಗಳನ್ನು ಬಂಧಿಸಲಾಗಿದೆ.