ಬೋರ್ವೆಲ್ ಕೊರೆಯಲು ಹೆಚ್ಚುವರಿ ಹಣ ವಸೂಲಿ ಮಾಡಿದರೆ ರಿಗ್ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್: ಸಚಿವ ಕೆ.ಎಸ್.ಬಸವಂತಪ್ಪ ಎಚ್ಚರಿಕೆ
ರೈತರಿಗೆ ಉಚಿತ ವೈಜ್ಞಾನಿಕ ಅಂತರ್ಜಲ ಪರೀಕ್ಷೆ; ನಿಯಮ ಉಲ್ಲಂಘಿಸಿದರೆ ರಿಗ್ ವಾಹನಗಳ ಮುಟ್ಟುಗೋಲು +
ದಾವಣಗೆರೆ: ಮಳೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ಅನಿವಾರ್ಯತೆಯನ್ನು ದುರುಪಯೋಗಪಡಿಸಿಕೊಂಡು ಕೊಳವೆಬಾವಿ ಕೊರೆಯಲು ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಿದರೆ ಅಂತಹ ರಿಗ್ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಿಯಮ ಉಲ್ಲಂಘಿಸುವವರ ರಿಗ್ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಬರ ನಿರ್ವಹಣೆ, ಕುಡಿಯುವ ನೀರಿನ ಸಮಸ್ಯೆ ಹಾಗೂ ರಿಗ್ ಮಾಲೀಕರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮಳೆಯ ಅಭಾವದಿಂದ ರೈತರು ಈಗಾಗಲೇ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಳೆಗಳನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಅನಿವಾರ್ಯವಾಗಿ ಕೊಳವೆಬಾವಿಗಳನ್ನು ಕೊರೆಯಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಿಗ್ ಮಾಲೀಕರು ಕೃತಕ ಅಭಾವ ಸೃಷ್ಟಿಸಿ, ಮನಬಂದಂತೆ ದರ ನಿಗದಿಪಡಿಸಿ ರೈತರನ್ನು ಶೋಷಿಸುವುದನ್ನು ಸಹಿಸುವುದಿಲ್ಲ. ಕೊಳವೆಬಾವಿ ಕೊರೆಯುವ ವಿಚಾರದಲ್ಲಿ ರೈತರಿಗೆ ಆರ್ಥಿಕ ಅಥವಾ ತಾಂತ್ರಿಕ ವಂಚನೆ ಎಸಗಿದರೆ ಸಂಬಂಧಪಟ್ಟವರ ವಿರುದ್ಧ ಕರ್ನಾಟಕ ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮನ ಹಾಗೂ ನಿಯಂತ್ರಣ ಅಧಿನಿಯಮದಡಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ರೈತರಿಗೆ ಉಚಿತ ವೈಜ್ಞಾನಿಕ ಅಂತರ್ಜಲ ಪರೀಕ್ಷೆ: ರೈತರ ಹಿತದೃಷ್ಟಿಯಿಂದ ಜಮೀನುಗಳಲ್ಲಿ ಕೊಳವೆಬಾವಿ ಕೊರೆಯಿಸುವ ಮುನ್ನ ನಡೆಸುವ ವೈಜ್ಞಾನಿಕ ಅಂತರ್ಜಲ ಪರೀಕ್ಷೆಯನ್ನು ಇನ್ನು ಮುಂದೆ ಸಂಪೂರ್ಣ ಉಚಿತವಾಗಿ ಮಾಡಿಸಿಕೊಡಲಾಗುವುದು. ಈ ಹಿಂದೆ ಸರ್ಕಾರದಿಂದ ಅನುದಾನ ಲಭ್ಯವಿಲ್ಲದ ಕಾರಣ ಪರೀಕ್ಷೆಗೆ ಶುಲ್ಕ ವಿಧಿಸಲಾಗುತ್ತಿತ್ತು.
ರೈತರ ಮೇಲಿನ ಆರ್ಥಿಕ ಹೊರೆ ತಪ್ಪಿಸುವ ಉದ್ದೇಶದಿಂದ ಈ ಸೌಲಭ್ಯ ಕಲ್ಪಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ನಾಗೇಂದ್ರಪ್ಪ ಅವರನ್ನು ಸಂಪರ್ಕಿಸಬಹುದು ಎಂದರು.
ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳನ್ನು ಗುರುತಿಸಿ ತುರ್ತಾಗಿ ಹೊಸ ಕೊಳವೆಬಾವಿಗಳನ್ನು ಕೊರೆಯಿಸಬೇಕು. ಅಗತ್ಯವಿರುವ ಕಡೆ ಖಾಸಗಿ ಕೊಳವೆಬಾವಿ ಮಾಲೀಕರಿಂದ ನೀರು ಪಡೆದು ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು. ಈ ಕಾರ್ಯದಲ್ಲಿ ಯಾವುದೇ ವ್ಯತ್ಯಯವಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ವಿಫಲ ಕೊಳವೆಬಾವಿ ಪ್ರದೇಶಗಳಲ್ಲಿ ಐಸೊಟೋಪಿಕ್ ಸರ್ವೇ: ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಅತಿ ಹೆಚ್ಚು ಕೊಳವೆಬಾವಿಗಳು ವಿಫಲವಾಗಿರುವ ಪ್ರದೇಶಗಳನ್ನು ಗುರುತಿಸಿ ಅಂತರ್ಜಲದ ಸ್ಥಿತಿಗತಿಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲಾಗುವುದು. ಸೆಂಟ್ರಲ್ ವಾಟರ್ ಬೋರ್ಡ್ ಸಹಯೋಗದಲ್ಲಿ ಐಸೊಟೋಪಿಕ್ ಸರ್ವೇ ನಡೆಸಲು ಉದ್ದೇಶಿಸಲಾಗಿದೆ. ಇದರಿಂದ ಅಂತರ್ಜಲದ ಲಭ್ಯತೆ ಹಾಗೂ ನೀರಿನ ಸ್ಥಿತಿಗತಿಯನ್ನು ವೈಜ್ಞಾನಿಕವಾಗಿ ತಿಳಿದುಕೊಳ್ಳಲು ಸಾಧ್ಯವಾಗಲಿದೆ ಎಂದರು.
ರೈತರು ಸರ್ಕಾರದಿಂದ ಅಧಿಕೃತವಾಗಿ ನೋಂದಾಯಿತ ಮತ್ತು ಮಾನ್ಯತೆ ಪಡೆದ ರಿಗ್ ಮಾಲೀಕರಿಂದ ಮಾತ್ರ ಕೊಳವೆಬಾವಿ ಕೊರೆಯಿಸಿಕೊಳ್ಳಬೇಕು. ಅನಧಿಕೃತ ಏಜೆಂಟರು ಹಾಗೂ ಮಧ್ಯವರ್ತಿಗಳನ್ನು ನಂಬಿ ಮೋಸ ಹೋಗಬಾರದು. ದರ ನಿಗದಿ, ಕಳಪೆ ಗುಣಮಟ್ಟದ ಸಾಮಗ್ರಿಗಳ ಬಳಕೆ ಸೇರಿದಂತೆ ಯಾವುದೇ ರೀತಿಯ ವಂಚನೆ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಾಹಿತ್ಯ ಎಂ. ಆಲದಕಟ್ಟಿ, ಕೃಷಿ ಜಂಟಿ ನಿರ್ದೇಶಕ ಜಿಯಾವುಲ್ಲಾ, ತೋಟಗಾರಿಕೆ ಉಪ ನಿರ್ದೇಶಕ ರಾಘವೇಂದ್ರ, ಹಿರಿಯ ಭೂವಿಜ್ಞಾನಿ ಬಸವರಾಜು, ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರ ಉದಯ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ರಿಗ್ ಮಾಲೀಕರು ಉಪಸ್ಥಿತರಿದ್ದರು.
- ಕೊಳವೆಬಾವಿ ಕೊರೆಯುವ ದರದಲ್ಲಿ ವಂಚನೆಗೆ ಕಡಿವಾಣ: ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮಬೋರ್ವೆಲ್ ಕೊರೆಯಲು ಹೆಚ್ಚುವರಿ ಹಣ ವಸೂಲಿ ಮಾಡಿದರೆ ರಿಗ್ ಮಾಲೀಕರ ವಿರುದ್ಧ ಕ್ರಿಮಿನಲ್… Read more: ಕೊಳವೆಬಾವಿ ಕೊರೆಯುವ ದರದಲ್ಲಿ ವಂಚನೆಗೆ ಕಡಿವಾಣ: ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ
- ಅರ್ಜಿ ಅವಧಿ ಮುಗಿದರೂ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಸೃಷ್ಟಿಸಿದ SBIನ ಈ ಹುದ್ದೆ!ಎಸ್ಬಿಐ ಮುಖ್ಯ AI ಅಧಿಕಾರಿ ಹುದ್ದೆಗೆ ₹1.6 ಕೋಟಿ CTC: ಅರ್ಜಿ ಅವಧಿ… Read more: ಅರ್ಜಿ ಅವಧಿ ಮುಗಿದರೂ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಸೃಷ್ಟಿಸಿದ SBIನ ಈ ಹುದ್ದೆ!
- ಗೋಧ್ರಾ ರೈಲು ದಹನ ಪ್ರಕರಣ: ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಗೆ ಮಧ್ಯಂತರ ಜಾಮೀನುನವದೆಹಲಿ: 2002ರ ಗುಜರಾತ್ನ ಗೋಧ್ರಾ ರೈಲು ದಹನ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ… Read more: ಗೋಧ್ರಾ ರೈಲು ದಹನ ಪ್ರಕರಣ: ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಗೆ ಮಧ್ಯಂತರ ಜಾಮೀನು
- WhatsApp Web ಬಳಸುವವರಿಗೆ ಕೇಂದ್ರ ಸೈಬರ್ ಘಟಕದಿಂದ ಬಿಗ್ ಅಲರ್ಟ್!WhatsApp Web ಬಳಸುವವರಿಗೆ ಕೇಂದ್ರ ಸೈಬರ್ ಘಟಕದಿಂದ ಬಿಗ್ ಅಲರ್ಟ್! ತಕ್ಷಣ ಈ… Read more: WhatsApp Web ಬಳಸುವವರಿಗೆ ಕೇಂದ್ರ ಸೈಬರ್ ಘಟಕದಿಂದ ಬಿಗ್ ಅಲರ್ಟ್!
- ಬೆಳ್ಳುಳ್ಳಿ ಕೃಷಿಯಲ್ಲಿ ಹೊಸ ಕ್ರಾಂತಿ: ಖರ್ಚು ಅರ್ಧ, ಇಳುವರಿ ಭರ್ಜರಿ!ಬೆಳ್ಳುಳ್ಳಿ ಕೃಷಿ ವೆಚ್ಚ ಶೇ.50ರಷ್ಟು ಇಳಿಕೆ ಸಾಧ್ಯತೆ! – ಬೆಳ್ಳುಳ್ಳಿ ರೈತರಿಗೆ ಹೊಸ… Read more: ಬೆಳ್ಳುಳ್ಳಿ ಕೃಷಿಯಲ್ಲಿ ಹೊಸ ಕ್ರಾಂತಿ: ಖರ್ಚು ಅರ್ಧ, ಇಳುವರಿ ಭರ್ಜರಿ!



























