SK Home Ad
Home ಸಿನಿ ಮಿಲ್ಸ್ ಇಡೀ ಸೀಸನ್ ನಾಮಿನೇಷನ್ ಶಿಕ್ಷೆಯನ್ನು ಗಗನ್‌ಗೆ ವರ್ಗಾಯಿಸಿದ ಯಶಸ್; ಸುದೀಪ್ ಮುಂದೆ ಖಡಕ್ ತಿರುಗೇಟು!

ಇಡೀ ಸೀಸನ್ ನಾಮಿನೇಷನ್ ಶಿಕ್ಷೆಯನ್ನು ಗಗನ್‌ಗೆ ವರ್ಗಾಯಿಸಿದ ಯಶಸ್; ಸುದೀಪ್ ಮುಂದೆ ಖಡಕ್ ತಿರುಗೇಟು!

0
40

BBK13: ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ಅನಿರೀಕ್ಷಿತ ತಿರುವುಗಳು ಮುಂದುವರಿದಿದ್ದು, ಇಡೀ ಸೀಸನ್‌ಗೆ ನಾಮಿನೇಟ್ ಆಗಿದ್ದ ಯಶಸ್ ಇದೀಗ ಆ ನಾಮಿನೇಷನ್ ಶಿಕ್ಷೆಯನ್ನು ಗಗನ್ ಅವರಿಗೆ ವರ್ಗಾಯಿಸುವ ಮೂಲಕ ಭರ್ಜರಿ ತಿರುಗೇಟು ನೀಡಿದ್ದಾರೆ. ಈ ಹಿಂದೆ ಬಿಗ್ ಬಾಸ್ ನೀಡಿದ್ದ ವಿಶೇಷ ಅಧಿಕಾರವನ್ನು ಬಳಸಿಕೊಂಡು ಗಗನ್ ಅವರು ಯಶಸ್ ಅವರನ್ನು ಇಡೀ ಸೀಸನ್‌ಗೆ ನಾಮಿನೇಟ್ ಮಾಡಿದ್ದರು. ಇದರಿಂದ ಯಶಸ್ ತೀವ್ರ ಆತಂಕಕ್ಕೆ ಒಳಗಾಗಿದ್ದರು. ಆದರೆ, ಈ ವಾರ ನಡೆದ ‘ಗುಳ್ಳೆನರಿ’ ಸೀಕ್ರೆಟ್ ಟಾಸ್ಕ್‌ನಲ್ಲಿ ಯಶಸ್ ಗೆಲುವು ಸಾಧಿಸಿದ ಫಲವಾಗಿ, ತಮ್ಮ ಮೇಲಿರುವ ಇಡೀ ಸೀಸನ್ ನಾಮಿನೇಷನ್ ಅನ್ನು ಬೇರೊಬ್ಬರಿಗೆ ಹಸ್ತಾಂತರಿಸುವ ಅಥವಾ ತಾವೇ ಉಳಿಸಿಕೊಳ್ಳುವ ವಿಶೇಷ ಅವಕಾಶ ದೊರಕಿತು.

ವೀಕೆಂಡ್ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಈ ವಿಚಾರವನ್ನು ಪ್ರಸ್ತಾಪಿಸಿ, ನಾಮಿನೇಷನ್ ಹಸ್ತಾಂತರಿಸಬಹುದು ಅಥವಾ ತಾವೇ ಇಟ್ಟುಕೊಳ್ಳಬಹುದು ಎಂದು ತಿಳಿಸಿ, ನಿರ್ಧಾರ ಪ್ರಕಟಿಸಲು 30 ಸೆಕೆಂಡ್‌ಗಳ ಕಾಲಾವಕಾಶ ನೀಡಿದರು. ಸುದೀಪ್ ಮಾತು ಮುಗಿಯುತ್ತಿದ್ದಂತೆಯೇ ಯಶಸ್ ಕ್ಷಣಾರ್ಧದಲ್ಲಿ ಪ್ರತಿಕ್ರಿಯಿಸಿ, “ನಾನು ಇದನ್ನು ಗಗನ್ ಅವರಿಗೆ ಹಸ್ತಾಂತರ ಮಾಡುತ್ತೇನೆ. ನನಗೆ ಇದನ್ನು ಕೊಟ್ಟಿದ್ದು ಅವರೇ, ಹಾಗಾಗಿ ಅವರಿಗೇ ಮರಳಿಸುತ್ತಿದ್ದೇನೆ. ಅವರು ನೀಡಿದ ಕಾರಣಗಳೇ ನನ್ನವು ಕೂಡ” ಎಂದು ಖಡಕ್ ಆಗಿ ಹೇಳಿದರು.

ಯಶಸ್ ಅವರ ಈ ದಿಢೀರ್ ನಿರ್ಧಾರದಿಂದ ಗಗನ್ ಪೆಚ್ಚಾಗಿದ್ದು, ಇತ್ತೀಚೆಗೆ ಗಗನ್ ಆಡಿದ ಮಾತುಗಳಿಗೂ ಇದು ತಕ್ಕ ಪ್ರತ್ಯುತ್ತರವಾದಂತಾಗಿದೆ. ಮುಂದಿನ ದಿನಗಳಲ್ಲಿ ಈ ನಾಮಿನೇಷನ್ ವರ್ಗಾವಣೆ ಬಿಗ್ ಬಾಸ್ ಮನೆಯ ಆಟದ ಲೆಕ್ಕಾಚಾರವನ್ನು ಯಾವ ರೀತಿ ಬದಲಾಯಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.