SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಹೊಳೆಸಿರಿಗೆರೆ ಪಿಎಸಿಎಸ್ ಆಡಳಿತ ಮಂಡಳಿ ಚುನಾವಣೆ ರದ್ದು

ಹೊಳೆಸಿರಿಗೆರೆ ಪಿಎಸಿಎಸ್ ಆಡಳಿತ ಮಂಡಳಿ ಚುನಾವಣೆ ರದ್ದು

0
1

ದಾವಣಗೆರೆ: ಕಾನೂನುಬದ್ಧ ನಿಯಮಗಳನ್ನು ಪಾಲಿಸದೆ ನಡೆಸಲಾಗಿದೆ ಎಂಬ ಕಾರಣಕ್ಕೆ ಜಿಲ್ಲೆಯ ಹರಿಹರ ತಾಲ್ಲೂಕಿನ ಹೊಳೆಸಿರಿಗೆರೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಪಿಎಸಿಎಸ್) ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯನ್ನು ದಾವಣಗೆರೆ ಸಹಕಾರ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯ ರದ್ದುಗೊಳಿಸಿ ಆದೇಶಿಸಿದೆ.

ನವೆಂಬರ್ 19ರಂದು ಹೊರಡಿಸಿರುವ ಆದೇಶದಲ್ಲಿ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರ ಅವಿರೋಧ ಆಯ್ಕೆಯ ಫಲಿತಾಂಶವನ್ನು ಅಸಿಂಧು ಎಂದು ಘೋಷಿಸಲಾಗಿದೆ.

ಹೊಳೆಸಿರಿಗೆರೆ ಪಿಎಸಿಎಸ್ ಸದಸ್ಯ ಎಸ್. ಅಂಜನ್ ಕುಮಾರ್ (ಹನುಮಂತಪ್ಪ ಕಡೇಮನೆ ಅವರ ಪುತ್ರ) ಅವರು ಹೊಂದಿದ್ದ ಷೇರು ಮೊತ್ತದಲ್ಲಿ ವ್ಯತ್ಯಾಸವಿದ್ದ ಹಿನ್ನೆಲೆಯಲ್ಲಿ, ಬಾಕಿ ಮೊತ್ತ ಪಾವತಿಸುವಂತೆ ಅವರಿಗೆ ನಿಯಮಾನುಸಾರ ನೋಂದಾಯಿತ ಅಂಚೆ ಮೂಲಕ ನೋಟಿಸ್ ನೀಡಬೇಕಿತ್ತು. ಆದರೆ, ಸಂಘದ ಕಾರ್ಯದರ್ಶಿ ಅಂಜನ್ ಕುಮಾರ್ ಅವರಿಗೆ ನೋಟಿಸ್ ನೀಡದೆ, ಅವರ ಸಂಬಂಧಿಕರಿಗೆ ನೋಟಿಸ್ ಜಾರಿ ಮಾಡಿದ್ದರು ಎನ್ನಲಾಗಿದೆ.

ನಂತರ ಷೇರು ಮೊತ್ತದ ವ್ಯತ್ಯಾಸವನ್ನು ಪಾವತಿಸಿಲ್ಲ ಎಂಬ ಕಾರಣ ನೀಡಿ ಅಂಜನ್ ಕುಮಾರ್ ಅವರ ಹೆಸರನ್ನು ಅನರ್ಹ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಇದರಿಂದ ಅವರು ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕಿನಿಂದ ವಂಚಿತರಾಗಿದ್ದರು. ಬಳಿಕ ಸಂಘದ ಆಡಳಿತ ಮಂಡಳಿಯ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು.

ಈ ಕ್ರಮವನ್ನು ಪ್ರಶ್ನಿಸಿ ಅಂಜನ್ ಕುಮಾರ್ ಅವರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯದಲ್ಲಿ ಚುನಾವಣಾ ವಿವಾದ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು, ಸಹಕಾರ ಸಂಘಗಳ ಕಾಯ್ದೆಯ ಕಲಂ 13(ಡಿ)(2)(ಎ)(ii) ಸೇರಿದಂತೆ ಸಂಬಂಧಿತ ಕಾನೂನು ನಿಯಮಗಳನ್ನು ಸಂಘವು ಪಾಲಿಸಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ ಚುನಾವಣೆಯನ್ನು ರದ್ದುಗೊಳಿಸಿ, ಅವಿರೋಧ ಆಯ್ಕೆಯ ಫಲಿತಾಂಶವನ್ನು ಅಸಿಂಧುಗೊಳಿಸಿದೆ.

ಅರ್ಜಿದಾರ ಅಂಜನ್ ಕುಮಾರ್ ಪರವಾಗಿ ದಾವಣಗೆರೆಯ ಜನತಾ ಬಜಾರ್‌ನ ಟಿ.ಆರ್.ಎಸ್. ಲಾ ಅಸೋಸಿಯೇಟ್ಸ್‌ನ ವಕೀಲರಾದ ತಿಮ್ಮಲಾಪುರದ ರವಿಶಂಕರ್, ಶಿವಯೋಗಿ ಕುಸಗೂರು, ರೂಪವಾಣಿ ಪಿ., ಸುಕನ್ಯ ಟಿ.ಎಂ., ನಾಗವೇಣಿ ಎಂ.ಎನ್. ಹಾಗೂ ಅರವಿಂದ ಬಿ.ಆರ್. ವಾದ ಮಂಡಿಸಿದ್ದರು.