ಬೆಂಗಳೂರು: ‘ಕರಿಮಣಿ’ಧಾರಾವಾಹಿ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 12 ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ ತಮ್ಮ ಬಹುಕಾಲದ ಗೆಳೆಯ ವರುಣ್ ಮುನಿರಾಜ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ,ನವೆಂಬರ್ 29 ಬೆಳಗಿನ ಶುಭ ಮುಹೂರ್ತದಲ್ಲಿ ಮೈಸೂರಿನ ಖಾಸಗಿ ರೆಸಾರ್ಟ್ವೊಂದರಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ಸಮಾರಂಭ ನೆರವೇರಿದೆ. ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ, ಕುಟುಂಬಸ್ಥರು, ಆಪ್ತರು ಹಾಗೂ ಕಿರುತೆರೆ ಗಣ್ಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದು, ಬಿಗ್ ಬಾಸ್ ಸ್ನೇಹಿತರಾದ ಗಿಲ್ಲಿ ನಟ, ಕಾವ್ಯಾ, ರಘು ಸೇರಿದಂತೆ ಹಲವರು ಮದುವೆಯಲ್ಲಿ ಭಾಗಿಯಾಗಿ ನವದಂಪತಿಗೆ ಶುಭ ಹಾರೈಸಿದ್ದಾರೆ.
ವಿವಾಹದ ವೇಳೆ ಕೆಂಪು ಮತ್ತು ಹಾಫ್ ವೈಟ್ ಶೇಡ್ನ ಬಂಗಾರದ ಜರಿ ಸೀರೆ ತೊಟ್ಟು, ಅದರ ಮೇಲೆ ಮದುವೆ ದಿನಾಂಕ ಮತ್ತು ಹೆಸರು ಕಸೂತಿ ಮಾಡಿಸಿದ ನೆಟ್ ದುಪ್ಪಟ್ಟಾ ಧರಿಸಿದ್ದ ಸ್ಪಂದನಾ ಸೋಮಣ್ಣ ಅವರ ಲುಕ್ಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಆರತಕ್ಷತೆ ಲುಕ್ ಕುರಿತು ಕೆಲವು ಟೀಕೆಗಳು ಕೇಳಿಬಂದಿದ್ದರೂ, ಧಾರೆ ಸೀರೆಯಲ್ಲಿ ಸ್ಪಂದನಾ ಅವರು ಅತ್ಯಂತ ಸುಂದರವಾಗಿ ಕಾಣುತ್ತಿದ್ದಾರೆ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ. ತಾಳಿ ಕಟ್ಟುವ ವೇಳೆ ಸ್ಪಂದನಾ ಅವರು ಭಾವುಕರಾಗಿ ಕಾಣಿಸಿಕೊಂಡಿದ್ದು, ವಧು-ವರರ ಸಂತಸದ ಕ್ಷಣಗಳು ಗಮನ ಸೆಳೆದಿವೆ.
ನಟಿ ಸ್ಪಂದನಾ ಅವರು ಬಣ್ಣದ ಲೋಕಕ್ಕೆ ಬರುವ ಮೊದಲು ವರುಣ್ ಅವರಿಗೆ ಬೆಂಬಲವಾಗಿ ನಿಂತಿದ್ದರೆನ್ನಲಾಗಿದ್ದು, ಇಬ್ಬರ ನಡುವಿನ ಆತ್ಮೀಯತೆ ಗಟ್ಟಿಯಾಗಿದೆ. ವರುಣ್ ಮುನಿರಾಜ್ ಅವರು ನೆದರ್ಲ್ಯಾಂಡ್ಸ್ನಲ್ಲಿ ಉದ್ಯೋಗದಲ್ಲಿರುವ ಕಾರಣ, ಮದುವೆ ಬಳಿಕ ಕೆಲಕಾಲ ಅಲ್ಲಿಯೇ ನೆಲೆಸುವ ಸಾಧ್ಯತೆಯಿದೆ.






















