ತಂದೆಯಂತೆ ಜಡ್ಜ್ ಆಗುವ ಕನಸು ಕಂಡಿದ್ದ ವಕೀಲ ಸುಧೀರ್ ಇನ್ನಿಲ್ಲ; ಮದುವೆ ಮನೆಯಲ್ಲಿ ಸೂತಕ
ದಾವಣಗೆರೆ: ಉತ್ತರಾಖಂಡದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದು, ಅವರಲ್ಲಿ ಐವರು ಕರ್ನಾಟಕದವರು ಎಂಬ ಮಾಹಿತಿ ಕುಟುಂಬಗಳ ದುಃಖವನ್ನು ಮತ್ತಷ್ಟು ಹೆಚ್ಚಿಸಿದೆ. ಮೃತರಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತ್ಯಾವಣಿಗೆ ಗ್ರಾಮದ ಕಾಕನೂರು ಕುಟುಂಬದ ಸುಧೀರ್ (49) ಕೂಡ ಸೇರಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿದ್ದ ಅವರು ಬೆಂಗಳೂರಿನಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ನೆಲೆಸಿದ್ದರು.
ಉತ್ತರಾಖಂಡ ಪ್ರವಾಸ ಮುಗಿಸಿ ಸ್ವಗ್ರಾಮಕ್ಕೆ ಮರಳಿ ಚಿಕ್ಕಪ್ಪನ ಮಗನ ಮದುವೆಯಲ್ಲಿ ಭಾಗವಹಿಸುವ ಯೋಜನೆ ಸುಧೀರ್ ಅವರದ್ದಾಗಿತ್ತು. ಶನಿವಾರ ಮತ್ತು ಭಾನುವಾರ ನಡೆಯಬೇಕಿದ್ದ ಮದುವೆಗೆ ಕುಟುಂಬದಲ್ಲಿ ಸಿದ್ಧತೆಗಳೂ ನಡೆದಿದ್ದವು. ಆದರೆ ಮದುವೆಯ ಸಂಭ್ರಮದ ನಡುವೆ ಬಂದ ಅವರ ಸಾವಿನ ಸುದ್ದಿ ಕುಟುಂಬಸ್ಥರಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ. ಮದುವೆ ಮನೆಯಲ್ಲಿ ಸಂತೋಷದ ವಾತಾವರಣ ಕ್ಷಣಾರ್ಧದಲ್ಲಿ ಶೋಕಕ್ಕೆ ತಿರುಗಿದೆ.
ತಂದೆಯಂತೆ ನ್ಯಾಯಾಧೀಶರಾಗುವ ಕನಸು ಕಂಡಿದ್ದ ಸುಧೀರ್ : ತ್ಯಾವಣಿಗೆ ಗ್ರಾಮದಲ್ಲಿ ಕಾಕನೂರು ಕುಟುಂಬವು ವಿದ್ಯಾವಂತ ಕುಟುಂಬವೆಂದೇ ಗುರುತಿಸಿಕೊಂಡಿದೆ. ಈ ಕುಟುಂಬದಲ್ಲಿ ವೈದ್ಯರು, ವಕೀಲರು ಹಾಗೂ ನ್ಯಾಯಾಧೀಶರು ಸೇರಿದಂತೆ ಹಲವು ಮಂದಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸುಧೀರ್ ಅವರ ತಂದೆ ಮಲ್ಲೇಶಪ್ಪ ಅವರು ನ್ಯಾಯಾಧೀಶರಾಗಿದ್ದರು. ತಂದೆಯ ಹಾದಿಯಲ್ಲೇ ಸಾಗಬೇಕೆಂಬ ಆಸೆಯಿಂದ ಸುಧೀರ್ ಕೂಡ ನ್ಯಾಯಾಧೀಶರಾಗುವ ಕನಸು ಕಂಡಿದ್ದರು. ಆದರೆ ವಕೀಲ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಕಾನೂನು ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಬೆಂಗಳೂರಿನಲ್ಲಿ ನೆಲೆಸಿದ್ದರೂ ಸುಧೀರ್ ಅವರು ತಮ್ಮ ಸ್ವಗ್ರಾಮದೊಂದಿಗಿನ ನಂಟನ್ನು ಉಳಿಸಿಕೊಂಡಿದ್ದರು. ಹಬ್ಬ-ಹರಿದಿನಗಳು ಹಾಗೂ ಕುಟುಂಬದ ವಿಶೇಷ ಕಾರ್ಯಕ್ರಮಗಳ ಸಂದರ್ಭದಲ್ಲಿ ತ್ಯಾವಣಿಗೆಗೆ ಭೇಟಿ ನೀಡುತ್ತಿದ್ದರು. ಇತ್ತೀಚೆಗೆ ಮಹಾಲಯ ಅಮಾವಾಸ್ಯೆಯ ಸಂದರ್ಭದಲ್ಲಿಯೂ ಗ್ರಾಮಕ್ಕೆ ಬಂದು ಹೋಗಿದ್ದರು. ಗ್ರಾಮದಲ್ಲಿ ಬಡವರ ಪ್ರಕರಣಗಳಿಗೆ ನ್ಯಾಯ ದೊರಕಿಸಿಕೊಡಲು ಅವರು ಪ್ರಯತ್ನಿಸುತ್ತಿದ್ದರು ಎಂಬುದು ಸ್ಥಳೀಯರ ನೆನಪು.
ಉತ್ತರಾಖಂಡದಲ್ಲಿ ನಡೆದ ಅಪಘಾತವೇನು? : ಅಕ್ಟೋಬರ್ 30ರಂದು ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಕಣಿವೆ ಸಮೀಪ ಈ ದುರಂತ ಸಂಭವಿಸಿದೆ. ಬದರಿನಾಥದಿಂದ ಡೆಹ್ರಾಡೂನ್ನ ಸಹಸ್ತ್ರಧಾರಾ ಹೆಲಿಪ್ಯಾಡ್ಗೆ ತೆರಳುತ್ತಿದ್ದ ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಯ ಹೆಲಿಕಾಪ್ಟರ್ ಮಧ್ಯಾಹ್ನ ಸುಮಾರು 2 ಗಂಟೆಯ ವೇಳೆಗೆ ಹಾಥಿ ಪರ್ವತ ಪ್ರದೇಶದ ಸಮೀಪ ಪತನಗೊಂಡಿತ್ತು. ಹೆಲಿಕಾಪ್ಟರ್ನಲ್ಲಿ ಐವರು ಪ್ರಯಾಣಿಕರು ಹಾಗೂ ಒಬ್ಬ ಪೈಲಟ್ ಇದ್ದರು. ಅಪಘಾತದಲ್ಲಿ ಎಲ್ಲ ಆರು ಮಂದಿ ಮೃತಪಟ್ಟಿದ್ದಾರೆ.
ಮೃತರಾದ ಐವರು ಕರ್ನಾಟಕದವರಾಗಿದ್ದು, ಅವರಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಅರುಣ್ ಸಾಲುಂಕೆ, ವಕೀಲರಾದ ಶಂಕರ್ ಗೌಡ ಮತ್ತು ಸುಧೀರ್ ಕೆ., ಹಾಸನದ ಉದ್ಯಮಿ ಪ್ರತಾಪ್ ಹಾಗೂ ತುಮಕೂರಿನ ಎಚ್.ಎಸ್. ನಟರಾಜು ಸೇರಿದ್ದಾರೆ. ಆರನೇ ವ್ಯಕ್ತಿ ಹೆಲಿಕಾಪ್ಟರ್ ಪೈಲಟ್ ಕ್ಯಾಪ್ಟನ್ ಹಿಮಾಂಶು ಎಂದು ವರದಿಗಳು ತಿಳಿಸಿವೆ.
ಮೃತದೇಹಗಳ ಪತ್ತೆ – ತನಿಖೆ ಆರಂಭ : ಅಪಘಾತದ ಬಳಿಕ ಭಾರತೀಯ ಸೇನೆ, ಎಸ್ಡಿಆರ್ಎಫ್, ಐಟಿಬಿಪಿ, ಪೊಲೀಸರು ಹಾಗೂ ಜಿಲ್ಲಾಡಳಿತದ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದವು. ಪ್ರತಿಕೂಲ ಹವಾಮಾನ, ಕಠಿಣ ಭೂಪ್ರದೇಶ ಹಾಗೂ ಕತ್ತಲೆಯಿಂದಾಗಿ ಕಾರ್ಯಾಚರಣೆಗೆ ಅಡಚಣೆ ಉಂಟಾಗಿತ್ತು. ಅಕ್ಟೋಬರ್ 31ರ ಬೆಳಿಗ್ಗೆ ವೇಳೆಗೆ ಪೈಲಟ್ ಸೇರಿದಂತೆ ಆರು ಮಂದಿಯ ಮೃತದೇಹಗಳನ್ನು ಪತ್ತೆಹಚ್ಚಿ ಹೊರತೆಗೆಯಲಾಗಿದೆ ಎಂದು ಕರ್ನಾಟಕ ಸರ್ಕಾರದ ಪ್ರಕಟಣೆ ತಿಳಿಸಿದೆ. ಮರಣೋತ್ತರ ಪರೀಕ್ಷೆ ಸೇರಿದಂತೆ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಮೃತದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲು ಕರ್ನಾಟಕ ಮತ್ತು ಉತ್ತರಾಖಂಡ ಸರ್ಕಾರಗಳು ಸಮನ್ವಯ ಸಾಧಿಸಿವೆ.
ಅಪಘಾತದ ನಿಖರ ಕಾರಣ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ. ವಿಮಾನಯಾನ ಅಪಘಾತ ತನಿಖಾ ಬ್ಯೂರೋ (AAIB) ತಂಡವೂ ಪರಿಶೀಲನೆ ನಡೆಸಲು ಮುಂದಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಪಘಾತಕ್ಕೀಡಾದ ಹೆಲಿಕಾಪ್ಟರ್ ನಿರ್ವಹಿಸುತ್ತಿದ್ದ ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಯ ಸಂಪೂರ್ಣ ಹೆಲಿಕಾಪ್ಟರ್ಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಮದುವೆ ಮನೆಯಲ್ಲೀಗ ಸೂತಕದ ವಾತಾವರಣ : ಚಿಕ್ಕಪ್ಪನ ಮಗನ ಮದುವೆಗೆಂದು ಸ್ವಗ್ರಾಮಕ್ಕೆ ಬರಬೇಕಿದ್ದ ಸುಧೀರ್ ಅವರೇ ಈಗ ಇಲ್ಲವಾಗಿರುವುದು ಕುಟುಂಬಸ್ಥರನ್ನು ದಿಕ್ಕೆಟ್ಟಿಸಿದೆ. ಮದುವೆ ಸಂಭ್ರಮಕ್ಕೆ ಸಿದ್ಧವಾಗಿದ್ದ ಮನೆಗೆ ದುಃಖದ ಸುದ್ದಿ ಅಪ್ಪಳಿಸಿದೆ. ಸುಧೀರ್ ಅವರ ಮೃತದೇಹವನ್ನು ತರಲು ಕುಟುಂಬದವರು ಉತ್ತರಾಖಂಡದ ಡೆಹ್ರಾಡೂನ್ಗೆ ತೆರಳಿದ್ದಾರೆ ಎಂದು ಸಂಬಂಧಿ ಜಗದೀಶ್ ತಿಳಿಸಿದ್ದಾರೆ.
ಸುಧೀರ್ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ತ್ಯಾವಣಿಗೆ ಗ್ರಾಮದಲ್ಲೇ ನಡೆಸಬೇಕೇ ಅಥವಾ ಬೆಂಗಳೂರಿನಲ್ಲಿ ನೆರವೇರಿಸಬೇಕೇ ಎಂಬುದರ ಕುರಿತು ಕುಟುಂಬಸ್ಥರು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಅವರ ಅಕಾಲಿಕ ನಿಧನದಿಂದ ತ್ಯಾವಣಿಗೆ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಬಂಧುಗಳು, ಸ್ನೇಹಿತರು ಹಾಗೂ ಗ್ರಾಮಸ್ಥರು ಕಂಬನಿ ಮಿಡಿಯುತ್ತಿದ್ದಾರೆ.
- ಕಾಂಗ್ರೆಸ್ನಿಂದ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಯತ್ನ
- ಕಾಶ್ಮೀರ ಸಿಎಂಗೆ ಎರಡನೇ ಮದುವೆ: ಪತ್ರಕರ್ತೆ ನಿಧಿ ರಾಜ್ದಾನ್ ಕೈಹಿಡಿದ ಒಮರ್ ಅಬ್ದುಲ್ಲಾ
- ಕಾರವಾರ ಬಂದರಿನಲ್ಲಿ ಮತ್ತೆ ವಿಷಾನಿಲ ದುರಂತ: ಇಬ್ಬರು ಮೀನುಗಾರಿಕಾ ಕಾರ್ಮಿಕರು ಸಾವು, ಐವರು ಅಸ್ವಸ್ಥ
- ಮೀಸಲಾತಿ ಕಾಯ್ದೆ ರದ್ದು: ಮೋದಿ ಮೇಲೆ ಗೂಬೆ ಕೂರಿಸುವುದೇಕೆ?
- ಹಾಲು, ಮೊಸರು ದರ ಏರಿಕೆ: ಕಾಂಗ್ರೆಸ್ ಸರ್ಕಾರದ ದೀಪಾವಳಿ ಉಡುಗೊರೆ



















