ದಾವಣಗೆರೆ(ಹರಿಹರ): ‘ಶ್ರೀರಾಮ ದಶರಥನ ಮಗ ಅಲ್ಲ’ ಎಂದು ಭಾರತೀಯ ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಬಗ್ಗೆ ಮತ್ತೊಮ್ಮೆ ಪ್ರೊ.ಕೆ.ಎಸ್.ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದ ಹೊರವಲಯದಲ್ಲಿರುವ ಬಿ. ಕೃಷ್ಣಪ್ಪ ಮೈತ್ರಿವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ದಲಿತ ಹೋರಾಟಗಾರ ಪ್ರೊ. ಬಿ.ಕೃಷ್ಣಪ್ಪ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೀವೆಲ್ಲರೂ ಪೂಜೆ ಮಾಡುವ ಶ್ರೀರಾಮ ದಶರಥನಿಗೆ ಹುಟ್ಟಿದವ ಅಲ್ಲ. ರಾಮನ ತಂದೆ ದಶರಥ ಪುತ್ರಕಾಮೇಷ್ಠಿ ಪೂಜೆ ಮಾಡುತ್ತಾನೆ. ಆಗ ಹುಟ್ಟಿದವ ಎನ್ನುತ್ತಾರೆ. ಇದನ್ನು ರಾಮ ಮಂದಿರ ಏಕೆ ಬೇಕು? ಎನ್ನುವ ಪುಸ್ತಕದಲ್ಲಿ ನಾನು ಬರೆದಿದ್ದು, ವಾಲ್ಮೀಕಿ ರಾಮಾಯಣದಲ್ಲಿಯೂ ಇದರ ಬಗ್ಗೆ ಉಲ್ಲೇಖ ಇರುವುದಾಗಿ ಪ್ರೊ. ಭಗವಾನ್ ಹೇಳಿದರು. ಹೀಗಾಗಿಯೇ ರಾಮ ತನ್ನ ತಂದೆಗೆ ಹುಟ್ಟಿದ ವ್ಯಕ್ತಿಯಲ್ಲ ಎಂಬ ಅಂಶ ವಾಲ್ಮೀಕಿ ರಾಮಾಯಣದಲ್ಲಿ ನಮೂದಾಗಿದೆ ಎಂದರು.
ಈ ಧರ್ಮವಿದ್ದರೆ ನಮ್ಮ ಬೇಳೆಕಾಳು ಬೇಯುವುದಿಲ್ಲ, ಶೂದ್ರ ಸಮುದಾಯದವರ ಶೋಷಣೆ ಮಾಡಲಾಗುವುದಿಲ್ಲ ಎಂದು ಬ್ರಾಹ್ಮಣ ಸಮುದಾಯದ ಪುರೋಹಿತಶಾಹಿಗಳು ಈ ಧರ್ಮ ನಾಶಪಡಿಸಿದರು ಎಂದು ಆರೋಪಿಸಿದರು.






















