SK Home Ad
Home ನಮ್ಮ ಜಿಲ್ಲೆ ಬಳ್ಳಾರಿ ನೇಣು ಬಿಗಿದ ಸ್ಥಿತಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಶವ ಪತ್ತೆ

ನೇಣು ಬಿಗಿದ ಸ್ಥಿತಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಶವ ಪತ್ತೆ

0
53

ಬಳ್ಳಾರಿ: ನಗರದ ಕೊಳಗಲ್ ರಸ್ತೆಯ ಖಾಸಗಿ ಪಿಜಿ ಸೆಂಟರ್‌ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿವೆ.

ಸಿರುಗುಪ್ಪ ತಾಲೂಕಿನ ಟಿ. ರಾಂಪುರ ಗ್ರಾಮದ ವಿಶ್ವಾಸ್ (24) ಮೃತ ವಿದ್ಯಾರ್ಥಿ. ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಎರಡನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತ ಪಿಜಿಯಲ್ಲಿ ವಾಸವಾಗಿದ್ದ. ಸೋಮವಾರ ರಾತ್ರಿ ಪಿಜಿಯ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ತಲೆ, ಕಣ್ಣು ಹಾಗೂ ಎದೆ ಭಾಗದಲ್ಲಿ ಗಾಯ ಮತ್ತು ರಕ್ತದ ಕಲೆ ಕಂಡುಬಂದಿರುವುದು ಸಂಶಯ ಮೂಡಿಸಿದೆ. ಕೊಲೆ ಆಗಿರಬಹುದು ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಆಗಮಿಸುವ ಮುನ್ನವೇ ಮೃತದೇಹ ಕೆಳಗಿಳಿಸಲಾಗಿತ್ತು. ಪಿಜಿಯಲ್ಲಿದ್ದ ವಿದ್ಯಾರ್ಥಿಗಳು ಸ್ಥಳದಿಂದ ಕಾಲ್ಕಿತ್ತಿದ್ದು, ಪಿಜಿ ಮಾಲೀಕರೂ ಇಲ್ಲ. ಕೌಲಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ವಿದ್ಯಾರ್ಥಿಯ ಸಾವಿಗೆ ಮುನ್ನ ಯಾವುದೇ ಗಲಾಟೆ ನಡೆದಿತ್ತೆ, ಸಹಪಾಠಿಗಳು ಅಥವಾ ಇತರರೊಂದಿಗೆ ವೈಮನಸ್ಸು ಇತ್ತೆ ಎಂಬ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.