ದಾವಣಗೆರೆ: ಆಂತರೀಕ ಕಚ್ಚಾಟದಿಂದ ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿದ್ದು, ಶೀಘ್ರದಲ್ಲಿಯೇ ಕಾಂಗ್ರೆಸ್ ಸರ್ಕಾರ ಪತನ ಆಗಲಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಭವಿಷ್ಯ ನುಡಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಕುರ್ಚಿಗಾಗಿ ಕಾದಾಡುತ್ತಿದ್ದಾರೆ. ಸಿಎಂ ಮತ್ತು ಡಿಸಿಎಂ ಬಣ ಇತ್ತು. ಈಗ ಸುಮಾರು ಬಣಗಳಾಗಿ ದೊಡ್ಡ ಸಂಘರ್ಷವೇ ನಡೆಯುತ್ತಿದೆ ಎಂದರು.
ಕೆಲವರು ಉಚ್ಚಾಟನೆಯಿಂದ ಒಂದು ಬಣ ಸರ್ಕಾರದ ವಿರುದ್ಧವೇ ತಿರುಗಿ ಬಿದ್ದರೆ, ಸಿಎಂ ಆಪ್ತ ಕೆ.ಎನ್.ರಾಜಣ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕಲು ಮಾಟ-ಮಂತ್ರ ಮಾಡಿಸಿದ್ದಾರೆ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ಒಟ್ಟಾರೆ ಕಾಂಗ್ರೆಸ್ ನಾಯಕರಲ್ಲಿಯೇ ಟೀಕೆ ಮಾಡುವುದು ಜೋರಾಗಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ಬಹಳ ದಿನ ಉಳಿಯುವುದು ಕಷ್ಟವಾಗಿದೆ ಎಂದು ತಿಳಿಸಿದರು.
ಖರ್ಗೆ ಪ್ರಧಾನಿ ಕ್ಷಮೆ ಕೇಳಲಿ: ಪ್ರಧಾನಿ ಮೋದಿ ಒಬ್ಬ ಭಯೋತ್ಪಾದಕ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು, ಕೂಡಲೇ ಪ್ರಧಾನಿ ನರೇಂದ್ರ ಮೋದಿಯವರನ್ನು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ ಎಂ.ಪಿ.ರೇಣುಕಾಚಾರ್ಯ, ಮಲ್ಲಿಕಾರ್ಜುನ್ ಖರ್ಗೆ ಅವರು ಪ್ರಬುದ್ಧ ರಾಜಕಾರಣಿ. ಅವರ ಬಾಯಲ್ಲಿ ಇಂತಹ ಹೇಳಿಕೆಗಳು ಬರುತ್ತವೆ ಎಂದು ಯೋಚಿಸಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯುತ್ ದರ ಏರಿಕೆ ಹಿಂಪಡೆಯಬೇಕು: 2026ರ ಮೇ.1ರಿಂದ ಪೂರ್ವಾನ್ವಯವಾಗುವಂತೆ ಪ್ರತಿ ಯೂನಿಟ್‌ಗೆ 59 ಪೈಸೆ ಹೆಚ್ಚಳ ಮಾಡಿರುವುದನ್ನು ಕಾಂಗ್ರೆಸ್ ಸರ್ಕಾರ ಕೂಡಲೇ ಹಿಂಪಡೆಯಬೇಕು. 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡ್ತಿವಿ ಎಂದು ಬಣ್ಣ ಬಣ್ಣದ ಮಾತಾಡಿ, ಜನರನ್ನು ನಂಬಿಸಿ ಈಗ ಈಗ ಪದೇ ಪದೇ ವಿದ್ಯತ್ ದರ ಏರಿಸುವ ಮೂಲಕ ಜನರ ಜೇಬಿಗೆ ಕನ್ನ ಹಾಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಬಸವರಾಜ್ ನಾಯ್ಕ್, ಪಾಲಿಕೆ ಮಾಜಿ ಮೇಯರ್ ಬಿ.ಜೆ.ಅಜಯ್‌ಕುಮಾರ್, ಪ್ರವೀಣ್ ಜಾಧವ್, ಚೇತನ್‌ಕುಮಾರ್, ರಾಜು ವೀರಣ್ಣ, ಪಂಜು ಫೈಯಾಜ್, ಎಂ.ಜಿ.ಬಸವರಾಜ್ ಕಡ್ಲೇಬಾಳು, ಧನಂಜಯ ಕಡ್ಲೇಬಾಳು ಇದ್ದರು.






















