SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಜಮೀರ್ ಆಡಿಯೋ ಮೂಲ ಪತ್ತೆಗೆ ಮುಂದಾದ ಪೊಲೀಸ್‌: ಸಿರಾಜ್‌ಗೆ ನೋಟಿಸ್

ಜಮೀರ್ ಆಡಿಯೋ ಮೂಲ ಪತ್ತೆಗೆ ಮುಂದಾದ ಪೊಲೀಸ್‌: ಸಿರಾಜ್‌ಗೆ ನೋಟಿಸ್

0
5

ದಾವಣಗೆರೆ: ಜಮೀರ್ ಅಹಮ್ಮದ್ ಖಾನ್ ಅವರದ್ದು ಎನ್ನಲಾದ ಆಡಿಯೋ ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿಸಿದ್ದು, ಈ ಸಂಬಂಧ ಇದೀಗ ದಾವಣಗೆರೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಪ್ರಕರಣದ ಗಂಭೀರತೆ ಅರಿತ ಪೊಲೀಸರು, ಕಾಂಗ್ರೆಸ್‌ನಿಂದ ಉಚ್ಚಾಟನೆಗೊಂಡಿರುವ ಮೊಹಮ್ಮದ್ ಸಿರಾಜ್ ಅವರು ನೀಡಿದ ದೂರಿನ ಮೇರೆಗೆ BNS 2023ರ ಅನ್ವಯ 336(2), 336(4), 318(2), 340(2), 351(2) ಐಟಿ ಆ್ಯಕ್ಟ್ 2000 ಅನ್ವಯ U/S 66, 66(C), 66(D) ಅನ್ವಯ ಎಫ್ಐಆರ್ ದಾಖಲಾಗಿದ್ದು, ದೂರುದಾರ ಮೊಹಮ್ಮದ್ ಸಿರಾಜ್‌ಗೆ ಸಿಇಎನ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ಮೊಹಮ್ಮದ್ ಸಿರಾಜ್, ಇದ್ದಕ್ಕಿದ್ದಂತೆ ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದಾರೆ.

ಮೊಹಮ್ಮದ್ ಸಿರಾಜ್ ನೀಡಿದ ದೂರಿನ ಮೇರೆಗೆ ದಾವಣಗೆರೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಇದೀಗ ಪೊಲೀಸರು ಆಡಿಯೋ ಮೂಲ ಪತ್ತೆಗೆ ಮುಂದಾಗಿದ್ದಾರೆ. ಇದಕ್ಕೆ ಪೂರಕವೆಂಬಂತೆ ಮೊಲದ ಹಂತದ ತನಿಖೆಗೆ ದೂರುದಾರ ಮೊಹಮ್ಮದ್ ಸಿರಾಜ್ ಅವರನ್ನು ವಿಚಾರಣೆ ನಡೆಸಲು ಪೊಲೀಸ್ ನೋಟಿಸ್ ಜಾರಿ ಮಾಡಿದ್ದಾರೆ.

ಮೊಹಮ್ಮದ್ ಸಿರಾಜ್ ಅವರ ಮೊಬೈಲ್ ವಶಕ್ಕೆ ಪಡೆದು ಆಡಿಯೋ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಿದ್ದಾರೆ. ಅಲ್ಲದೆ ಆಡಿಯೋ ವೈರಲ್ ಮಾಡಿದ್ದ ಕರ್ನಾಟಕ ಕಾಕ್ರೋಚ್ ಖಾತೆಯ ಮೂಲ ಪತ್ತೆಗೂ ಸಹ ಪೊಲೀಸರು ಮುಂದಾಗಿದ್ದಾರೆ.

ಆಡಿಯೋ ಬಗ್ಗೆ ಸವಾಲು ಹಾಕಿರುವ ಜಮೀರ್: ರಾಜ್ಯದ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ನನ್ನ ಕುರಿತ ಆಡಿಯೋ ನಕಲಿ, ಎಐ ತಂತ್ರಜ್ಞಾನ ಬಳಸಿ ಮಾಡಲಾಗಿದೆ ಎಂದು ಜಮೀರ್ ಅಹ್ಮದ್ ಖಾನ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಇದೊಂದು ರಾಜಕೀಯ ಷಡ್ಯಂತ್ರ. ನಕಲಿ ಆಡಿಯೋ ಮಾಡಿ ವೈರಲ್ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಅಲ್ಲದೇ ಆಡಿಯೋ ಬಗ್ಗೆ ಯಾವ ತನಿಖೆಗೆ ಬೇಕಾದರೂ ಒಳಪಡಿಸಲಿ ಎಂದು ಸವಾಲು ಹಾಕಿದ್ದರು.

ಆಡಿಯೋದಲ್ಲೇನಿದೆ?: ದಾವಣಗೆರೆ ಉಪಸಮರದದಲ್ಲಿ ಟಿಕೆಟ್ ನೀಡದ್ದಕ್ಕೆ ಮುಸ್ಲಿಂ ಸಮುದಾಯ ಅಸಾಮಾಧಾನಗೊಂಡಿತ್ತು. ಇತ್ತ ಜಮೀರ್ ಅಹ್ಮದ್ ಖಾನ್ ಸೇರಿ ಮುಸ್ಲಿಂ ನಾಯಕರು ಪ್ರಚಾರದಿಂದ ದೂರ ಉಳಿದಿದ್ದರು. ಇದೀಗ ಜಮೀರ್ ಅಹಮ್ಮದ್ ಅವರದ್ದು ಎನ್ನಲಾದ ಆಡಿಯೋ ಸಂಭಾಷಣೆ ದೊಡ್ಡ ಸದ್ದು ಮಾಡುತ್ತಿದೆ. ಸ್ಥಳೀಯ ಕಾಂಗ್ರೆಸ್ ಉಚ್ಛಾಟಿತ ನಾಯಕ ಮೊಹಮ್ಮದ್ ಸಿರಾಜ್ ಎಂಬುವವರ ಜೊತೆಗೆ ಮಾತನಾಡಿದ ಫೋನ್ ಆಡಿಯೋ ಸಂಭಾಷಣೆ ಇದಾಗಿದೆ ಎನ್ನಲಾಗುತ್ತಿದೆ. ಸದ್ಯ ಈ ಆಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ದಾವಣಗೆರೆ ಚುನಾವಣೆ ವಿಚಾರವಾಗಿ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪಕ್ಕೆ ಇದು ಪೂರಕ ಎಂಬಂತಿದೆ‌ ಎಂದು ವಿಶ್ಲೇಷಿಸಲಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎನ್ನಲಾಗಿರುವ ಈ ಆಡಿಯೋ ಸಂಭಾಷಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಮರ್ಥ್ ಅವರಿಗೆ ಹೆಚ್ಚು ವೋಟು ಹಾಕಬೇಡಿ. ಬಂಡಾಯ ನಿಂತು ಕಣದಿಂದ ಹಿಂದೆ ಸರಿದಿದ್ದ ಸಾದಿಕ್ ಪೈಲ್ವಾನ್ ವಾರ್ಡ್‌ನಲ್ಲಿ ಕಾಂಗ್ರೆಸ್‌ಗೆ ವೋಟು ಕಡಿಮೆ ಬರುವಂತೆ ನೋಡಿಕೊಳ್ಳಿ. ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷೇತರರಿಗೆ ಮತ ಹಾಕಿಸಿ. ಬಲವಂತವಾಗಿ ಮನೆಯಿಂದ ಕರೆದು ಬಂದು ವೋಟು ಹಾಕಿಸಬೇಡಿ ಎಂದು ಮಾತನಾಡಿರುವುದು ಈ ಆಡಿಯೋದಲ್ಲಿದೆ.