ಮನಿಲಾ: ದಕ್ಷಿಣ ಫಿಲಿಪೈನ್ಸ್‌ನಲ್ಲಿ ಸೋಮವಾರ ಮುಂಜಾನೆ 7:37 ಕ್ಕೆ ಸಮುದ್ರದ ಆಳದಲ್ಲಿ ಸಂಭವಿಸಿದ 7.8 ತೀವ್ರತೆಯ ಪ್ರಬಲ ಭೂಕಂಪವು ಭಾರಿ ಆತಂಕ ಸೃಷ್ಟಿಸಿದೆ. ಕೊಟಾಬಾಟೊ ಕಂದಕದಲ್ಲಿನ ಚಲನೆಯಿಂದಾಗಿ ಸುಮಾರು 10 ಕಿಲೋಮೀಟರ್ ಆಳದಲ್ಲಿ ಈ ಭೂಕಂಪ ಸಂಭವಿಸಿದ್ದು, ಕರಾವಳಿ ಪ್ರದೇಶಗಳಲ್ಲಿ 1 ಮೀಟರ್ (3 ಅಡಿ) ವರೆಗೆ ಸುನಾಮಿ ಅಲೆಗಳು ಎದ್ದಿವೆ ಎಂದು ಫಿಲಿಪೈನ್ಸ್ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಸಂಸ್ಥೆಯ ನಿರ್ದೇಶಕ ಟೆರೆಸಿಟೊ ಬಾಕೊಲ್ಕೋಲ್ ತಿಳಿಸಿದ್ದಾರೆ. ಇದರ ಬೆನ್ನಲ್ಲೇ 6.5 ತೀವ್ರತೆಯ ಆಫ್ಟರ್‌ಶಾಕ್‌ಗಳು (ನಂತರದ ಕಂಪನಗಳು) ಕೂಡ ದಾಖಲಾಗಿವೆ.
ಭೂಕಂಪದ ತೀವ್ರತೆಗೆ ಪ್ರಮುಖ ವಾಣಿಜ್ಯ ಕೇಂದ್ರವಾದ ‘ಜನರಲ್ ಸ್ಯಾಂಟೋಸ್’ ನಗರದಲ್ಲಿ ವ್ಯಾಪಕ ಹಾನಿಯಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ನಾಲ್ಕು ಅಂತಸ್ತಿನ ಕಚೇರಿ ಕಟ್ಟಡ ಸೇರಿದಂತೆ ಕೆಲವು ಸಣ್ಣ ವಾಣಿಜ್ಯ ಕಟ್ಟಡಗಳು ಭಾಗಶಃ ಕುಸಿದಿದ್ದು, ಅವಶೇಷಗಳು ಕೆಳಗೆ ನಿಲ್ಲಿಸಿದ್ದ ವಾಹನಗಳ ಮೇಲೆ ಬಿದ್ದಿವೆ. ಸದ್ಯಕ್ಕೆ ಯಾವುದೇ ಸಾವುನೋವುಗಳ ಅಧಿಕೃತ ವರದಿ ಬಂದಿಲ್ಲವಾದರೂ, ಅವಶೇಷಗಳ ಅಡಿಯಲ್ಲಿ ಯಾರಾದರೂ ಸಿಲುಕಿದ್ದಾರೆಯೇ ಎಂಬ ತಪಾಸಣೆ ನಡೆಯುತ್ತಿದೆ.
ಅಧ್ಯಕ್ಷ ಮಾರ್ಕೋಸ್ ಕರೆ: “ದಯವಿಟ್ಟು ಸುನಾಮಿ ಎಚ್ಚರಿಕೆಯನ್ನು ನಿರ್ಲಕ್ಷಿಸಬೇಡಿ. ತಕ್ಷಣವೇ ಎತ್ತರದ ಪ್ರದೇಶಗಳಿಗೆ ತೆರಳಿ, ಕಾಯಬೇಡಿ. ನಿಮ್ಮ ಜೀವ ಉಳಿಸಿಕೊಳ್ಳುವುದು ಎಲ್ಲದಕ್ಕಿಂತ ಮುಖ್ಯ,” ಎಂದು ಫಿಲಿಪೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ಜನರಲ್ಲಿ ಮನವಿ ಮಾಡಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಗಳು ರಕ್ಷಣಾ ಕಾರ್ಯಕ್ಕೆ ಸನ್ನದ್ಧವಾಗಿವೆ ಎಂದೂ ಭರವಸೆ ನೀಡಿದ್ದಾರೆ.
ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರದ ಪ್ರಕಾರ, ಫಿಲಿಪೈನ್ಸ್ ಕರಾವಳಿಯಲ್ಲಿ ಅಲೆಗಳು 3 ಮೀಟರ್‌ವರೆಗೆ ಏರಬಹುದು. ಈ ಹಿನ್ನೆಲೆಯಲ್ಲಿ ನೆರೆಹೊರೆಯ ದೇಶಗಳಾದ ಇಂಡೋನೇಷ್ಯಾ ಮತ್ತು ಮಲೇಷ್ಯಾ ಕೂಡ ತಮ್ಮ ಕರಾವಳಿ ಭಾಗಗಳಲ್ಲಿ ಹೈ-ಅಲರ್ಟ್ ಘೋಷಿಸಿವೆ. ಇಂಡೋನೇಷ್ಯಾದ ಸುಲಾವೆಸಿ ದ್ವೀಪದ ಬಳಿ ಈಗಾಗಲೇ 83 ಸೆಂಟಿಮೀಟರ್ ಎತ್ತರದ ಅಲೆಗಳು ಪತ್ತೆಯಾಗಿವೆ. ಜಪಾನ್, ತೈವಾನ್ ಮತ್ತು ಪಪುವಾ ನ್ಯೂಗಿನಿಯಾಗಳಲ್ಲೂ ಸಮುದ್ರ ಮಟ್ಟದಲ್ಲಿ ಸಣ್ಣ ಬದಲಾವಣೆಗಳಾಗುವ ಸಾಧ್ಯತೆಯಿದೆ. ಪೆಸಿಫಿಕ್ “ರಿಂಗ್ ಆಫ್ ಫೈರ್” ವಲಯದಲ್ಲಿರುವ ಫಿಲಿಪೈನ್ಸ್, ಇಂತಹ ಭೂಕಂಪ ಮತ್ತು ನೈಸರ್ಗಿಕ ವಿಕೋಪಗಳಿಗೆ ಹೆಚ್ಚು ತುತ್ತಾಗುವ ದೇಶಗಳಲ್ಲೊಂದಾಗಿದೆ.






















