SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಬೋಟ್ ಸ್ವಚ್ಛಗೊಳಿಸುವಾಗ ವಾಸನೆಗೆ ಉಸಿರುಗಟ್ಟಿ ಮೂವರು ಮೀನುಗಾರರು ಸಾವು

ಬೋಟ್ ಸ್ವಚ್ಛಗೊಳಿಸುವಾಗ ವಾಸನೆಗೆ ಉಸಿರುಗಟ್ಟಿ ಮೂವರು ಮೀನುಗಾರರು ಸಾವು

0
99

​ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ತದಡಿ ಬಂದರಿನಲ್ಲಿ ನಡೆದ ದಾರುಣ ಘಟನೆಯೊಂದರಲ್ಲಿ, ಬೋಟ್ ಸ್ವಚ್ಛಗೊಳಿಸುತ್ತಿದ್ದ ಮೂವರು ಮೀನುಗಾರರು ವಿಷಕಾರಿ ವಾಸನೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

​ಮೃತರನ್ನು ನೌಶಾದ್ (48), ಅಮೀನ್ (40) ಮತ್ತು ಅಮನ್ (26) ಎಂದು ಗುರುತಿಸಲಾಗಿದೆ. ​ತದಡಿಯ ʻಕುಚೈಮಾʼ ಬೋಟ್‌ನಲ್ಲಿ ಈ ಮೀನುಗಾರರು ಕೆಲಸ ಮಾಡುತ್ತಿದ್ದರು. ʻಚಮನ್ʼ ಮೀನುಗಳನ್ನು ಶಿಕಾರಿ ಮಾಡಿ ಈ ಬೋಟ್ ಬಂದರಿಗೆ ವಾಪಸ್ ಬಂದಿತ್ತು. ಬಂದರಿಗೆ ತಲುಪಿದ ಬಳಿಕ, ಮೀನು ಸಂಗ್ರಹ ಮಾಡಿಟ್ಟಿದ್ದ ಸ್ಥಳಕ್ಕೆ (ಹೋಲ್ಡ್‌ಗೆ) ಇಳಿದು ಮೀನುಗಳನ್ನು ಖಾಲಿ ಮಾಡಲಾಗಿತ್ತು.

​ನಂತರ, ಮೀನು ಇಟ್ಟಿದ್ದ ಆ ಸ್ಥಳವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಮೀನುಗಾರರು ತೊಡಗಿದ್ದರು. ಆ ಸಂದರ್ಭದಲ್ಲಿ ಮೀನಿನ ಕೊಳೆತ ವಾಸನೆ ಹಾಗೂ ಉಂಟಾದ ವಿಷಕಾರಿ ವಾಸನೆಯಿಂದ ಉಸಿರುಗಟ್ಟಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

​ಇಬ್ಬರ ರಕ್ಷಣೆ, ಓರ್ವನ ಸ್ಥಿತಿ ಗಂಭೀರ: ​ಈ ದುರ್ಘಟನೆಯಲ್ಲಿ ಒಟ್ಟು ಐವರು ಸಿಲುಕಿದ್ದು, ಇಬ್ಬರು ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಆದರೆ ರಕ್ಷಿಸಲ್ಪಟ್ಟವರ ಪೈಕಿ ಓರ್ವನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ​ಘಟನೆಗೆ ಸಂಬಂಧಿಸಿದಂತೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.