SK Home Ad
Home ವಿಶೇಷ ಸುದ್ದಿ ಉಕ್ಕಿನ ಮಹಿಳೆಯರು: ನಾಯಕತ್ವದ ಸವಾಲುಗಳು

ಉಕ್ಕಿನ ಮಹಿಳೆಯರು: ನಾಯಕತ್ವದ ಸವಾಲುಗಳು

0
57

✍️ರಾಯಭಾರಿ ಮಂಜು ಸೇಠ್ (ನಿವೃತ್ತ)
ರಾಜಕೀಯ ನಾಯಕತ್ವದಿಂದ ನಡವಳಿಕೆ, ಆಡಳಿತ ಚಾತುರ್ಯ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳುವ ಸಾಮರ್ಥ್ಯದ ಉನ್ನತ ಮಾನದಂಡಗಳನ್ನು ನಿರೀಕ್ಷಿಸಲಾಗುತ್ತದೆ. ರಾಷ್ಟ್ರಗಳನ್ನು ಮುನ್ನಡೆಸಿದ ಮಹಿಳೆಯರು ಕೆಲವೇ ಮಂದಿ, ಆದರೆ ಬಿಕ್ಕಟ್ಟಿನ ಸಮಯದಲ್ಲಿ ತೋರಿದ ದೃಢತೆಯಿಂದಾಗಿ ಕೆಲವರು ವಿಶಿಷ್ಟವಾಗಿ ನಿಲ್ಲುತ್ತಾರೆ. ʻಐರನ್ ವುಮೆನ್’ ಎಂಬ ಉಪನಾಮ ಗಳಿಸಿದ ಈ ʻಉಕ್ಕಿನ ಮಹಿಳೆಯರು’ ಆಳವಾಗಿ ಬೇರೂರಿದ್ದ ಪೂರ್ವಗ್ರಹಗಳ ನಡುವೆಯೂ ತಮ್ಮ ಸ್ಥಾನವನ್ನು ಉಳಿಸಿಕೊಂಡು, ಜಾಗತಿಕ ಇತಿಹಾಸದಲ್ಲಿ ತಮ್ಮ ಛಾಪು ಮೂಡಿಸಿದರು.

ಮೂವರು ನೆನಪಿಗೆ ಬರುತ್ತಾರೆ: ಇಂದಿರಾ ಗಾಂಧಿ, ಗೋಲ್ಡಾ ಮೇಯರ್ ಮತ್ತು ಮಾರ್ಗರೆಟ್ ಥ್ಯಾಚರ್. ಪ್ರತಿಯೊಬ್ಬರೂ ಬೇರೆ ಬೇರೆ ಸಮಾಜವನ್ನು ಆಳಿದರು, ಬೇರೆ ರಾಜಕೀಯ ಪರಂಪರೆಯನ್ನು ಪ್ರತಿನಿಧಿಸಿದರು ಮತ್ತು ತಮ್ಮದೇ ಆದ ವಿಶಿಷ್ಟ ಶೈಲಿ ಹೊಂದಿದ್ದರು; ಆದರೂ ಪ್ರತಿಯೊಬ್ಬರೂ, ಒಂದು ನಿರ್ಧಾರದ ಪರಿಣಾಮಗಳು ತಮ್ಮ ಅಧಿಕಾರದ ಉಳಿವಿನ ಆಚೆಗೂ ವ್ಯಾಪಿಸಿದ ಕ್ಷಣವನ್ನು ಎದುರಿಸಿದರು.

ಭಾರತದ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರನ್ನು 1984ರ ಅಕ್ಟೋಬರ್ 31ರಂದು ಅವರ ಇಬ್ಬರು ಅಂಗರಕ್ಷಕರು ಹತ್ಯೆ ಮಾಡಿದರು. ಅಸಾಧಾರಣ ಅಧಿಕಾರ ಮತ್ತು ದೀರ್ಘಕಾಲೀನ ವಿವಾದಗಳೆರಡನ್ನೂ ಒಳಗೊಂಡ ರಾಜಕೀಯ ಜೀವನದ ಬಗ್ಗೆ ಚಿಂತಿಸಲು ಅವರ ಪುಣ್ಯತಿಥಿ ಅವಕಾಶ ನೀಡುತ್ತದೆ. ಅವರ ನಿರ್ಣಾಯಕ ಅಂತಾರಾಷ್ಟ್ರೀಯ ಕ್ಷಣ 1971ರಲ್ಲಿ ಬಂದಿತು. ಪೂರ್ವ ಪಾಕಿಸ್ತಾನದಲ್ಲಿ ಪಾಕಿಸ್ತಾನಿ ಸೇನೆಯ ದಮನದಿಂದಾಗಿ ಲಕ್ಷಾಂತರ ನಿರಾಶ್ರಿತರು ಭಾರತಕ್ಕೆ ಹರಿದುಬಂದರು, ಇದರಿಂದ ಅಪಾರ ಮಾನವೀಯ ಮತ್ತು ಕಾರ್ಯತಂತ್ರದ ಹೊರೆ ಸೃಷ್ಟಿಯಾಯಿತು. ಅವರ ಪ್ರತಿಕ್ರಿಯೆಯಲ್ಲಿ ರಾಜತಾಂತ್ರಿಕ ಪ್ರಯತ್ನಗಳು, ಸೇನಾ ಸಿದ್ಧತೆ ಮತ್ತು ಮುಕ್ತಿ ಬಾಹಿನಿಗೆ ಬೆಂಬಲ ಒಟ್ಟಾಗಿ ಸೇರಿದ್ದವು. ಪಾಕಿಸ್ತಾನಕ್ಕೆ ಅಮೆರಿಕದ ಬಹಿರಂಗ ಬೆಂಬಲದ ನಡುವೆ, 1971ರ ಆಗಸ್ಟ್‌ನ ಭಾರತ ಸೋವಿಯತ್ ಒಪ್ಪಂದ ಭಾರತದ ಸ್ಥಾನವನ್ನು ಬಲಪಡಿಸಿತು. ಡಿಸೆಂಬರ್‌ನಲ್ಲಿ ಭಾರತೀಯ ವಾಯುಪಡೆಯ ನೆಲೆಗಳ ಮೇಲೆ ಪಾಕಿಸ್ತಾನದ ದಾಳಿಯ ನಂತರ ಯುದ್ಧ ಆರಂಭವಾದಾಗ, ಭಾರತೀಯ ಸಶಸ್ತ್ರ ಪಡೆಗಳು ಮತ್ತು ಮುಕ್ತಿ ಬಾಹಿನಿ ನಿರ್ಣಾಯಕ ಫಲಿತಾಂಶ ಸಾಧಿಸಿದವು. 1971ರ ಡಿಸೆಂಬರ್ 16ರಂದು ಢಾಕಾದಲ್ಲಿ ಪಾಕಿಸ್ತಾನಿ ಪಡೆಗಳು ಶರಣಾದವು ಮತ್ತು ಬಾಂಗ್ಲಾದೇಶ ಸ್ವತಂತ್ರ ರಾಷ್ಟ್ರವಾಗಿ ಉದಯಿಸಿತು. ದೃಢತೆ ಎಂದರೆ ಕಾರ್ಯಪ್ರವೃತ್ತರಾಗುವ ಮೊದಲು ಸಿದ್ಧತೆ ಮಾಡಿಕೊಳ್ಳುವ ದೂರದೃಷ್ಟಿ ಮತ್ತು ತಾಳ್ಮೆಯೂ ಹೌದು ಎಂಬುದನ್ನು ಅವರ ನಾಯಕತ್ವ ತೋರಿಸಿತು.

ಎರಡು ವರ್ಷಗಳ ನಂತರ, ವಿದೇಶಾಂಗ ಸಚಿವೆಯಾಗಿ ಅಮೆರಿಕದೊಂದಿಗೆ ಮೈತ್ರಿ ರೂಪಿಸಲು ನೆರವಾಗಿದ್ದ ಇಸ್ರೇಲ್ನ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನಮಂತ್ರಿ ಗೋಲ್ಡಾ ಮೇಯರ್ ತಮ್ಮದೇ ಬಿಕ್ಕಟ್ಟನ್ನು ಎದುರಿಸಿದರು. 1973ರ ಅಕ್ಟೋಬರ್ 6ರಂದು, ಯೋಮ್ ಕಿಪ್ಪೂರ್ ದಿನ, ಸಿನಾಯ್ ಪರ್ಯಾಯ ದ್ವೀಪ ಮತ್ತು ಗೋಲನ್ ಹೈಟ್ಸ್ ಅನ್ನು ಮರಳಿ ಪಡೆಯುವ ಉದ್ದೇಶದಿಂದ ಈಜಿಪ್ಟ್ ಮತ್ತು ಸಿರಿಯಾ ಇಸ್ರೇಲಿ ಪಡೆಗಳ ಮೇಲೆ ದಾಳಿ ಮಾಡಿದವು. ಇಸ್ರೇಲ್ ಅನಿರೀಕ್ಷಿತವಾಗಿ ಸಿಕ್ಕಿಬಿದ್ದಿತು; ಇದು ಗುಪ್ತಚರ ಮತ್ತು ಸನ್ನದ್ಧತೆಯಲ್ಲಿನ ಲೋಪಗಳನ್ನು ಸೂಚಿಸುತ್ತದೆ. ಮೇಯರ್ ಸರ್ಕಾರ ತುರ್ತು ಅಮೆರಿಕನ್ ಪೂರೈಕೆಗಳನ್ನು ಕೋರಿತು, ಮತ್ತು ಅಮೆರಿಕದ ತುರ್ತು ವಿಮಾನ ಸರಬರಾಜು ಇಸ್ರೇಲ್‌ನ ಪ್ರತಿದಾಳಿಗೆ ನೆರವಾಯಿತು. ಅವರ ದೃಢ ನಾಯಕತ್ವ ಮತ್ತು ಮಹಾಶಕ್ತಿಗಳೊಂದಿಗಿನ ಚತುರ ರಾಜತಾಂತ್ರಿಕತೆ ಪರಿಸ್ಥಿತಿಯನ್ನು ಬದಲಿಸಿತು, ಆದರೆ ಸೇನಾ ಯಶಸ್ಸು ಮತ್ತು ಕದನ ವಿರಾಮವು ಯುದ್ಧಕ್ಕೂ ಮುನ್ನದ ವೈಫಲ್ಯಗಳನ್ನಾಗಲಿ, ಪ್ರಾಣಹಾನಿಯನ್ನಾಗಲಿ ಅಳಿಸಲು ಸಾಧ್ಯವಾಗಲಿಲ್ಲ. ಸಾರ್ವಜನಿಕ ಆಕ್ರೋಶದ ನಡುವೆ ಅವರು 1974ರ ಏಪ್ರಿಲ್‌ನಲ್ಲಿ ರಾಜೀನಾಮೆ ನೀಡಿದರು, ಆದರೂ ಅಗ್ರಾನಟ್ ಆಯೋಗದ ಮಧ್ಯಂತರ ವರದಿ ಅವರನ್ನು ನೇರ ವೈಯಕ್ತಿಕ ಹೊಣೆಗಾರಿಕೆಯಿಂದ ಮುಕ್ತಗೊಳಿಸಿತ್ತು.

ಇಂದಿರಾ ಗಾಂಧಿ ಅವರ ಪ್ರಧಾನ ಕಾರ್ಯದರ್ಶಿ ಪಿ.ಎನ್. ಹಕ್ಸರ್ ಅವರ ದಾಖಲೆಗಳನ್ನು ಆಧರಿಸಿ, ಗ್ಯಾರಿ ಜೆ. ಬಾಸ್ ಅವರ ʻದಿ ಬ್ಲಡ್ ಟೆಲಿಗ್ರಾಮ್’ ಕೃತಿಯಲ್ಲಿ ದಾಖಲಾಗಿರುವ ಒಂದು ಕುತೂಹಲಕಾರಿ ಪ್ರಸಂಗ, ಭಾರತ ಮತ್ತು ಇಸ್ರೇಲ್ ನಡುವೆ ಔಪಚಾರಿಕ ರಾಜತಾಂತ್ರಿಕ ಸಂಬಂಧ ಇಲ್ಲದಿದ್ದರೂ ಈ ಇಬ್ಬರು ನಾಯಕಿಯರು ಸಹಕರಿಸಿದ್ದನ್ನು ತೋರಿಸುತ್ತದೆ. 1971ರ ಬಿಕ್ಕಟ್ಟಿನ ಸಮಯದಲ್ಲಿ, ಇಸ್ರೇಲಿ ಶಸ್ತ್ರಾಸ್ತ್ರ ತಯಾರಕರೊಬ್ಬರ ಮೂಲಕ ಭಾರತಕ್ಕೆ ಮಾರ್ಟರ್ಗಳು, ಮದ್ದುಗುಂಡುಗಳು ಮತ್ತು ತರಬೇತುದಾರರನ್ನು ಪೂರೈಸುವ ವ್ಯವಸ್ಥೆಯನ್ನು ಮೇಯರ್ ಮಾಡಿದರು.

ಬ್ರಿಟನ್ನ ಮೊದಲ ಮಹಿಳಾ ಪ್ರಧಾನಮಂತ್ರಿ ಮಾರ್ಗರೆಟ್ ಥ್ಯಾಚರ್ ಅವರ ನಿರ್ಣಾಯಕ ಕ್ಷಣ 1982ರ ಏಪ್ರಿಲ್‌ನಲ್ಲಿ, ಅರ್ಜೆಂಟೀನಾದ ಪಡೆಗಳು ಫಾಕ್ಲ್ಯಾಂಡ್ ದ್ವೀಪಗಳನ್ನು ಆಕ್ರಮಿಸಿದಾಗ ಬಂದಿತು. ದ್ವೀಪಗಳನ್ನು ಮರಳಿ ವಶಪಡಿಸಿಕೊಳ್ಳಲು ಅವರು ನೌಕಾ ಕಾರ್ಯಪಡೆಯನ್ನು ಕಳುಹಿಸಿದರು; ಸಾವಿರಾರು ಮೈಲುಗಳ ದೂರದಲ್ಲಿ ಅಭಿಯಾನ ನಡೆಸುತ್ತಲೇ ಅಮೆರಿಕದೊಂದಿಗೆ ನಿಕಟವಾಗಿ ಕೆಲಸ ಮಾಡಿದರು ಮತ್ತು ರಾಜತಾಂತ್ರಿಕ ಪ್ರಯತ್ನಗಳನ್ನೂ ಮುಂದುವರಿಸಿದರು. 74 ದಿನಗಳ ನಂತರ, 1982ರ ಜೂನ್ 14ರಂದು ಪೋರ್ಟ್ ಸ್ಟ್ಯಾನ್ಲಿಯಲ್ಲಿ ಅರ್ಜೆಂಟೀನಾ ಪಡೆಗಳು ಶರಣಾದವು ಮತ್ತು ಬ್ರಿಟಿಷ್ ಸಾರ್ವಭೌಮತ್ವ ಮರುಸ್ಥಾಪನೆಯಾಯಿತು. ಈ ಫಲಿತಾಂಶ ಅವರ ಅಧಿಕಾರವನ್ನು ಬಲಪಡಿಸಿತು, ‘ಐರನ್ ಲೇಡಿ’ ಎಂಬ ಅವರ ಖ್ಯಾತಿಯನ್ನು ಗಟ್ಟಿಗೊಳಿಸಿತು ಮತ್ತು 1983ರಲ್ಲಿ ಭರ್ಜರಿ ಚುನಾವಣಾ ಗೆಲುವಿಗೆ ಕಾರಣವಾಯಿತು; ಆದರೂ ಅಭಿಯಾನದ ಸಾವುನೋವುಗಳು ಮತ್ತು ವಿವಾದಗಳು ಅವರ ಪರಂಪರೆಯ ಭಾಗವಾಗಿಯೇ ಉಳಿದವು.

ದೃಢ ಕ್ರಮಕ್ಕಾಗಿ ಮೆಚ್ಚುಗೆ ಯಾವ ನಾಯಕರನ್ನೂ ವಿಮರ್ಶೆಯಿಂದ ಮುಕ್ತಗೊಳಿಸುವುದಿಲ್ಲ. ಇಂದಿರಾ ಗಾಂಧಿ ಅವರ 1975ರ ತುರ್ತು ಪರಿಸ್ಥಿತಿ ಸೆನ್ಸಾರ್ಶಿಪ್, ರಾಜಕೀಯ ವಿರೋಧಿಗಳ ಬಂಧನ ಮತ್ತು ಪ್ರಜಾಸತ್ತಾತ್ಮಕ ಸ್ವಾತಂತ್ರ್ಯಗಳ ದುರ್ಬಲೀಕರಣಕ್ಕೆ ಕಾರಣವಾಯಿತು; 1977ರಲ್ಲಿ ಅವರ ಸೋಲು, ಪ್ರಬಲ ನಾಯಕರನ್ನೂ ಮತದಾರರು ಹೊಣೆಗಾರರನ್ನಾಗಿಸಬಲ್ಲರು ಎಂಬುದನ್ನು ತೋರಿಸಿತು. 1973ರ ಗುಪ್ತಚರ ವೈಫಲ್ಯಗಳು ಮೇಯರ್ ಅವರ ಪರಂಪರೆಗೆ ಕಳಂಕ ತಂದವು. ಥ್ಯಾಚರ್ ಅವರ ಫಾಕ್ಲ್ಯಾಂಡ್ ಯಶಸ್ಸು ಅವರ ವಿಭಜನಕಾರಿ ಆರ್ಥಿಕ ನೀತಿಗಳ ನೆರಳಿನಲ್ಲಿ ಮಸುಕಾಯಿತು, ಮತ್ತು ತಮ್ಮದೇ ಪಕ್ಷದ ಬೆಂಬಲ ಕಳೆದುಕೊಂಡ ನಂತರ 1990ರಲ್ಲಿ ಅವರ ಅಧಿಕಾರಾವಧಿ ಕೊನೆಗೊಂಡಿತು.

ಮೂವರು ಸಶಕ್ತ ಮಹಿಳೆಯರು, ಮೂರು ವಿಭಿನ್ನ ಸಂಘರ್ಷಗಳು. ನೇರ ಹೋಲಿಕೆ ಉಪಯುಕ್ತವಲ್ಲ, ಆದರೆ ಗಮನ ಸೆಳೆಯುವುದು ಈ ನಾಯಕಿಯರು ಎದುರಿಸಿದ ತೀವ್ರ ವಿಮರ್ಶೆ; ಸಮಯದ ಆಯ್ಕೆ ಮತ್ತು ಅಪಾಯ ಎದುರಿಸುವಿಕೆ ಸೇರಿದಂತೆ ಅವರ ರಾಜಕೀಯ ವಿವೇಚನೆಯನ್ನು ಆ ಬಿಕ್ಕಟ್ಟುಗಳು ಪರೀಕ್ಷಿಸಿದವು. ನಾಯಕತ್ವದಲ್ಲಿರುವ ಮಹಿಳೆಯರು ಪರಸ್ಪರ ವಿರುದ್ಧ ಒತ್ತಡಗಳನ್ನು ಎದುರಿಸುತ್ತಾರೆ: ಕಠಿಣತೆಯನ್ನು ಪ್ರದರ್ಶಿಸಬೇಕಾದ ಅಗತ್ಯ, ಮತ್ತು ಅದೇ ಕಠಿಣತೆಗಾಗಿ ಟೀಕೆ.

ʻಐರನ್ ಲೇಡಿʼ ಎಂಬಂತಹ ಬಿರುದುಗಳು ದೃಢ ಸಂಕಲ್ಪವನ್ನು ಗುರುತಿಸುತ್ತವೆ, ಆದರೆ ಇಡೀ ರಾಜಕೀಯ ಪಯಣವನ್ನು ಒಂದೇ ಗುಣಕ್ಕೆ ಸೀಮಿತಗೊಳಿಸುತ್ತವೆ; ಉತ್ತಮ ನಾಯಕತ್ವಕ್ಕೆ ಆಲಿಸುವಿಕೆ, ಮರುಚಿಂತನೆ ಮತ್ತು ದೃಢನಿಶ್ಚಯ ಹಾಗೂ ಹಠಮಾರಿತನದ ನಡುವಿನ ವ್ಯತ್ಯಾಸ ಅರಿಯುವ ಸಾಮರ್ಥ್ಯ ಅಗತ್ಯ ಎಂಬುದನ್ನು ಕಡೆಗಣಿಸುತ್ತವೆ. ಈ ನಾಯಕಿಯರನ್ನು ಉಕ್ಕಿನ ಮಹಿಳೆಯರು ಎಂದು ಕರೆಯುವುದು ಚರ್ಚೆಯನ್ನು ವಿವೇಚನೆ ಮತ್ತು ಹೊಣೆಗಾರಿಕೆಯಿಂದ ಸದ್ದಿಲ್ಲದೆ ದೂರ ಸರಿಸುತ್ತದೆ. ಅವರನ್ನು ಏಕರೂಪವಾಗಿ ಆರಾಧಿಸುವ ಅಥವಾ ಖಂಡಿಸುವ ಸಂಕೇತಗಳಾಗಿ ಕಾಣುವ ಬದಲು, ಅವರ ಸಾಧನೆಗಳನ್ನು ಒಪ್ಪಿಕೊಳ್ಳುತ್ತಲೇ ಅವರ ತಪ್ಪುಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸುವುದು ಅತ್ಯಗತ್ಯ. ಉಕ್ಕಿನ ಮಹಿಳೆಯ ಅಳತೆಗೋಲು ಎಂದರೆ ಅವರ ನಿರ್ಧಾರಗಳ ಗುಣಮಟ್ಟ, ಅವು ಪೂರೈಸುವ ಉದ್ದೇಶ ಮತ್ತು ಪರಿಣಾಮಗಳ ಹೊಣೆ ಹೊರುವ ಅವರ ಸಿದ್ಧತೆ.

ಇಂದಿರಾ ಗಾಂಧಿ ಅವರ ಪುಣ್ಯತಿಥಿ ಸಮೀಪಿಸುತ್ತಿರುವಾಗ, ಅವರು ಯಾವುದಕ್ಕಾಗಿ ನಿಂತಿದ್ದರು ಮತ್ತು ಸನ್ನಿವೇಶಗಳು ಅವರ ಆಯ್ಕೆಗಳನ್ನು ಹೇಗೆ ರೂಪಿಸಿದವು ಎಂಬುದರ ವಿಮರ್ಶಾತ್ಮಕ ಮೌಲ್ಯಮಾಪನ ಅನಿವಾರ್ಯ. ಸಂಪೂರ್ಣ ಖಂಡನೆ ಅಥವಾ ಸಂಪೂರ್ಣ ಆರಾಧನೆ ಅವರ ಪರಂಪರೆಗೆ ಮಾತ್ರವಲ್ಲ, ಇನ್ನಿಬ್ಬರು ಉಕ್ಕಿನ ಮಹಿಳೆಯರ ಪರಂಪರೆಗೂ ಅನ್ಯಾಯ ಮಾಡಿದಂತಾಗುತ್ತದೆ.

ಲೇಖಕಿ ಮಾಜಿ ಭಾರತೀಯ ರಾಜತಾಂತ್ರಿಕರಾಗಿದ್ದು, ಮಡಗಾಸ್ಕರ್ ಮತ್ತು ಕೊಮೊರೊಸ್ಗೆ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ.