SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಭ್ರಷ್ಟಾಚಾರ ವ್ಯವಸ್ಥೆಗೆ ಅಂಟಿರುವ ಕ್ಯಾನ್ಸರ್: ಎಲ್. ನಾರಾಯಣಸ್ವಾಮಿ

ಭ್ರಷ್ಟಾಚಾರ ವ್ಯವಸ್ಥೆಗೆ ಅಂಟಿರುವ ಕ್ಯಾನ್ಸರ್: ಎಲ್. ನಾರಾಯಣಸ್ವಾಮಿ

0
63

ಭ್ರಷ್ಟಾಚಾರ ವಿರುದ್ಧ ಪ್ರತಿಯೊಬ್ಬರೂ ಹೋರಾಡಬೇಕು – ದಾವಣಗೆರೆಯಲ್ಲಿ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಲೋಕಪಾಲ ಸದಸ್ಯರ ಕರೆ

ದಾವಣಗೆರೆ: ಭ್ರಷ್ಟಾಚಾರ ಎನ್ನುವುದು ಇಡೀ ಸಮಾಜ ಮತ್ತು ಆಡಳಿತ ವ್ಯವಸ್ಥೆಯನ್ನು ಕೊಳೆಸುವ ಕ್ಯಾನ್ಸರ್ ರೋಗದಂತಿದ್ದು, ಅದರ ವಿರುದ್ಧ ಪ್ರತಿಯೊಬ್ಬ ನಾಗರಿಕರೂ ಧೈರ್ಯವಾಗಿ ಹೋರಾಡಬೇಕು ಎಂದು ನವದೆಹಲಿಯ ಎಲ್. ನಾರಾಯಣಸ್ವಾಮಿ ಕರೆ ನೀಡಿದರು.

ನಗರದ ಬಾಪೂಜಿ ವಿದ್ಯಾಸಂಸ್ಥೆ ವ್ಯಾಪ್ತಿಯ ಆರ್.ಎಲ್. ಕಾನೂನು ಕಾಲೇಜುಯ ಆಂತರಿಕ ಗುಣಮಟ್ಟ ಭರವಸೆ ಕೋಶದ ವತಿಯಿಂದ ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಬಲಪಡಿಸುವಲ್ಲಿ ಲೋಕಪಾಲ ವ್ಯವಸ್ಥೆಯ ಪಾತ್ರ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದನ್ನೂ ಓದಿ: CET : ದಾವಣಗೆರೆಯ ಇಬ್ಬರು ವಿದ್ಯಾರ್ಥಿನಿಯರಿಗೆ ಉನ್ನತ ರ‍್ಯಾಂಕ್

ಭ್ರಷ್ಟಾಚಾರದಿಂದ ಸಾಮಾಜಿಕ ನ್ಯಾಯಕ್ಕೆ ಧಕ್ಕೆ : ಭ್ರಷ್ಟಾಚಾರವು ಕೇವಲ ಆಡಳಿತದ ಸಮಸ್ಯೆಯಲ್ಲ, ಅದು ಇಡೀ ಸಮಾಜವನ್ನು ಒಳಗಿನಿಂದಲೇ ಕುಗ್ಗಿಸುವ ಪಿಡುಗಾಗಿದೆ ಎಂದು ನಾರಾಯಣಸ್ವಾಮಿ ಹೇಳಿದರು. “ಭ್ರಷ್ಟಾಚಾರ ಇರುವಲ್ಲಿ ಸಾಮಾಜಿಕ ಸಮಾನತೆ, ನ್ಯಾಯ ಹಾಗೂ ಪಾರದರ್ಶಕತೆ ನೆಲೆಸಲು ಸಾಧ್ಯವಿಲ್ಲ. ಹಣ ಕೊಟ್ಟರೆ ಮಾತ್ರ ಕೆಲಸ ಆಗುವ ಅಥವಾ ನ್ಯಾಯ ಸಿಗುವ ಪರಿಸ್ಥಿತಿ ಪ್ರಜಾಪ್ರಭುತ್ವದ ದುರಂತವಾಗಿದೆ. ಸಾರ್ವಜನಿಕರು ತಮ್ಮ ಹಕ್ಕುಗಳಿಗಾಗಿ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು” ಎಂದು ಅವರು ಹೇಳಿದರು.

ಭ್ರಷ್ಟಾಚಾರದಿಂದ ಸಾಮಾನ್ಯ ನಾಗರಿಕರ ಸಂವಿಧಾನಬದ್ಧ ಹಕ್ಕುಗಳಿಗೆ ಧಕ್ಕೆಯಾಗುತ್ತಿದ್ದು, ಆಡಳಿತ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಮೂಡಿದಾಗ ಮಾತ್ರ ಜನರಿಗೆ ನಿಜವಾದ ನ್ಯಾಯ ದೊರೆಯಲಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: CET : ಹಲವು ವಿಭಾಗಗಳಲ್ಲಿ ಧಾರವಾಡದ ಅನ್ಮೋಲ್‌ಗೆ ಉತ್ತಮ ರ‍್ಯಾಂಕ್

ಜಾಗತಿಕ ಭ್ರಷ್ಟಾಚಾರ ಸೂಚ್ಯಂಕದ ಬಗ್ಗೆ ಕಳವಳ : ಭಾರತ ಜಾಗತಿಕ ಭ್ರಷ್ಟಾಚಾರ ಸೂಚ್ಯಂಕದಲ್ಲಿ 86ನೇ ಸ್ಥಾನದಲ್ಲಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಅವರು ಹೇಳಿದರು. “ಪ್ರತಿಯೊಂದು ಹಂತದಲ್ಲೂ ಭ್ರಷ್ಟಾಚಾರ ಬೇರೂರಿರುವುದು ದೇಶದ ಅಭಿವೃದ್ಧಿಗೆ ಅಡ್ಡಿಯಾಗಿದೆ. ನಾಗರಿಕರು ತಮ್ಮ ಹಕ್ಕುಗಳನ್ನು ಮುಕ್ತವಾಗಿ ಅನುಭವಿಸಬೇಕಾದರೆ ಆಡಳಿತ ವ್ಯವಸ್ಥೆ ಭ್ರಷ್ಟಾಚಾರ ಮುಕ್ತವಾಗಬೇಕು” ಎಂದು ತಿಳಿಸಿದರು.

ಜನಾಂದೋಲನದ ಫಲವಾಗಿ ಲೋಕಪಾಲ ಕಾಯ್ದೆ : ಭ್ರಷ್ಟಾಚಾರ ತಡೆಗಟ್ಟಲು ಸ್ವತಂತ್ರ ತನಿಖಾ ಸಂಸ್ಥೆಯ ಅಗತ್ಯವನ್ನು ವಿಶ್ವಸಂಸ್ಥೆಯೂ ಒತ್ತಿ ಹೇಳಿತ್ತು. ಇದರ ಪರಿಣಾಮವಾಗಿ ದೇಶದಲ್ಲಿ ನಡೆದ ಜನಾಂದೋಲನಗಳು ಹಾಗೂ ಹೋರಾಟಗಳ ಫಲವಾಗಿ 2013ರಲ್ಲಿ ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆ ಜಾರಿಗೆ ಬಂದಿತು ಎಂದು ವಿವರಿಸಿದರು.

ಇದನ್ನೂ ಓದಿ: ನಾರ್ವೆ ಚೆಸ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ: ಪ್ರಜ್ಞಾನಂದ ಹೊಸ ದಾಖಲೆ

ಈ ಹೋರಾಟದಲ್ಲಿ ಅಣ್ಣಾ ಹಜಾರೆ ಹಾಗೂ ಜಸ್ಟಿಸ್ ಸಂತೋಷ್ ಹೆಗ್ಡೆ ಸೇರಿದಂತೆ ಅನೇಕ ಗಣ್ಯರ ಪಾತ್ರ ಮಹತ್ವದ್ದಾಗಿತ್ತು ಎಂದು ಸ್ಮರಿಸಿದರು. ಲೋಕಪಾಲ ಸಂಸ್ಥೆಗೆ ಭ್ರಷ್ಟಾಚಾರ ಆರೋಪಗಳ ಬಗ್ಗೆ ತನಿಖೆ ನಡೆಸುವ ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವ ಅಧಿಕಾರವನ್ನು ಕಾಯ್ದೆ ಒದಗಿಸಿದೆ ಎಂದು ಹೇಳಿದರು.

ಸುಳ್ಳು ದೂರುಗಳ ವಿರುದ್ಧವೂ ಕಠಿಣ ಕ್ರಮ : ಲೋಕಪಾಲಕ್ಕೆ ದೂರು ನೀಡುವಾಗ ಕೇವಲ ಆರೋಪಗಳ ಆಧಾರದ ಮೇಲೆ ದೂರು ಸಲ್ಲಿಸಬಾರದು ಎಂದು ಅವರು ಎಚ್ಚರಿಸಿದರು. ದೂರಿನೊಂದಿಗೆ ದೃಢವಾದ ದಾಖಲೆಗಳು, ಸಾಕ್ಷ್ಯಾಧಾರಗಳು ಹಾಗೂ ಅಫಿಡವಿಟ್ ಸಲ್ಲಿಸುವುದು ಕಡ್ಡಾಯವಾಗಿದೆ. ರಾಜಕೀಯ ದ್ವೇಷ, ವೈಯಕ್ತಿಕ ಪ್ರತೀಕಾರ ಅಥವಾ ಪ್ರಚಾರಕ್ಕಾಗಿ ಸುಳ್ಳು ದೂರುಗಳನ್ನು ಸಲ್ಲಿಸಿದರೆ ಅಂತಹ ದೂರುದಾರರ ವಿರುದ್ಧವೇ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: ಶಿಕ್ಷಣ ಸಚಿವರ ವಿರುದ್ಧ ಜಂತರ್ ಮಂತರ್‌ನಲ್ಲಿ CJP ಭಾರೀ ಪ್ರತಿಭಟನೆ

“ಸುಳ್ಳು ಆರೋಪ ಸಾಬೀತಾದರೆ ಜೈಲು ಶಿಕ್ಷೆ ಹಾಗೂ ಭಾರಿ ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಆದ್ದರಿಂದ ಸಾರ್ವಜನಿಕರು ಜವಾಬ್ದಾರಿಯುತವಾಗಿ ಲೋಕಪಾಲ ವ್ಯವಸ್ಥೆಯನ್ನು ಬಳಸಬೇಕು” ಎಂದು ಹೇಳಿದರು.

ಯುವಜನತೆಗೆ ಜಾಗೃತಿಯ ಸಂದೇಶ : ಯುವಜನತೆ ಭ್ರಷ್ಟಾಚಾರದ ವಿರುದ್ಧ ಜಾಗೃತರಾಗಬೇಕು ಹಾಗೂ ಸಮಾಜದಲ್ಲಿ ಪಾರದರ್ಶಕ ಆಡಳಿತ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ನಾರಾಯಣಸ್ವಾಮಿ ಕರೆ ನೀಡಿದರು. ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ, ಹೊಣೆಗಾರಿಕೆ ಮತ್ತು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.