SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಹಾಲು ಶೀತಲೀಕರಣ ಘಟಕದಲ್ಲಿ ಅಮೋನಿಯಂ ಗ್ಯಾಸ್ ಸೋರಿಕೆ: ತಪ್ಪಿದ ಅನಾಹುತ

ಹಾಲು ಶೀತಲೀಕರಣ ಘಟಕದಲ್ಲಿ ಅಮೋನಿಯಂ ಗ್ಯಾಸ್ ಸೋರಿಕೆ: ತಪ್ಪಿದ ಅನಾಹುತ

0
12

ದಾವಣಗೆರೆ: ಅಮೋನಿಯಂ ಗ್ಯಾಸ್ ಸೋರಿಕೆಯಾದ ಘಟನೆ ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿಯಲ್ಲಿರುವ ಹಾಲು ಶೀತಲೀಕರಣ ಘಟಕದಲ್ಲಿ ಆಕಸ್ಮಿಕವಾಗಿ ಸಂಭವಿಸಿದೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತವನ್ನು ತಪ್ಪಿಸಿದ ಘಟನೆ ನಡೆದಿದೆ.

ಅಗ್ನಿಶಾಮಕ ದಳದ ಠಾಣಾಧಿಕಾರಿ ಟಿ.ಆರ್. ಪರುಶುರಾಂ ಅವರು ತಮ್ಮ ಸಿಬ್ಬಂದಿಯೊಂದಿಗೆ ಅಮೋನಿಯಂ ಗ್ಯಾಸ್ ಗಾಳಿಯಲ್ಲಿ ಪ್ರಸರಣಗೊಳ್ಳುವ ಅನಿಲವನ್ನು ಮೊದಲು ತಡೆಗಟ್ಟಿದ್ದಾರೆ. ಉಸಿರಾಟದ ಉಪಕರಣ ಬಳಸಿ ಚಾಣಾಕ್ಷತೆ ಹಾಗೂ ಜಾಗರೂಕತೆಯಿಂದ ಅದನ್ನು ನಿಯಂತ್ರಿಸಿ ಗಾಳಿಯಲ್ಲಿ ಪ್ರಸರಣವಾಗದಂತೆ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ಇದರಿಂದ ಅನಿಲ ಸೋರಿಕೆ ಪ್ರಸರಣವಾಗುವುದು ನಿಂತಿದೆ. ಒಂದು ವೇಳೆ ಇದು ಗಾಳಿಯಲ್ಲಿ ಪ್ರಸರಣವಾಗಿದ್ದರೆ ಭಾರೀ ಅನಾಹುತಕ್ಕೆ ಕಾರಣವಾಗುತ್ತಿತ್ತು ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ. ಈ ಸೋರಿಕೆಯಿಂದ ಅಲ್ಲಿನ ಸಿಬ್ಬಂದಿ ತುಂಬಾ ಆತಂಕದಲ್ಲಿದ್ದು, ಸದ್ಯ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

ಶೀತಲೀಕರಣ ಘಟಕದ ಮೇಲ್ವಿಚಾರಕ ನವೀನ್ ಚಂದನ್ ಅವರು ಮಾತನಾಡಿ, ಪ್ರತಿವಾರ ಘಟಕದ ದುರಸ್ತಿ ನಿರ್ವಹಣೆ ಮಾಡುತ್ತಿದ್ದು, ಇಂದು ಕೂಡಾ ನಿರ್ವಹಣೆ ಮಾಡುವ ಸಂದರ್ಭದಲ್ಲಿ ಅನಿಲ ಸೋರಿಕೆ ಕಂಡುಬಂತು. ತಕ್ಷಣವೇ ಅಗ್ನಿಶಾಮಕ ಠಾಣಾಧಿಕಾರಿಗಳು ಧಾವಿಸಿ ಬಂದಿದ್ದರಿಂದ ಅಪಾಯ ತಪ್ಪಿತು ಎಂದು ಅವರು ತಿಳಿಸಿದ್ದಾರೆ.