ದಾವಣಗೆರೆ: ಟೆಲಿಗ್ರಾಂ ಆಪ್ ಮೂಲಕ ವರ್ಕ್ ಫ್ರಮ್ ಹೋಮ್ ಉದ್ಯೋಗ ಹಾಗೂ ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ 5.60 ಲಕ್ಷ ರೂ. ವಂಚನೆ ನಡೆಸಿದ ಪ್ರಕರಣದಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆ ಪೊಲೀಸರು ಎರಡನೇ ಆರೋಪಿಯನ್ನು ಬಂಧಿಸಿದ್ದಾರೆ.
ದಿನಾಂಕ 25 ಜನವರಿ 2025ರಂದು ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಪ್ರಕಾರ, ಪಿರ್ಯಾದಿದಾರರು ಟೆಲಿಗ್ರಾಂ ಆಪ್‌ನಲ್ಲಿ ಬಂದಿದ್ದ “Amazon Working Benefits Task Work From Home Job” ಎಂಬ ಸಂದೇಶ ಹಾಗೂ ಲಿಂಕ್‌ಗೆ ಪ್ರತಿಕ್ರಿಯಿಸಿ, ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರೆಯುತ್ತದೆ ಎಂಬ ನಂಬಿಕೆಯಿಂದ ವಂಚಕರು ನೀಡಿದ್ದ ಯುಪಿಐ ಐಡಿಗೆ ಹಣ ವರ್ಗಾವಣೆ ಮಾಡಿದ್ದರು.
ನಂತರ ವಂಚಕರು ವಿವಿಧ ಟಾಸ್ಕ್‌ಗಳನ್ನು ಪೂರ್ಣಗೊಳಿಸುವ ನೆಪದಲ್ಲಿ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 5,60,000 ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚನೆ ಎಸಗಿದ್ದರು. ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯ ಕಲಂ 66(ಸಿ), 66(ಡಿ) ಹಾಗೂ ಬಿಎನ್‌ಎಸ್-2023ರ ಕಲಂ 318(3), 319(2) ಮತ್ತು 308(2) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣದಲ್ಲಿ ಮೊದಲ ಆರೋಪಿಯಾದ ಹರೀಶ್ ಕುಮಾರ್ ಎಂ. ಅವರನ್ನು 2025ರ ಸೆಪ್ಟೆಂಬರ್ 6ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಮುಂದುವರಿದ ತನಿಖೆಯಲ್ಲಿ ಎರಡನೇ ಆರೋಪಿಯಾದ ಗುರುಮೂರ್ತಿ ಎಸ್. (24), ಬೆಂಗಳೂರು ನಿವಾಸಿಯನ್ನು ಪತ್ತೆಹಚ್ಚಿ 2026ರ ಜೂನ್ 18ರಂದು ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.






















