ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ನೆಮ್ಮದಿ ನೀಡುವ ನಿರ್ಧಾರವನ್ನು ರಾಜ್ಯ ಸರಕಾರ ತೆಗೆದುಕೊಂಡಿದೆ. ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಫಲಾನುಭವಿಗಳು ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಬದಲಾಗಿ, ಈಗಾಗಲೇ ಯೋಜನೆಗಳ ಸೌಲಭ್ಯ ಪಡೆಯುತ್ತಿರುವವರ ಅರ್ಹತೆಯನ್ನು ಮರು ಪರಿಶೀಲನೆ ಮಾಡುವ ಮೂಲಕ ಅನರ್ಹರನ್ನು ಗುರುತಿಸಲು ಸರ್ಕಾರ ಮುಂದಾಗಿದೆ.
ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಶುಕ್ರವಾರ ಗ್ಯಾರಂಟಿ ಸಮಿತಿ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಗಿದ್ದು, ಫಲಾನುಭವಿಗಳಿಗೆ ಯಾವುದೇ ರೀತಿಯ ಅನಗತ್ಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.
ಹೊಸ ಅರ್ಜಿ ಸಲ್ಲಿಕೆ ಇಲ್ಲ: ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಎಲ್ಲಾ ಫಲಾನುಭವಿಗಳಿಂದ ಮರು ಅರ್ಜಿ ಪಡೆಯುವ ಪ್ರಸ್ತಾವನೆಗೆ ಸರ್ಕಾರ ವಿರಾಮ ನೀಡಿದೆ. ಲಕ್ಷಾಂತರ ಜನರಿಂದ ಮತ್ತೆ ಅರ್ಜಿ ಪಡೆಯುವುದರಿಂದ ಆಡಳಿತಾತ್ಮಕ ತೊಂದರೆ ಹಾಗೂ ಜನರಿಗೆ ಅನಗತ್ಯ ಓಡಾಟ ಉಂಟಾಗುವ ಸಾಧ್ಯತೆ ಇರುವುದರಿಂದ, ಈಗಿರುವ ದಾಖಲೆಗಳ ಆಧಾರದ ಮೇಲೆ ಮರು ಪರಿಶೀಲನೆ ನಡೆಸುವ ನಿರ್ಧಾರಕ್ಕೆ ಬರಲಾಗಿದೆ.
ಮೂರು ದಿನಗಳಲ್ಲಿ ಮಾರ್ಗಸೂಚಿ: ಫಲಾನುಭವಿಗಳ ಮರು ಪರಿಶೀಲನೆ ಯಾರು ನಡೆಸಬೇಕು, ಯಾವ ಮಾನದಂಡಗಳ ಆಧಾರದ ಮೇಲೆ ನಡೆಸಬೇಕು ಹಾಗೂ ಅದರ ವಿಧಾನವೇನು ಎಂಬುದನ್ನು ಮೂರು ದಿನಗಳ ಒಳಗೆ ಅಂತಿಮಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅರ್ಹರಿಗೆ ಯಾವುದೇ ತೊಂದರೆ ಆಗಬಾರದು: ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, “ಒಬ್ಬರೂ ಅರ್ಹ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗಬಾರದು. ನಿಜವಾದ ಫಲಾನುಭವಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಆದರೆ ಅನರ್ಹರು ಯೋಜನೆಗಳ ಸೌಲಭ್ಯ ಪಡೆಯುತ್ತಿರುವುದು ಕಂಡುಬಂದರೆ ಅದಕ್ಕೆ ಬ್ರೇಕ್ ಹಾಕಬೇಕು” ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಖಾತೆ ಬದಲಿಸಿದವರಿಗೆ ರಕ್ಷಣೆ: ಗೃಹಲಕ್ಷ್ಮಿ ಯೋಜನೆಯ ಅನೇಕ ಫಲಾನುಭವಿಗಳು ಬ್ಯಾಂಕ್ ಸಾಲ ಪಡೆದಿರುವ ಕಾರಣ, ಅವರ ಖಾತೆಗೆ ಜಮೆಯಾಗುವ ₹2,000 ಹಣ ನೇರವಾಗಿ ಸಾಲದ ಖಾತೆಗೆ ಹೊಂದಾಣಿಕೆಯಾಗುತ್ತಿರುವ ಪ್ರಕರಣಗಳು ಕಂಡುಬಂದಿವೆ. ಈ ಕಾರಣದಿಂದ ಹಲವರು ಬೇರೆ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗುವಂತೆ ಬದಲಾವಣೆ ಮಾಡಿಕೊಂಡಿದ್ದಾರೆ.
ಇಂತಹ ಫಲಾನುಭವಿಗಳಿಗೆ ಮರು ಪರಿಶೀಲನೆ ವೇಳೆ ಯಾವುದೇ ಸಮಸ್ಯೆ ಆಗದಂತೆ ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ. ಖಾತೆ ಬದಲಾವಣೆ ಮಾಡಿರುವುದನ್ನು ಅನರ್ಹತೆಯ ಮಾನದಂಡವಾಗಿ ಪರಿಗಣಿಸಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ದುರುಪಯೋಗ ತಡೆಗೆ ಸರ್ಕಾರದ ಒತ್ತು: ಗೃಹಜ್ಯೋತಿ ಯೋಜನೆ ಜಾರಿಗೊಳಿಸುವ ವೇಳೆ ದುರುಪಯೋಗ ತಡೆಯಲು ಸರ್ಕಾರ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತ್ತು. ಇದೇ ರೀತಿಯ ಕಟ್ಟುನಿಟ್ಟಿನ ವ್ಯವಸ್ಥೆಯನ್ನು ಇತರ ಗ್ಯಾರಂಟಿ ಯೋಜನೆಗಳಲ್ಲೂ ಆರಂಭದಲ್ಲೇ ಜಾರಿಗೆ ತಂದಿದ್ದರೆ ದುರುಪಯೋಗದ ಪ್ರಮಾಣ ಕಡಿಮೆಯಾಗುತ್ತಿತ್ತು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಮರು ಪರಿಶೀಲನೆ ವೇಳೆ ಕೆಲವು ಆತಂಕಕಾರಿ ಅಂಶಗಳು ಬೆಳಕಿಗೆ ಬಂದಿದ್ದು, ಮೃತಪಟ್ಟಿರುವ ಕೆಲವರ ಹೆಸರಿನಲ್ಲಿಯೂ ಗೃಹಲಕ್ಷ್ಮಿ ಹಣ ಜಮೆಯಾಗುತ್ತಿರುವುದು ಪತ್ತೆಯಾಗಿದೆ. ಇಂತಹ ಅಕ್ರಮಗಳಿಗೆ ತಡೆ ಹಾಕಲು ಸರ್ಕಾರ ನಿರ್ಧರಿಸಿದೆ.
ವಾಯ್ಸ್ ಮೆಸೇಜ್ ವ್ಯವಸ್ಥೆ: ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮೆಯಾದ ತಕ್ಷಣ ಅವರಿಗೆ ಮಾಹಿತಿ ತಲುಪುವಂತೆ ಹೊಸ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ಹಣ ಜಮೆಯಾದ ಕೂಡಲೇ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ವಾಯ್ಸ್ ಮೆಸೇಜ್ ಕಳುಹಿಸಿ ಹಣ ಜಮೆಯಾದ ಬಗ್ಗೆ ಖಚಿತಪಡಿಸುವ ವ್ಯವಸ್ಥೆ ರೂಪಿಸುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶೀಘ್ರದಲ್ಲೇ ಅಂತಿಮ ನಿರ್ಧಾರ: ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಕುರಿತ ಅಂತಿಮ ಮಾರ್ಗಸೂಚಿಗಳು ಮುಂದಿನ ಕೆಲ ದಿನಗಳಲ್ಲಿ ಪ್ರಕಟವಾಗಲಿದ್ದು, ಮರು ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಲಾಭ ನಿರಂತರವಾಗಿ ದೊರೆಯುವಂತೆ ಹಾಗೂ ಅನರ್ಹರ ದುರುಪಯೋಗಕ್ಕೆ ಕಡಿವಾಣ ಹಾಕುವಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ.





















