ಬೆಂಗಳೂರು: ದೃಶ್ಯ ಮಾಧ್ಯಮದ ಮೂಲಕ ನ್ಯೂಸ್ ಆಂಕರ್ ಆಗಿ ವೃತ್ತಿ ಜೀವನ ಆರಂಭಿಸಿದ್ದ ಜಾನ್ಹವಿ ಮಹಡಿ ಅವರು ಇದೀಗ ಜಾತ್ಯತೀತ ಜನತಾದಳ (ಜೆಡಿಎಸ್)ದ ಸಕ್ರಿಯ ಕಾರ್ಯಕರ್ತೆಯಾಗಿ, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಜಾನ್ಹವಿ ಮಹಡಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿ ಆದೇಶ ಹೊರಡಿಸಿದ್ದು, ಅವರಿಂದಲೇ ನೇಮಕದ ಆದೇಶ ಪತ್ರ ಸ್ವೀಕರಿಸಿರುವುದಾಗಿ ಜಾನ್ಹವಿ ತಿಳಿಸಿದ್ದಾರೆ.
ತಮ್ಮ ಈ ಬೆಳವಣಿಗೆಯಲ್ಲಿ ಸಹಕಾರ, ಬೆಂಬಲ ಹಾಗೂ ಪ್ರೀತಿ-ವಿಶ್ವಾಸ ತೋರಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿರುವ ಅವರು, ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವುದು ವೈಯಕ್ತಿಕವಾಗಿ ಸಂತಸ ಹಾಗೂ ಹೊಸ ತಿರುವಿನ ಕ್ಷಣವಾಗಿದೆ ಎಂದು ಹೇಳಿದ್ದಾರೆ.
ಪಕ್ಷದ ನಾಯಕ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ, ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹಾಗೂ ಜೆಡಿಎಸ್ ಗ್ರೇಟರ್ ಬೆಂಗಳೂರು ಅಧ್ಯಕ್ಷ ರಮೇಶ್ ಗೌಡ ಅವರಿಗೂ ಕೃತಜ್ಞತೆ ಸಲ್ಲಿಸಿರುವ ಅವರು, ತಮ್ಮನ್ನು ಗುರುತಿಸಿ ಪಕ್ಷದಲ್ಲಿ ಸ್ಥಾನಮಾನ ನೀಡಿರುವ ಜೆಡಿಎಸ್‌ಗಾಗಿ ಮನಸಾರೆ ದುಡಿಯುವುದಾಗಿ ಭರವಸೆ ನೀಡಿದ್ದಾರೆ.






















