ಮೈಸೂರು: ದಸರಾ ಮಹೋತ್ಸವದ ಸಂದರ್ಭದಲ್ಲಿ ಮೈಸೂರು ಅರಮನೆಗೆ ಭೇಟಿ ನೀಡುವ ಪ್ರವಾಸಿಗರು ಹಾಗೂ ರಾಜಮನೆತನದ ಖಾಸಗಿ ಕಾರ್ಯಕ್ರಮಗಳಿಗೆ ಯಾವುದೇ ಅಡಚಣೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪ್ರಮೋದಾದೇವಿ ಒಡೆಯರ್ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
2026ರ ಅಕ್ಟೋಬರ್ 25ರಂದು ಹೊರಡಿಸಿರುವ ಪತ್ರದಲ್ಲಿ, ದಸರಾ ಮಹೋತ್ಸವದ ವೇಳೆ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಪೊಲೀಸ್ ಇಲಾಖೆ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್ಆರ್ಪಿ), ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್), ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಹಾಗೂ ಇತರ ಜಿಲ್ಲೆಗಳ ನಿಯೋಜಿತ ಪೊಲೀಸ್ ಸಿಬ್ಬಂದಿ ಭದ್ರತಾ ಕಾರ್ಯದಲ್ಲಿ ತೊಡಗುತ್ತಾರೆ. ಈ ಸಂದರ್ಭದಲ್ಲಿ ಅರಮನೆಯ ಖಾಸಗಿ ಪ್ರದೇಶಗಳು, ರಾಜಕುಟುಂಬದ ಸದಸ್ಯರ ಸಂಚಾರ ಹಾಗೂ ಸಾರ್ವಜನಿಕ ದರ್ಶನಕ್ಕೆ ಸಂಬಂಧಿಸಿದ ವ್ಯವಸ್ಥೆಗಳಲ್ಲಿ ಸಮನ್ವಯ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.
ವಜ್ರಮಹೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಸಂದರ್ಭದಲ್ಲಿ ಭದ್ರತಾ ಕಾರಣಗಳನ್ನು ಮುಂದಿಟ್ಟುಕೊಂಡು ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸುವುದು ಸರಿಯಲ್ಲ. 1970 ಮತ್ತು 1980ರ ದಶಕಗಳಲ್ಲಿಯೂ ವಿವಿಧ ಸಂದರ್ಭಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಿಸಲಾಗಿತ್ತು. ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿಯೂ ದಸರಾ ಆಚರಣೆಗಳು ಹಾಗೂ ಪ್ರವಾಸಿಗರ ಭೇಟಿಗೆ ಸಂಬಂಧಿಸಿದ ವ್ಯವಸ್ಥೆಗಳನ್ನು ನಿರ್ವಹಿಸಲಾಗಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ದಸರಾ ಮಹೋತ್ಸವದ ವೇಳೆ ಅರಮನೆ ಆವರಣದಲ್ಲಿ ರಾಜಮನೆತನದ ಖಾಸಗಿ ಕಾರ್ಯಕ್ರಮಗಳು, ಪೂಜಾ ವಿಧಿವಿಧಾನಗಳು ಮತ್ತು ಇತರ ಸಾಂಪ್ರದಾಯಿಕ ಆಚರಣೆಗಳು ನಡೆಯುತ್ತವೆ. ಇವುಗಳಿಗೆ ಯಾವುದೇ ತೊಂದರೆಯಾಗದಂತೆ ಪೊಲೀಸ್ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಕೋರಿದ್ದಾರೆ.
ಅರಮನೆ ಪ್ರವೇಶಕ್ಕೆ ಅನಗತ್ಯ ನಿರ್ಬಂಧ ಬೇಡ: 2024ರಲ್ಲಿ ಅರಮನೆಯ ಆವರಣದಲ್ಲಿ ನಡೆದ ಕೆಲವು ಘಟನೆಗಳ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಆದರೆ, ಭದ್ರತೆಯ ಹೆಸರಿನಲ್ಲಿ ಅರಮನೆಯ ಆವರಣಕ್ಕೆ ಸಾರ್ವಜನಿಕರ ಪ್ರವೇಶ ಹಾಗೂ ರಾಜಮನೆತನದ ಚಟುವಟಿಕೆಗಳಿಗೆ ಅಡ್ಡಿಯಾಗಬಾರದು ಎಂದು ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.
ಅರಮನೆ ಆವರಣದ ಭದ್ರತೆ, ಸಾರ್ವಜನಿಕರ ಪ್ರವೇಶ, ಪೊಲೀಸ್ ಸಿಬ್ಬಂದಿಯ ನಿಯೋಜನೆ ಮತ್ತು ವಾಹನಗಳ ಸಂಚಾರ ನಿರ್ವಹಣೆ ಸೇರಿದಂತೆ ಹಲವು ವಿಚಾರಗಳಲ್ಲಿ ಸ್ಪಷ್ಟವಾದ ಮಾರ್ಗಸೂಚಿ ರೂಪಿಸುವ ಅಗತ್ಯವಿದೆ. ಪೊಲೀಸ್ ಅಧಿಕಾರಿಗಳು ಸ್ಥಳೀಯ ಪರಿಸ್ಥಿತಿ ಹಾಗೂ ಅರಮನೆಯ ಸಂಪ್ರದಾಯಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.
ಪೊಲೀಸ್ ಭದ್ರತೆಗೆ ಸಹಕಾರದ ಭರವಸೆ: ಭದ್ರತಾ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡಲು ರಾಜಮನೆತನ ಸಿದ್ಧವಿದೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ. ಸಾರ್ವಜನಿಕರ ಸುರಕ್ಷತೆ ಹಾಗೂ ಅರಮನೆಯ ಸಂಪ್ರದಾಯಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು ಎಂಬುದು ಅವರ ಮನವಿಯಾಗಿದೆ.
ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ದಸರಾ ಮಹೋತ್ಸವವನ್ನು ಸುಗಮವಾಗಿ ನಡೆಸಲು ಸಹಕರಿಸುವುದಾಗಿ ಅವರು ತಿಳಿಸಿದ್ದಾರೆ. ಅರಮನೆಯೊಳಗಿನ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಆಚರಣೆಗಳಿಗೆ ಯಾವುದೇ ಅಡಚಣೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದೂ ಮನವಿ ಮಾಡಿದ್ದಾರೆ.
ಪತ್ರದ ಕೊನೆಯಲ್ಲಿ, ದಸರಾ ಸಂದರ್ಭದಲ್ಲಿ ಅರಮನೆಗೆ ಭೇಟಿ ನೀಡುವ ಪ್ರವಾಸಿಗರು, ಭಕ್ತರು ಹಾಗೂ ರಾಜಮನೆತನದ ಸದಸ್ಯರಿಗೆ ಅನುಕೂಲವಾಗುವಂತೆ ಭದ್ರತಾ ವ್ಯವಸ್ಥೆ ರೂಪಿಸಬೇಕು ಎಂದು ಪ್ರಮೋದಾದೇವಿ ಒಡೆಯರ್ ಒತ್ತಾಯಿಸಿದ್ದಾರೆ.
ಆಯುಧ ಪೂಜೆ ದಿನ ಆವರಣ ಮುಕ್ತವಾಗಬೇಕು: ಮೊದಲ ದಿನದಿಂದ ಏಳನೇ ದಿನದವರೆಗೆ, ಸರ್ಕಾರವು ಎಂದಿನಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬಹುದು. ಆಯುಧ ಪೂಜೆ ಮತ್ತು ವಿಜಯದಶಮಿಯ ದಿನದಂದು ಅರಮನೆ ಆವರಣವನ್ನು ಮುಕ್ತವಾಗಿಡಬೇಕು. ಬೆಟ್ಟದಲ್ಲಿ ನಡೆಯುವ ರಥೋತ್ಸವದ ದಿನದಂದೇ, ಚಾಮುಂಡೇಶ್ವರಿ ಅಮ್ಮನವರ ಅಂಬಾರಿ ಮೆರವಣಿಗೆಯನ್ನು ನಡೆಸಬಹುದು. ಅಂದು ಸಂಜೆ ಸೂಕ್ತ ಸಮಯದಲ್ಲಿ ಅರಮನೆಯಿಂದ ಬನ್ನಿಮಂಟಪದವರೆಗೆ ಮೆರವಣಿಗೆ ನಡೆಸುವುದು ಸೂಕ್ತವಾಗಿರುತ್ತದೆ ಎಂದು ಸಲಹೆ ನೀಡಿದ್ದಾರೆ.
ಅಂಬಾರಿ ಹೊರುವ ಆನೆ ಬಗ್ಗೆ ತಿಳಿಸಿರಲೇ ಇಲ್ಲ: ಇದಲ್ಲದೆ ಪೂಜೆಗಳು ಮತ್ತು ಇತರ ಸಾಂಪ್ರದಾಯಿಕ ನೆರವೇರಿಸುವಲ್ಲಿ ಯಾವುದೇ ಅಡಚಣೆ ಉಂಟಾದಲ್ಲಿ, ತಾವು ಕರ್ನಾಟಕ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಲು ಸ್ವತಂತ್ರರು ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಆದಾಗ್ಯೂ ನಾವು ಅಂತಹ ಕ್ರಮ ಕೈಗೊಂಡಿಲ್ಲ. ಕಳೆದ 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, ಅಂಬಾರಿಯನ್ನು ಹೊರುವ ಆನೆಯ ವಿಷಯವನ್ನು ನಮ್ಮಿಂದ ಮುಚ್ಚಿಡಲಾಗಿತ್ತು. ಕೊನೆಯ ಕ್ಷಣದವರೆಗೂ ಮಾಹಿತಿ ನೀಡಿರಲಿಲ್ಲ ಎಂದರು.
ಸಮನ್ವಯದ ಅಭಾವ: ಸರ್ಕಾರಿ ದಸರಾಕ್ಕೆ ಅಂತಹ ಯಾವುದೇ ಧಾರ್ಮಿಕ ಮಹತ್ವ ಅಥವಾ ಸಂಬಂಧವಿಲ್ಲ. ಸರ್ಕಾರಿ ಇಲಾಖೆಗಳ ನಡುವಿನ ಸಹಕಾರದ ಕೊರತೆ ಮತ್ತು ಸಮನ್ವಯದ ಅಭಾವವು ತೀವು ತೊಂದರೆಯನ್ನು ಉಂಟುಮಾಡುತ್ತಿದ್ದು, ನಮ್ಮ ಧಾರ್ಮಿಕ ಆಚರಣೆಗಳಿಗೆ ಅಡ್ಡಿಯಾಗುತ್ತಿದೆ ಎಂದು ತಿಳಿಸಿದ್ದಾರೆ. ಚಿನ್ನದ ಅಂಬಾರಿ ಮುಂಭಾಗ ಪೊಲೀಸ್ ಕುಟುಂಬಗಳ ಸೆಲ್ಫಿ, ಜಂಬೂಸವಾರಿ ವೇಳೆಯಲ್ಲಿ ರಾಜ ಮನೆತನದ ಪ್ರತಿನಿಧಿಗಳ ತಳ್ಳಿ ಅನುಚಿತ ವರ್ತಿಸಿದ್ದಾರೆ. ರಾಜಮನೆತನಕ್ಕೆ ಮೀಸಲಿಟ್ಟ ಪಾರ್ಕಿಂಗ್ ಸ್ಥಳದಲ್ಲಿ ಪೊಲೀಸರ ವಾಹನ ನಿಲ್ಲಿಸಿ ತೊಂದರೆ ಸೇರಿದಂತೆ ಅನೇಕ ಸಮಸ್ಯೆಗಳು ಪದೇ ಪದೇ ಕಂಡುಬರುತ್ತಿವೆ. ಈ ಕಾರಣಕ್ಕಾಗಿ ಕೆಲವು ಸಲಹೆ ನೀಡಲಾಗುತ್ತದೆ. ಅದನ್ನು ಪರಿಗಣಿಸದಿದ್ದರೆ ಚಾಮುಂಡೇಶ್ವರಿ ಅಮ್ಮನವರ ಮೆರವಣಿಗೆಯನ್ನೇ ನಡೆಸುವ ಬಗ್ಗೆ ಮರು ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ನಿರ್ಲಕ್ಷ್ಯ ತೋರುತ್ತಿರುವುದ ನಿರಾಶೆ ತಂದಿದೆ: ಪ್ರತಿ ವರ್ಷವೂ ಎಲ್ಲರಿಗೂ ಅನುಕೂಲವಾಗಲಿ ಎಂದು ನಾನು ಸಂಪೂರ್ಣ ಸಹಕಾರ ನೀಡುತ್ತಾ ಬಂದಿದ್ದೇನೆ. ಆದರೆ, ನಮ್ಮ ಸಹಕಾರವನ್ನು ಕೇವಲ ಒಂದು ಸಾಮಾನ್ಯ ಸಂಗತಿ ಎಂದು ಪರಿಗಣಿಸಿ ನಿರ್ಲಕ್ಷ್ಯ ತೋರುತ್ತಿರುವುದ ನಿರಾಶೆ ತಂದಿದೆ. ಎಲ್ಲರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರ ಸಲಹೆಗಳನ್ನು ಪರಿಗಣಿಸಬೇಕು ಮತ್ತು ಮೌಲೀಕರಿಸಬೇಕು ಎಂದು ಬಯಸುತ್ತೇನೆ. ನಾಡದೇವತೆಗೆ ತಕ್ಕ ಗೌರವ ಮತ್ತು ವೈಭವದೊಂದಿಗೆ ರಥೋತ್ಸವ ದಿನದಂದು ಮೆರವಣಿಗೆಯನ್ನು ನಡೆಸುವ ವ್ಯವಸ್ಥೆ ಮಾಡಬೇಕೆಂದು ಪ್ರಮೋದಾದೇವಿ ಕೋರಿದ್ದಾರೆ.






















