SK Home Ad
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕರ ಎದುರೇ ಕಾರ್ಯಕರ್ತರ ಜಟಾಪಟಿ

ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕರ ಎದುರೇ ಕಾರ್ಯಕರ್ತರ ಜಟಾಪಟಿ

0
78

ಪುತ್ತೂರು: ಶಾಸಕ ಅಶೋಕ್ ರೈ ಹಾಗೂ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಬೆಂಬಲಿಗರ ನಡುವಿನ ಜಟಾಪಟಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪುತ್ತೂರಿನ ಪ್ರೆಸ್ ಕ್ಲಬ್ ಮುಂಭಾಗ ಇಂದು ಹೈಡ್ರಾಮಾ, ಗಲಾಟೆ ನಡೆದಿದೆ.

ಕಳೆದ ಎರಡು ದಿನಗಳ ಹಿಂದೆ ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಅವರು ಪುತ್ತೂರು ಶಾಸಕ ಅಶೋಕ್ ರೈ ಅವರ ಆಡಳಿತ ವೈಫಲ್ಯಗಳನ್ನು ಎತ್ತಿಹಿಡಿದು ಆಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ಆಡಿಯೋ ಭಾರಿ ವೈರಲ್ ಆಗಿ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿತ್ತು.

ಈ ಆಡಿಯೋ ಕುರಿತು ಸ್ಪಷ್ಟನೆ ಹಾಗೂ ಹೆಚ್ಚಿನ ವಿವರ ನೀಡಲು ಹಕೀಂ ಕೂರ್ನಡ್ಕ ಅವರು ಪುತ್ತೂರು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ಕರೆದಿದ್ದರು. ಹಕೀಂ ಪತ್ರಿಕಾಗೋಷ್ಠಿಗೆ ಆಗಮಿಸಿದ ವಿಷಯ ತಿಳಿಯುತ್ತಿದ್ದಂತೆಯೇ ಶಾಸಕ ಅಶೋಕ್ ರೈ ಅವರ ಬೆಂಬಲಿಗರು ಶಾಸಕರ ಸಮ್ಮುಖದಲ್ಲೇ ಪ್ರೆಸ್ ಕ್ಲಬ್ ಮುಂಭಾಗ ಜಮಾಯಿಸಿ ಹಕೀಂ ವಿರುದ್ಧ ಕೆಂಡಾಮಂಡಲರಾದರು.

ಹಕೀಂ ಕೂರ್ನಡ್ಕರನ್ನು ಪ್ರೆಸ್ ಕ್ಲಬ್‌ನಿಂದ ಹೊರಗಡೆ ಕಳುಹಿಸುವಂತೆ ಏರುಧ್ವನಿಯಲ್ಲಿ ಕೂಗಾಡಿದ ಬೆಂಬಲಿಗರು ಅವರಿಗೆ ಮುತ್ತಿಗೆ ಹಾಕಿ ಘೇರಾವ್ ಹಾಕಿದರು. ಈ ವೇಳೆ ಹಕೀಂ ಅವರ ಇಬ್ಬರು ಬೆಂಬಲಿಗರ ಮೇಲೆಯೂ ಹಲ್ಲೆಗೆ ಯತ್ನಿಸಲಾಯಿತು.

ಸ್ಥಳದಲ್ಲೇ ಇದ್ದ ಪೊಲೀಸರು ಶಾಸಕರ ಬೆಂಬಲಿಗರನ್ನು ನಿಯಂತ್ರಿಸಲು ಹಾಗೂ ಹಕೀಂ ಕೂರ್ನಡ್ಕರನ್ನು ಸುರಕ್ಷಿತವಾಗಿ ಹೊರತರಲು ಹರಸಾಹಸ ಪಟ್ಟರು. ಅಂತಿಮವಾಗಿ ಪೊಲೀಸ್ ಭದ್ರತೆಯ ನಡುವೆ ಹಕೀಂ ಅವರನ್ನು ಪ್ರೆಸ್ ಕ್ಲಬ್‌ನಿಂದ ಹೊರತಂದು ಪೊಲೀಸ್ ವಾಹನದಲ್ಲೇ ಅವರ ಮನೆಗೆ ಕರೆದೊಯ್ಯಲಾಯಿತು.

ಬಳಿಕ ಪೊಲೀಸರು ಸ್ಥಳದಲ್ಲಿ ನೆರೆದಿದ್ದ ಅಶೋಕ್ ರೈ ಅವರ ಬೆಂಬಲಿಗರನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಪುತ್ತೂರು ಕಾಂಗ್ರೆಸ್‌ನೊಳಗಿನ ಈ ಕಾರ್ಯಕರ್ತ ಶಾಸಕ ಬೆಂಬಲಿಗರ ಬಹಿರಂಗ ಗಲಾಟೆ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.