SK Home Ad
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಬೆಳ್ತಂಗಡಿ: ಭಾರಿ ಮಳೆಗೆ ತುಂಬಿ ಹರಿದ ನದಿಗಳು, ಜನಜೀವನ ಅಸ್ತವ್ಯಸ್ಥ

ಬೆಳ್ತಂಗಡಿ: ಭಾರಿ ಮಳೆಗೆ ತುಂಬಿ ಹರಿದ ನದಿಗಳು, ಜನಜೀವನ ಅಸ್ತವ್ಯಸ್ಥ

0
49

ಮಂಗಳೂರು: ಬೆಳ್ತಂಗಡಿ ತಾಲೂಕಿನಲ್ಲಿ ಇಡೀ ದಿನ ಸುರಿದ ಭಾರಿ ಮಳೆಯಿಂದ ಅಲ್ಲಲ್ಲಿ ಗುಡ್ಡ ಕುಸಿತ, ರಸ್ತೆ ಸಂಪರ್ಕ ಕಡಿತ, ಮನೆ, ಅಂಗಡಿಗಳಿಗೆ ನೀರು ನುಗ್ಗಿದ ಘಟನೆಗಳು, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಅಲ್ಲಲ್ಲಿ ವಾಹನ ಸಂಚಾರಕ್ಕೆ ಅಡಚಣೆ, ತೋಟಗಳಿಗೆ ನೀರು ನುಗ್ಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ನೇತ್ರಾವತಿ, ಮೃತ್ಯುಂಜಯ ಹಾಗೂ ಇತರ ನದಿಗಳು ತುಂಬಿ ಹರಿದು ಮುಂಡಾಜೆ, ಕಾಯರ್ತೋಡಿ, ಕಡಂಬಳ್ಳಿ, ಆನಂಗಳ್ಳಿ, ಮುಂಡ್ರುಪಾಡಿ, ಅರೆಕಲ್ಲು, ಕುಡೆಂಚಿ, ಮೊಗ್ರು, ಮುಗೇರಡ್ಕ, ದಂಬೆತ್ತಿಮಾರು, ಬರೆಮೇಲು ಮೊದಲಾದ ಕಡೆ ನೂರಾರು ಕೃಷಿ ತೋಟಗಳು ಜಲಾವೃತಗೊಂಡವು.

ಕಿಲ್ಲೂರು-ಲಾಯಿಲ ರಸ್ತೆಗೆ ಸೋಮಾವತಿ ನದಿನೀರು ಪುತ್ರಬೈಲು ಸಮೀಪ ರಸ್ತೆಗೆ ನುಗ್ಗಿ ಸಂಚಾರ ಕೆಲಕಾಲ ಸ್ಥಗಿತಗೊಳಿಸಲಾಯಿತು. ಕುತ್ರೊಟ್ಟು-ಚಂದ್ಕೂರು ಸೇತುವೆ ಜಲಾವೃತಗೊಂಡು ವಾಹನ ಸಂಚಾರ ಸ್ಥಗಿತಗೊಂಡಿತು. ಉಜಿರೆ-ಗುರಿಪಳ್ಳ ರಸ್ತೆಯ ಅಂಬಡಬೆಟ್ಟು ಸಂಚಾರದ ನೂತನ ಸೇತುವೆ ಮುಳುಗುವ ಭೀತಿ ಎದುರಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಯಿತು.

ಮಧ್ಯಾಹ್ನ ವೇಳೆ ಧರ್ಮಸ್ಥಳ-ಉಜಿರೆ ಹೆದ್ದಾರಿಯ ಸ್ನಾನಘಟ್ಟ ಬಳಿ ಮಣ್ಣಸಂಕ ರಸ್ತೆಯಲ್ಲಿ ಐದು ಅಡಿಯಷ್ಟು ನೀರು ಹರಿದು ಸುಮಾರು ಒಂದು ತಾಸು ಕಾಲ ವಾಹನ ಸಂಚಾರ ವ್ಯತ್ಯಯ ಉಂಟಾಯಿತು. ಬೆಳ್ತಂಗಡಿ ರಸ್ತೆಯ ಉಜಿರೆ ಕೆಳಗಿನ ಪೆಟ್ರೋಲ್ ಬಂಕ್ ಬಳಿ ಚರಂಡಿ ನೀರು ರಸ್ತೆಗೆ ನುಗ್ಗಿ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಯಿತು.

ನೆರಿಯ ಗ್ರಾಮದ ಗಂಡಿಬಾಗಿಲಿನ ಸಿಯೋನ್ ಆಶ್ರಮದ ತಡೆಗೋಡೆ ಕುಸಿದು ಲಕ್ಷಾಂತರ ರೂ. ಹಾನಿ ಉಂಟಾಗಿದೆ. ಧರ್ಮಸ್ಥಳ-ಕಲ್ಮಂಜ ರಸ್ತೆಯ ಗುಂಡಿ ಬಳಿ ಧರೆ ಕುಸಿದು ವಾಹನ ಸಂಚಾರಕ್ಕೆ ತೊಡಕುಂಟಾಗಿದೆ ಗುಡ್ಡ ಭಾಗದಿಂದ ನೀರು ಹರಿದು ಬರುತ್ತಿದ್ದು, ಇನ್ನಷ್ಟು ಕುಸಿಯವ ಸಾಧ್ಯತೆ ಇದೆ. ಮಳೆ ನೀರು ರಸ್ತೆಯಲ್ಲೇ ಹರಿದು ಅಲ್ಲಲ್ಲಿ ರಸ್ತೆಯೂ ಕುಸಿಯುವ ಭೀತಿಯಿದೆ.

ಲಾಯಿಲ ಗ್ರಾಮದ ಆದರ್ಶ ನಗರದಲ್ಲಿ ರತ್ನಾಕರ ಆಚಾರ್ಯ ನಿರ್ಮಿಸುತ್ತಿರುವ ನೂತನ ಮನೆಯ ಆವರಣ ಗೋಡೆ ಕುಸಿದು ಕೆಳಭಾಗದಲ್ಲಿರುವ ಉಮೇಶ್ ಆಚಾರ್ಯ ಎಂಬವರ ಮನೆಗೆ ಹಾನಿಯಾಗಿದೆ. ಆವರಣ ಗೋಡೆ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯೊಳಗೆ ಇದ್ದ ಮಹಿಳೆಗೆ ಅಲ್ಪ ಸ್ವಲ್ಪ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಮಿತ್ತಬಾಗಿಲು ಗ್ರಾಮದ ಕೊಪ್ಪದ ಗಂಡಿ, ಚಾರ್ಮಾಡಿ ಗ್ರಾಮದ ಅರಣಪಾದೆ ಕಿರು ಸೇತುವೆಗಳು ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ.

ಚಿಬಿದ್ರೆ ಗ್ರಾಮದ ಪೆರಿಯಡ್ಕ ಕುಡುಮಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಅಂಗಳಕ್ಕೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಮುಂಡಾಜೆಯ ಅಣ್ಣು ಕಜೆ, ಮಹೇಂದ್ರ ಪರಾಂಜಪೆ ಎಂಬವರ ಮನೆಯ ಹಿಂಭಾಗದ ಗುಡ್ಡ ಕುಸಿತ ಉಂಟಾಗಿದೆ. ಮುಂಡಾಜೆಯ ಸೋಮಂತಡ್ಕದ ಖಾಸಗಿ ಮೊಬೈಲ್ ಟವರ್‌ನ ವಿದ್ಯುತ್ ಪರಿವರ್ತಕದ ಸಮೀಪ ಗುಡ್ಡ ಕುಸಿತದಿಂದ ಅಪಾಯದ ಸ್ಥಿತಿ ಇದೆ. ಧರ್ಮಸ್ಥಳದ ಪೊಸಳಿಗೆಯಲ್ಲಿ ಕೃಷ್ಣಪ್ಪ ಎಂಬವರ ಮನೆಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.

ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿದ್ದು ಮುಂಡಾಜೆ ಸೋಮಂತಡ್ಕ, ಬಲ್ಯಾರ್ ಕಾಪು, ಅಗರಿ ಮೊದಲಾದ ರಸ್ತೆಗಳಲ್ಲಿ ನೀರು ತುಂಬಿ ಹರಿದು ಕೆಲವು ಮನೆಗಳಿಗೆ ನೀರು ನುಗ್ಗಿದೆ. ಇನ್ನೂ ಕೆಲವು ಮನೆಗಳ ಅಂಗಳಗಳು ಜಲಾವೃತಗೊಂಡವು. ಗಣೇಶ ಶೆಟ್ಟಿ, ರವಿಚಂದ್ರ, ಸೇಸಪ್ಪ ಎಂಬವರ ಮನೆಗಳ ಒಳಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.