SK Home Ad
Home ಸುದ್ದಿ ರಾಜ್ಯ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್: ಹೊಸ ಹುದ್ದೆಗಳ ನೇಮಕಾತಿಗೆ ಸಿದ್ಧತೆ!

ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್: ಹೊಸ ಹುದ್ದೆಗಳ ನೇಮಕಾತಿಗೆ ಸಿದ್ಧತೆ!

0
94
ಸಾಂದರ್ಭಿಕ ಚಿತ್ರ

ಪದವಿ, ಪಿಯುಸಿ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ KEA ಕಡೆಯಿಂದ 4,699 ತಾಂತ್ರಿಕೇತರ, ತಾಂತ್ರಿಕ ಹುದ್ದೆಗಳಿಗೆ ನೇಮಕಾತಿಗಾಗಿ ನವೆಂಬರ್-ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆಯಲಿವೆ

ಬೆಂಗಳೂರು: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಪದವಿ ಹಾಗೂ ಪಿಯುಸಿ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಹಿಸುದ್ದಿ ನೀಡಿದೆ. ಪದವಿ ಮತ್ತು ಪಿಯುಸಿ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗಾಗಿ ಒಟ್ಟು 4,699 ತಾಂತ್ರಿಕೇತರ ಹಾಗೂ ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಈ ತಿಂಗಳಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ, ಐಎಎಸ್ ತಿಳಿಸಿದ್ದಾರೆ.

ಈ ಹುದ್ದೆಗಳಿಗೆ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಲಿಖಿತ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಯಾವ ಇಲಾಖೆಯಲ್ಲಿ ಯಾವ ಹುದ್ದೆಗಳು ಖಾಲಿ ಇವೆ, ಯಾವ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು ಹಾಗೂ ಪರೀಕ್ಷೆಯ ಪಠ್ಯಕ್ರಮ ಸೇರಿದಂತೆ ಅಗತ್ಯ ಮಾಹಿತಿಯನ್ನು ಅಭ್ಯರ್ಥಿಗಳು ಮುಂಚಿತವಾಗಿ ಪರಿಶೀಲಿಸಿಕೊಂಡು ಅಧ್ಯಯನ ಆರಂಭಿಸಬಹುದು ಎಂದು ಕೆಇಎ ತಿಳಿಸಿದೆ.

ಪದವೀಧರರಿಗೆ 2,421 ಹುದ್ದೆಗಳು : ಒಟ್ಟು 4,699 ಹುದ್ದೆಗಳಲ್ಲಿ ಪದವಿ ಮಟ್ಟದ ತಾಂತ್ರಿಕೇತರ ಹುದ್ದೆಗಳು 2,421 ಇವೆ. ವಿವಿಧ ಇಲಾಖೆಗಳಲ್ಲಿನ ಈ ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರ ಅರ್ಹತಾ ಮಾನದಂಡಗಳ ಸಂಪೂರ್ಣ ವಿವರವನ್ನು ಅಧಿಕೃತ ಅಧಿಸೂಚನೆಯಲ್ಲಿ ಪ್ರಕಟಿಸಲಾಗುತ್ತದೆ.

ಪಿಯುಸಿ ಅಭ್ಯರ್ಥಿಗಳಿಗೂ ಅವಕಾಶ : ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗಾಗಿ 2,062 ತಾಂತ್ರಿಕೇತರ ಹುದ್ದೆಗಳು ಲಭ್ಯವಿವೆ. ಹೀಗಾಗಿ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳ ಜೊತೆಗೆ ಪಿಯುಸಿ ವಿದ್ಯಾರ್ಹತೆ ಹೊಂದಿರುವ ಉದ್ಯೋಗಾಕಾಂಕ್ಷಿಗಳಿಗೂ ಸರ್ಕಾರಿ ಉದ್ಯೋಗ ಪಡೆಯಲು ಉತ್ತಮ ಅವಕಾಶ ದೊರೆಯಲಿದೆ.

ಇನ್ನು ವಿವಿಧ ವಿಭಾಗಗಳಲ್ಲಿ 216 ತಾಂತ್ರಿಕ ಹುದ್ದೆಗಳು ಇರುವುದಾಗಿ ಕೆಇಎ ಮಾಹಿತಿ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಇಲಾಖೆಗಳು ಹಾಗೂ ಹೊಸ ಹುದ್ದೆಗಳು ಈ ನೇಮಕಾತಿ ಪ್ರಕ್ರಿಯೆಗೆ ಸೇರ್ಪಡೆಯಾಗುವ ಸಾಧ್ಯತೆಯೂ ಇದೆ.

ನವೆಂಬರ್-ಡಿಸೆಂಬರ್‌ನಲ್ಲಿ ಲಿಖಿತ ಪರೀಕ್ಷೆ : ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಪ್ರಕಟವಾದ ಬಳಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾಗುತ್ತದೆ. ಈಗಾಗಲೇ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಲಿಖಿತ ಪರೀಕ್ಷೆ ನಡೆಸಲು ಸಿದ್ಧತೆ ನಡೆದಿದೆ ಎಂದು ಕೆಇಎ ತಿಳಿಸಿದೆ. ಹುದ್ದೆವಾರು ವಿದ್ಯಾರ್ಹತೆ, ಇಲಾಖೆಗಳ ವಿವರ, ಅರ್ಜಿ ಸಲ್ಲಿಸುವ ವಿಧಾನ, ವಯೋಮಿತಿ, ಶುಲ್ಕ, ಪರೀಕ್ಷಾ ವಿಧಾನ ಹಾಗೂ ಪಠ್ಯಕ್ರಮದ ಕುರಿತು ಸಂಪೂರ್ಣ ಮಾಹಿತಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ಪ್ರಕಟಿಸಲಾಗುತ್ತದೆ.

ಅಭ್ಯರ್ಥಿಗಳು ಅಧಿಸೂಚನೆ ಪ್ರಕಟವಾದ ನಂತರ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ, ತಮ್ಮ ವಿದ್ಯಾರ್ಹತೆಗೆ ಅನುಗುಣವಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಈಗಾಗಲೇ ಲಭ್ಯವಿರುವ ಹುದ್ದೆ ಹಾಗೂ ಪಠ್ಯಕ್ರಮದ ಮಾಹಿತಿಯನ್ನು ಪರಿಶೀಲಿಸಿಕೊಂಡು ಪರೀಕ್ಷಾ ತಯಾರಿ ಆರಂಭಿಸುವಂತೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

ಒಟ್ಟು 4,744 ಹುದ್ದೆಗಳ ಪೈಕಿ 2,421 ಪದವಿ ಮಟ್ಟದ ತಾಂತ್ರಿಕೇತರ, 2,062 ಪಿಯುಸಿ ಮಟ್ಟದ ತಾಂತ್ರಿಕೇತರ ಹಾಗೂ 216 ತಾಂತ್ರಿಕ ಹುದ್ದೆಗಳಿದ್ದು, ಮುಂದಿನ ದಿನಗಳಲ್ಲಿ ಹುದ್ದೆಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.