SK Home Ad
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಹಳಿಯ ಮೇಲೆ ಭಾರಿ ಭೂಕುಸಿತ: ರೈಲು ಸಂಚಾರ ಸಂಪೂರ್ಣ ಸ್ಥಗಿತ

ಹಳಿಯ ಮೇಲೆ ಭಾರಿ ಭೂಕುಸಿತ: ರೈಲು ಸಂಚಾರ ಸಂಪೂರ್ಣ ಸ್ಥಗಿತ

0
47

ಮಂಗಳೂರು: ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮೈಸೂರು ರೈಲ್ವೆ ವಿಭಾಗದ ಯಡಕುಮರಿ-ಶಿರಿಬಾಗಿಲು ರೈಲು ನಿಲ್ದಾಣಗಳ ನಡುವಿನ ಅರೆಬೆಟ್ಟದ ಸಮೀಪ ಆ. 2ರಂದು ರಾತ್ರಿ ಭಾರಿ ಭೂಕುಸಿತ ಸಂಭವಿಸಿದೆ.

ಈ ಪರಿಣಾಮ ರೈಲು ಹಳಿಯ ಮೇಲೆ ಅಪಾರ ಪ್ರಮಾಣದ ಮಣ್ಣು ಹಾಗೂ ಬೃಹತ್ ಬಂಡೆಗಳು ಕುಸಿದುಬಿದ್ದು, ಬೆಂಗಳೂರು-ಮಂಗಳೂರು ಹಾಗೂ ಕರಾವಳಿ ಭಾಗವನ್ನು ಸಂಪರ್ಕಿಸುವ ಪ್ರಮುಖ ರೈಲು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ನೈಋತ್ಯ ರೈಲ್ವೆ 7 ಪ್ರಮುಖ ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಿದ್ದು, ಕೆಲ ರೈಲುಗಳನ್ನು ಮಧ್ಯಂತರ ನಿಲ್ದಾಣಗಳಲ್ಲೇ ಸ್ಥಗಿತಗೊಳಿಸಿದೆ. ಇದರಿಂದಾಗಿ ನೂರಾರು ಪ್ರಯಾಣಿಕರು ವಿವಿಧ ನಿಲ್ದಾಣಗಳಲ್ಲಿ ಸಿಲುಕಿ ತೀವ್ರ ಪರದಾಡುವಂತಾಗಿದೆ.

ಭಾಗಶಃ ರದ್ದಾದ ರೈಲುಗಳ ವಿವರ:
16585 ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್: ಹಾಸನದಲ್ಲೇ ಪ್ರಯಾಣ ಅಂತ್ಯ; ಹಾಸನ-ಮುರುಡೇಶ್ವರ ನಡುವೆ ಸಂಚಾರ ರದ್ದು.
16511 ಬೆಂಗಳೂರು-ಕೊಝಿಕೋಡ್ ಎಕ್ಸ್‌ಪ್ರೆಸ್: ಹಾಸನದಲ್ಲೇ ಸ್ಥಗಿತ; ಹಾಸನ-ಕೊಝಿಕೋಡ್ ನಡುವೆ ಸೇವೆ ರದ್ದು.
17377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್: ಹಾಸನದಲ್ಲೇ ಕೊನೆ; ಹಾಸನ-ಮಂಗಳೂರು ನಡುವೆ ಸಂಚಾರ ಇರುವುದಿಲ್ಲ.
16595 ಬೆಂಗಳೂರು-ಕಾರವಾರ ಎಕ್ಸ್‌ಪ್ರೆಸ್: ಸಕಲೇಶಪುರದಲ್ಲೇ ಕೊನೆಗೊಳ್ಳಲಿದ್ದು, ಸಕಲೇಶಪುರ-ಕಾರವಾರ ನಡುವಿನ ಸೇವೆ ಸ್ಥಗಿತಗೊಳ್ಳಲಿದೆ.

ಹಿಂತಿರುಗುವ ರೈಲುಗಳ ಸಂಚಾರದಲ್ಲೂ ಬದಲಾವಣೆ
16586 ಮುರುಡೇಶ್ವರ-ಬೆಂಗಳೂರು ಎಕ್ಸ್‌ಪ್ರೆಸ್: ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲೇ ಪ್ರಯಾಣ ಅಂತ್ಯಗೊಳ್ಳಲಿದೆ.
61512 ಕೊಝಿಕೋಡ್-ಬೆಂಗಳೂರು ಎಕ್ಸ್‌ಪ್ರೆಸ್: ಕಬಕ ಪುತ್ತೂರಿನವರೆಗೆ ಮಾತ್ರ ಸಂಚಾರ ನಡೆಸಲಿದ್ದು, ಅಲ್ಲಿಂದ ಬೆಂಗಳೂರಿನವರೆಗಿನ ಸೇವೆ ರದ್ದಾಗಿದೆ.
17378 ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್‌ಪ್ರೆಸ್: ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲೇ ಸ್ಥಗಿತಗೊಳ್ಳಲಿದೆ.

ಕಾರ್ಯಾಚರಣೆಗೆ ಮಳೆ ಅಡ್ಡಿ: ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಹಳಿಯ ಮೇಲಿರುವ ಮಣ್ಣು ಹಾಗೂ ಬಂಡೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಅಡಚಣೆಯಾಗಿದೆ. ರೈಲ್ವೆ ಸಿಬ್ಬಂದಿ ಯಂತ್ರೋಪಕರಣಗಳ ನೆರವಿನಿಂದ ತೆರವು ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರಯಾಣಿಕರು ಹೊರಡುವ ಮುನ್ನ ರೈಲುಗಳ ಸಂಚಾರ ಸ್ಥಿತಿಯನ್ನು ಪರಿಶೀಲಿಸಿ ಪ್ರಯಾಣ ಬೆಳೆಸುವಂತೆ ನೈಋತ್ಯ ರೈಲ್ವೆ ಕೋರಿದೆ.