ಮಂಗಳೂರು: ಬೆಳ್ತಂಗಡಿಯ ಜಲೀಲ್ ಮಾಲಿಕತ್ವದ ಆಂಬ್ಯುಲೆನ್ಸ್ನಲ್ಲೇ ದಂಧೆ ಮಾಡುತ್ತಿದ್ದ ವಿಚಾರ ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿದ್ದು, ಆರೋಪಿ ಪರಾರಿಯಾಗಿದ್ದಾನೆ.
ಜಲೀಲ್ ಬಾಬಾ ತನ್ನ ಆಂಬ್ಯುಲೆನ್ಸ್ಅನ್ನೇ ಡ್ರಗ್ ಪೂರೈಕೆಯ ಅಡ್ಡೆ ಮಾಡಿಕೊಂಡಿದ್ದು, ಜು. 25ರಂದು ಮಂಗಳೂರಿನಲ್ಲಿ ಅಣ್ಣಪ್ಪ ಸ್ವಾಮಿ ಆಲಿಯಾಸ್ ಮನು ಎಂಬಾತನನ್ನು ಎಂಡಿಎಂಎ ಸಹಿತ ಬಂಧಿಸಲಾಗಿತ್ತು. ಈ ವೇಳೆ ಪೊಲೀಸರಿಗೆ ಬಾಗಲಕೋಟೆಯ ಡ್ರಗ್ ಲಿಂಕ್ ಬಗ್ಗೆ ಮಾಹಿತಿ ದೊರೆತಿತ್ತು.
ಹೀಗಾಗಿ ಜು. 15ರಂದು ಬಾಗಲಕೋಟೆಯ ಲಾಡ್ಜ್ ಮೇಲೆ ದಾಳಿ ನಡೆಸಿದ್ದ ಮಂಗಳೂರು ಸಿಸಿಬಿ ಪೊಲೀಸರು, ಅಲ್ಲಿ ಮೂವರನ್ನು ಬಂಧಿಸಿ ಐದು ಕೋಟಿ ರೂ. ಮೌಲ್ಯದ ಐದು ಕೆಜಿ ಡ್ರಗ್ಸ್ ವಶ ಪಡಿಸಿಕೊಂಡಿದ್ದರು.
ಈ ವೇಳೆ ಬೆಳ್ತಂಗಡಿಯ ಮಹಮ್ಮದ್ ಅಲ್ಫಾಜ್, ಮಹಮ್ಮದ್ ಮುಸ್ತಾಫಾ ಬಂಧಿತರಾಗಿದ್ದಾರೆ. ಬಂಧಿತ ಆರೋಪಿಗಳು ಜಲೀಲ್ ಬಾಬಾಗೆ ಡ್ರಗ್ಸ್ ಒದಗಿಸುತ್ತಿದ್ದ ಮಾಹಿತಿ ತನಿಖೆ ವೇಳೆ ಲಭ್ಯವಾಗಿದ್ದು, ಸದ್ಯ ಮೊಬೈಲ್ ಆಫ್ ಮಾಡಿಕೊಂಡು ಜಲೀಲ್ ಬಾಬಾ ನಾಪತ್ತೆ ಆಗಿದ್ದಾನೆ.






















