SK Home Ad
Home ಸುದ್ದಿ ರಾಜ್ಯ KPSC ಹಗರಣ: “ಎಂಎಲ್‌ಎ ಆಗಲು ಹಣ ಬೇಕು, ಪೇಪರ್ ಲೀಕ್ ಮಾಡೋಣ” ಬಯಲಾಯ್ತು ಸ್ಫೋಟಕ ಸತ್ಯ;...

KPSC ಹಗರಣ: “ಎಂಎಲ್‌ಎ ಆಗಲು ಹಣ ಬೇಕು, ಪೇಪರ್ ಲೀಕ್ ಮಾಡೋಣ” ಬಯಲಾಯ್ತು ಸ್ಫೋಟಕ ಸತ್ಯ; ರೆಸಾರ್ಟ್‌ಗಳಲ್ಲಿ ಪರೀಕ್ಷೆ!

0
116

KPSC ಹಗರಣ:  ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದಲ್ಲಿ ಸಿಐಡಿ ತನಿಖೆ ತೀವ್ರಗೊಂಡಿದ್ದು, ಬೆಚ್ಚಿಬೀಳಿಸುವ ಸತ್ಯಗಳು ಹೊರಬಂದಿವೆ. ಪ್ರಕರಣದ ಪ್ರಮುಖ ಆರೋಪಿಗಳಾದ

ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮತ್ತು ಮಧ್ಯವರ್ತಿ ಬಸವರಾಜ ಕನ್ನಾಳೆಯನ್ನು ಈಗಾಗಲೇ ಬಂಧಿಸಲಾಗಿದ್ದು, ಸದ್ಯ ಅವರು 10 ದಿನಗಳ ಕಾಲ ಸಿಐಡಿ ಕಸ್ಟಡಿಯಲ್ಲಿದ್ದಾರೆ.

ಬಂಧಿತ ಬಸವರಾಜ್ ಕನ್ನಾಳೆ ತಾನು ಮುಂದೆ ಎಂಎಲ್‌ಎ ಆಗುವ ರಾಜಕೀಯ ಆಸೆ ಹೊಂದಿದ್ದನು. ಇದಕ್ಕಾಗಿ ಹಣದ ಅಗತ್ಯವಿದ್ದ ಕಾರಣ, ಹಳೆಯ ಗೆಳೆಯ ಜ್ಞಾನೇಂದ್ರ ಕುಮಾರ್ ಬಳಿ “ನಾವು ಪೇಪರ್ ಡೀಲ್ ಮಾಡಿ ದುಡ್ಡು ಮಾಡೋಣ” ಎಂದು ಸಂಚು ರೂಪಿಸಿದ್ದನು.

ತನಿಖೆಯ ಪ್ರಕಾರ, ಪ್ರತಿ ಹುದ್ದೆಯನ್ನು ಬರೋಬ್ಬರಿ 40 ರಿಂದ 80 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಅಚ್ಚರಿಯೆಂದರೆ, ಆಯ್ಕೆಯಾದ 29 ಅಭ್ಯರ್ಥಿಗಳಿಗೆ ಸಾಮಾನ್ಯ ಪರೀಕ್ಷಾ ಕೇಂದ್ರಗಳ ಬದಲಿಗೆ ಬೆಂಗಳೂರು, ತುಮಕೂರು ಮತ್ತು ಆಂಧ್ರಪ್ರದೇಶದ ಐಷಾರಾಮಿ ರೆಸಾರ್ಟ್‌ಗಳಲ್ಲಿ ಪರೀಕ್ಷೆ ಬರೆಸಲಾಗಿತ್ತು.

ಇದೀಗ ಈ ಅಕ್ರಮದಲ್ಲಿ ಭಾಗಿಯಾಗಿದ್ದ 10 ಅಭ್ಯರ್ಥಿಗಳು ತಮ್ಮ ತಪ್ಪೊಪ್ಪಿಕೊಂಡು ‘ಅಪ್ರೂವರ್’(ಸಾಕ್ಷಿ) ಆಗಲು ಮುಂದಾಗಿದ್ದಾರೆ. ಬಸವರಾಜ್ ಕನ್ನಾಳೆ ನಿವಾಸವನ್ನು ಸೀಜ್ ಮಾಡಿರುವ ಸಿಐಡಿ, ಅಲ್ಲಿನ ಸಿಸಿಟಿವಿ ದೃಶ್ಯಗಳನ್ನು ವಶಪಡಿಸಿಕೊಂಡಿದೆ. ಈ ಹಗರಣದಲ್ಲಿ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಎ-1 ಆರೋಪಿಯಾಗಿದ್ದರೆ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಎ-5 ಆರೋಪಿಯಾಗಿದ್ದಾರೆ.