ಚಿತ್ರದುರ್ಗ: ಗೋರಕ್ಷಣೆ ನೆಪದಲ್ಲಿ ರೈತರ ಜಾನುವಾರುಗಳನ್ನು ತಡೆದು ದೌರ್ಜನ್ಯ ಎಸಗಿದ ಆರೋಪದ ಮೇಲೆ ಭಜರಂಗದಳದ ಚಿತ್ರದುರ್ಗ ನಗರ ಪ್ರಮುಖ ದೀಪಕ್ ರಾಜ್ ಸೇರಿ ಹಲವರಿಗೆ ರೈತರು ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊಪ್ಪಳ ತಾಲೂಕಿನ ಗಿಣಗೇರಾ ಗ್ರಾಮದ ಬಳಿ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದೆ. ಚಿತ್ರದುರ್ಗದಿಂದ ಕೊಪ್ಪಳಕ್ಕೆ ತೆರಳಿದ್ದ ಭಜರಂಗದಳದ ಮುಖಂಡ ದೀಪಕ್ ರಾಜ್ ಹಾಗೂ ಅವರ ತಂಡ ಸಂತೆಗೆ ಜಾನುವಾರು ಒಯ್ಯುತ್ತಿದ್ದ ರೈತರನ್ನು ತಡೆದಿದ್ದರು. ಇದರಿಂದ ಆಕ್ರೋಶಗೊಂಡ ಗಿಣಗೇರಾ ಗ್ರಾಮದ ರೈತ ಕಿರಣ್ ಮತ್ತು ಇತರರು ದೀಪಕ್ ರಾಜ್ ತಂಡದ ಮೇಲೆ ಹಲ್ಲೆ ನಡೆಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಥಳಿತಕ್ಕೊಳಗಾದ ದೀಪಕ್ ರಾಜ್ ಮತ್ತು ಇತರರು ಕೈಮುಗಿದು ಕ್ಷಮೆ ಕೇಳುತ್ತಿರುವ ದೃಶ್ಯ ಕಂಡುಬಂದಿದೆ. ರೈತರ ಜಾನುವಾರುಗಳನ್ನು ಅಡ್ಡಗಟ್ಟಿ ದೌರ್ಜನ್ಯ ಎಸಗಿದ ಆರೋಪ ಭಜರಂಗದಳದ ತಂಡದ ಮೇಲಿದೆ.
ಕೊಪ್ಪಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿಲ್ಲ. ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಘಟನೆಯ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ ಎನ್ನಲಾಗಿದೆ.






















