ಚಿತ್ರದುರ್ಗ: ಅಮಿತ್ ಶಾ ಅವರು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ದಕ್ಷಿಣ ಭಾರತದ ಅಪ್ರತಿಮ ನಾಯಕ ಎಂದು ಬಣ್ಣಿಸಿದ್ದು, ಬಿಜೆಪಿ ದಕ್ಷಿಣ ಭಾರತದಲ್ಲಿ ನೆಲೆ ನಿಲ್ಲಲು ಯಡಿಯೂರಪ್ಪರ ಕೊಡುಗೆ ಅಪಾರ ಎಂದು ಪ್ರಶಂಸಿಸಿದರು.
ಚಿತ್ರದುರ್ಗದಲ್ಲಿ ಆಯೋಜಿಸಿದ್ದ ‘ಯಡಿಯೂರಪ್ಪ ಅಭಿಮಾನೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಡಿಯೂರಪ್ಪರ ಐದು ದಶಕಗಳ ರಾಜಕೀಯ ಸೇವೆಯನ್ನು ಸ್ಮರಿಸಿದರು.
‘ರೈತರ ನಾಯಕ ಯಡಿಯೂರಪ್ಪ’ : “ದೇಶದ ರೈತರ ನಾಯಕ ಯಡಿಯೂರಪ್ಪ ಅವರು 50 ವರ್ಷಗಳ ಕಾಲ ಜನಸೇವೆ ಮಾಡಿದ್ದಾರೆ. ಅವರು ‘ಜನಸೇವೆ ಪ್ರಭು ಸೇವೆ’ ಎಂಬ ಮಂತ್ರದಲ್ಲಿ ಕೆಲಸ ಮಾಡಿದವರು,” ಎಂದು ಅಮಿತ್ ಶಾ ಹೇಳಿದರು. ರೈತರ ಸಮಸ್ಯೆಗಳ ಕುರಿತು ಹೋರಾಟ ನಡೆಸಿ, ಬಗರಹುಕುಂ ಸೇರಿದಂತೆ ಅನೇಕ ಜನಪರ ಚಳವಳಿಗಳಲ್ಲಿ ಭಾಗಿಯಾಗಿದ್ದ ಯಡಿಯೂರಪ್ಪರು ರೈತಪರ ರಾಜಕಾರಣಕ್ಕೆ ಹೊಸ ದಿಕ್ಕು ನೀಡಿದರು ಎಂದು ಶಾ ಹೇಳಿದರು.
‘ದಕ್ಷಿಣ ಭಾರತದಲ್ಲಿ ಬಿಜೆಪಿ ಕಟ್ಟಿದ ನಾಯಕ’ : ಯಡಿಯೂರಪ್ಪರು ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಸಾಮಾನ್ಯ ಕಾರ್ಯಕರ್ತನಾಗಿ ಹೋರಾಟ ಆರಂಭಿಸಿ, ಸೈಕಲ್‌ನಲ್ಲಿ ರಾಜ್ಯ ಸುತ್ತಿ ಪಕ್ಷ ಸಂಘಟನೆ ಮಾಡಿದ್ದರು ಎಂದು ಅಮಿತ್ ಶಾ ಸ್ಮರಿಸಿದರು. “ದಕ್ಷಿಣ ಭಾರತದಲ್ಲಿ ಬಿಜೆಪಿ ಅಸ್ತಿತ್ವವೇ ಇಲ್ಲದ ಸಮಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದವರು ಯಡಿಯೂರಪ್ಪ. ಅವರು ಕೇವಲ ತಮ್ಮ ದಾರಿಯಲ್ಲಿ ನಡೆದ ನಾಯಕ ಅಲ್ಲ; ಮತ್ತೊಬ್ಬರಿಗೆ ದಾರಿ ತೋರಿಸಿದ ನಾಯಕ,” ಎಂದು ಶಾ ಬಣ್ಣಿಸಿದರು.
‘ಯುವಕರಿಗೆ ಮಾದರಿ’ : ಯಡಿಯೂರಪ್ಪರ ಸರಳತೆ ಮತ್ತು ಕಾರ್ಯಶೈಲಿಯನ್ನು ಉಲ್ಲೇಖಿಸಿದ ಅಮಿತ್ ಶಾ,“ಅವರ ಜೇಬಿನಲ್ಲಿ ಯಾವಾಗಲೂ ಒಂದು ಚಿಕ್ಕ ಡೈರಿ ಇರುತ್ತದೆ. ಅದರಲ್ಲಿ ಎಲ್ಲ ವಿಷಯಗಳನ್ನು ಬರೆದುಕೊಳ್ಳುತ್ತಾರೆ. ಇಂದಿನ ಯುವಕರು ಅವರಿಂದ ಕಲಿಯಬೇಕು,” ಎಂದರು.
ಮಠ–ಧರ್ಮಗಳ ಒಗ್ಗಟ್ಟು : ಕಾರ್ಯಕ್ರಮದಲ್ಲಿ ವಿವಿಧ ಧರ್ಮ ಮತ್ತು ಸಮುದಾಯಗಳ ಸ್ವಾಮೀಜಿಗಳು ವೇದಿಕೆ ಹಂಚಿಕೊಂಡಿರುವುದನ್ನು ಉಲ್ಲೇಖಿಸಿದ ಶಾ, “ಯಡಿಯೂರಪ್ಪರ ವ್ಯಕ್ತಿತ್ವವೇ ಎಲ್ಲರನ್ನು ಒಂದೇ ವೇದಿಕೆಗೆ ಕರೆತಂದಿದೆ. ಇದು ರಾಜ್ಯ ಮತ್ತು ದೇಶಕ್ಕೆ ದೊಡ್ಡ ಸಂದೇಶ,” ಎಂದು ಹೇಳಿದರು.
ಮದಕರಿ ನಾಯಕ ಪ್ರತಿಮೆ ನಿರ್ಮಾಣ ಭರವಸೆ : ಚಿತ್ರದುರ್ಗದ ಐತಿಹಾಸಿಕ ಹಿನ್ನೆಲೆಯನ್ನು ಸ್ಮರಿಸಿದ ಅಮಿತ್ ಶಾ, “ಇದು ಮದಕರಿ ನಾಯಕ ಅವರ ಪುಣ್ಯಭೂಮಿ. ಇನ್ನೂ ಅವರ ಪ್ರತಿಮೆ ನಿರ್ಮಾಣವಾಗಿಲ್ಲ. ಚಿಂತೆ ಬೇಡ, ಪ್ರಧಾನಿ ನರೇಂದ್ರ ಮೋದಿ ಇದ್ದಾರೆ. ಮದಕರಿ ನಾಯಕ ಪ್ರತಿಮೆ ನಿರ್ಮಾಣ ಮಾಡುತ್ತೇವೆ,” ಎಂದು ಭರವಸೆ ನೀಡಿದರು.
ಕೃಷಿ ಬಜೆಟ್ ಹಾಗೂ ಬೆಂಗಳೂರು ಅಭಿವೃದ್ಧಿ : ಯಡಿಯೂರಪ್ಪರ ಆಡಳಿತ ಅವಧಿಯನ್ನು ನೆನಪಿಸಿಕೊಂಡ ಅಮಿತ್ ಶಾ, “ದೇಶದಲ್ಲಿ ಮೊದಲ ಬಾರಿಗೆ ರೈತರಿಗಾಗಿ ಕೃಷಿ ಬಜೆಟ್ ಮಂಡಿಸಿದವರು ಯಡಿಯೂರಪ್ಪ. ಬೆಂಗಳೂರು ಜಾಗತಿಕ ಟೆಕ್ ಹಬ್ ಆಗಲು ಅವರ ಕೊಡುಗೆ ಮಹತ್ವದ್ದಾಗಿದೆ,” ಎಂದು ಹೇಳಿದರು.
‘ಮಂತ್ರಿ ಸ್ಥಾನ ಬೇಡ ಎಂದ ನಾಯಕ’: ಕೇಂದ್ರದಲ್ಲಿ ಸಚಿವ ಸ್ಥಾನ ನೀಡಲು ಅವಕಾಶ ಇದ್ದರೂ, “ನನಗೆ ಮಂತ್ರಿ ಸ್ಥಾನ ಬೇಡ; ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ಕೆಲಸ ಮಾಡುತ್ತೇನೆ” ಎಂದು ಯಡಿಯೂರಪ್ಪ ಹೇಳಿದ್ದನ್ನು ಅಮಿತ್ ಶಾ ಸ್ಮರಿಸಿದರು.
ಅಭಿಮಾನೋತ್ಸವದಲ್ಲಿ ಸಂಭ್ರಮ : ಚಿತ್ರದುರ್ಗದಲ್ಲಿ ನಡೆದ ಅಭಿಮಾನೋತ್ಸವದಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು, ವಿವಿಧ ಮಠಗಳ ಸ್ವಾಮೀಜಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮವು ಯಡಿಯೂರಪ್ಪರ ರಾಜಕೀಯ ಜೀವನದ ಸಾಧನೆಗಳನ್ನು ಸ್ಮರಿಸುವ ವೇದಿಕೆಯಾಗಿತ್ತು.























