ಚಿತ್ರದುರ್ಗ: ಡಿ. ಸುಧಾಕರ್ ಅವರು ಕೇವಲ ಕಾಂಗ್ರೆಸ್ ಪಕ್ಷಕ್ಕೆ, ಚಿತ್ರದುರ್ಗ ಜಿಲ್ಲೆಗೆ ಮಾತ್ರ ಸೀಮಿತರಾದ ನಾಯಕರಾಗಿರಲಿಲ್ಲ, ಬದಲಾಗಿ ಅವರು ಇಡೀ ಕರ್ನಾಟಕ ರಾಜ್ಯಕ್ಕೆ ದೊಡ್ಡ ಆಸ್ತಿಯಾಗಿದ್ದರು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು.
ನಗರದ ಕ್ರೀಡಾಂಗಣದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗಿದ್ದ ರಾಜ್ಯದ ಸಚಿವ ಹಾಗೂ ಸ್ಥಳೀಯ ಶಾಸಕ ಡಿ. ಸುಧಾಕರ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಗಲಿದ ನಾಯಕನೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿ ಭಾವುಕರಾದರು.
ರಾಜಕೀಯದಲ್ಲಿ ಜಾತಿ, ಮತ, ಪಂಥಗಳಿಗಿಂತ ಜನಸೇವೆಯೇ ಮುಖ್ಯ ಎಂಬುದನ್ನು ತಮ್ಮ ಜೀವನದ ಮೂಲಕ ಅವರು ತೋರಿಸಿಕೊಟ್ಟಿದ್ದಾರೆ. ಇಂದು ಭೌತಿಕವಾಗಿ ಅವರು ನಮ್ಮೊಂದಿಗೆ ಇಲ್ಲದಿರಬಹುದು, ಆದರೆ ಅವರು ಮಾಡಿದ ನಿಸ್ವಾರ್ಥ ಸೇವೆ ಸದಾ ಶಾಶ್ವತವಾಗಿ ಉಳಿಯಲಿದೆ ಎಂದರು.
ಕುಟುಂಬಕ್ಕೆ ಸಾಂತ್ವನ: ಇದೇ ವೇಳೆ ಡಿ. ಸುಧಾಕರ್ ಅವರ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಅವರು, ಸುಧಾಕರ್ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಹಾಗೂ ಬೆಂಬಲಿಗರಿಗೆ ದಯಪಾಲಿಸಲಿ ಎಂದರು.
ಭದ್ರಾ ಮೇಲ್ದಂಡೆ ಯೋಜನೆಗೆ ಡಿ. ಸುಧಾಕರ್ ಹೆಸರು: ಡಿ. ಸುಧಾಕರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಚಿವ ಸಂತೋಷ್ ಲಾಡ್ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಅಗಲಿದ ನಾಯಕನ ಸ್ಮರಣಾರ್ಥ ʻಭದ್ರಾ ಮೇಲ್ದಂಡೆ ಯೋಜನೆ’ಗೆ ಡಿ. ಸುಧಾಕರ್ ಅವರ ಹೆಸರಿಡುವ ಪ್ರಸ್ತಾವನೆಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಸತತ ನಾಲ್ಕು ಬಾರಿ ಗೆದ್ದು ಶಾಸಕರಾಗಿ, ರಾಜ್ಯದ ಸಚಿವರಾಗಿ ಬಡವರು ಹಾಗೂ ರೈತರ ಪರವಾಗಿ ಅವರು ಮಾಡಿದ ಹತ್ತು-ಹಲವು ಜನಪರ ಕಾರ್ಯಗಳು ಸದಾ ಸ್ಮರಣೀಯ. ಅವರ ಈ ಅನುಪಮ ಸೇವೆಯ ಗೌರವಾರ್ಥವಾಗಿ, ಬಹುದೊಡ್ಡ ನೀರಾವರಿ ಯೋಜನೆಯಾದ ‘ಭದ್ರಾ ಮೇಲ್ದಂಡೆ ಯೋಜನೆ’ಗೆ ಡಿ. ಸುಧಾಕರ್ ಅವರ ಹೆಸರಿಡುವ ವಿಚಾರವನ್ನು ಸರ್ಕಾರದ ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ಮುಟ್ಟಿಸುವ ಪ್ರಾಮಾಣಿಕ ಕೆಲಸವನ್ನು ಮಾಡುತ್ತೇವೆ ಎಂದು ಸಂತೋಷ್ ಲಾಡ್ ತಿಳಿಸಿದರು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸಂತಾಪ: ಹಿರಿಯೂರು ಮತ್ತು ಚಿತ್ರದುರ್ಗ ಕ್ಷೇತ್ರದಲ್ಲಿ ಮುಂದಿನ 10 ವರ್ಷಗಳಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಅವರು ಈಗಾಗಲೇ ಮಾಡಿ ಮುಗಿಸಿದ್ದಾರೆ ಎನ್ನುವುದು ಅವರ ದಕ್ಷತೆಗೆ ಸಾಕ್ಷಿಯಾಗಿದೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ವರ್ಗ, ಅಭಿಮಾನಿಗಳಿಗೆ ಕರುಣಿಸಲಿ ಎಂದರು.























