ಚಿತ್ರದುರ್ಗ: ಹಿರಿಯೂರು ತಾಲೂಕಿನ ಕೆ.ಆರ್. ಹಳ್ಳಿ ಗೇಟ್ ಬಳಿ ಸಂಭವಿಸಿದ ಸರಣಿ ಅಪಘಾತದಲ್ಲಿ ದಾವಣಗೆರೆ ಕ್ಷೇತ್ರದ ಶಾಸಕ ಸಮರ್ಥ ಶಾಮನೂರು ಅವರ ಕಾರು ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ.
ಬೆಂಗಳೂರಿನಿಂದ ದಾವಣಗೆರೆಗೆ ಶಾಸಕ ಸಮರ್ಥ ಶಾಮನೂರು ಅವರು ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕೆ.ಆರ್. ಹಳ್ಳಿ ಗೇಟ್ ಬಳಿ ವೇಗವಾಗಿ ಬಂದ ಕಾರೊಂದು ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಹಿಂಬದಿಯಿಂದ ಬರುತ್ತಿದ್ದ ಶಾಸಕ ಸಮರ್ಥ ಶಾಮನೂರು ಅವರ ಕಾರು ಪಲ್ಟಿಯಾದ ಕಾರಿಗೆ ಡಿಕ್ಕಿ ಹೊಡೆದಿದೆ. ಇದೇ ವೇಳೆ ಶಾಸಕ ಸಮರ್ಥ ಶಾಮನೂರು ಅವರ ಕಾರಿಗೆ ಹಿಂಬದಿಯಿಂದ ಮತ್ತೊಂದು ಎರ್ಟಿಗಾ ಕಾರು ಡಿಕ್ಕಿ ಹೊಡೆದಿದೆ.
ಅಪಘಾತದ ಬಳಿಕ ಶಾಸಕ ಸಮರ್ಥ ಶಾಮನೂರು ಅವರು ಕಾರು ಬದಲಿಸಿಕೊಂಡು ದಾವಣಗೆರೆಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಪಲ್ಟಿಯಾದ ಕಾರಿನಲ್ಲಿದ್ದ ಸಂದೀಪ್ (45) ಎಂಬುವರಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣ ಹಿರಿಯೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬಳಿಕ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.






















