ಚಿತ್ರದುರ್ಗ: ಬಿಜೆಪಿ ಪಾದಯಾತ್ರೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ವಿಚಾರವಾಗಿ ಪ್ರತಿಕ್ರಿಯಿಸಿ, ನಾಗೇಂದ್ರಗೆ ಸಚಿವನಾಗಿ ಮಾಡಿದ್ದೇ ಕಾಂಗ್ರೆಸ್‌ನ ತಪ್ಪು. ಬಲಿಪಶು ಮಾಡಲು ಕಾಂಗ್ರೆಸ್‌ನಿಂದಲೇ ನಾಗೇಂದ್ರಗೆ ಮಂತ್ರಿಗಿರಿ ನೀಡಲಾಯಿತು. ಕಾಂಗ್ರೆಸ್ ಪಕ್ಷದ ಷಡ್ಯಂತ್ರಕ್ಕೆ ನಾಗೇಂದ್ರ ಬಲಿಯಾಗಿದ್ದಾರೆ ಎಂದು ಆರೋಪಿಸಿದರು.
ಜನರಿಗೆ ಮರಳು ಮಾಡುವ ಕಾಂಗ್ರೆಸ್‌ನ ಕುತಂತ್ರ ನಡೆಯಬಾರದು. ವಾಲ್ಮೀಕಿ ಹಗರಣದ ದುಡ್ಡು ದಲಿತರದ್ದೇ ಅಲ್ಲವೇ? ಎಂದು ಪ್ರಶ್ನಿಸಿದರು.
ಬಿಜೆಪಿಗೆ ಗಿಳಿಪಾಠ ಹೇಳುವ ನೈತಿಕತೆ ಇಲ್ಲ ಎಂಬ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ಪರಿಪ್ರಸಾದ್ ಬಗ್ಗೆ ಮಾತನಾಡುವುದು ಬೇಡ. ಯಾರು ಏನೆಂಬುದು ದೇಶಕ್ಕೆ ಗೊತ್ತಿದೆ. ಯೋಚಿಸಿ ಮಾತನಾಡಲಿ. ತನಿಖೆ ಶುರುವಾಗಿದೆ, ಎಲ್ಲವೂ ಬಯಲಾಗುತ್ತದೆ ಎಂದರು.
ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಮಾರ್ಗದ ಕಾಮಗಾರಿ ಮುಂಬರುವ ಲೋಕಸಭೆ ಚುನಾವಣೆ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದರು.
ಇದೇ ವೇಳೆ ಕೇರಳದ ದಕ್ಷಿಣ ವಿಭಾಗದ ಪಾಲಕ್ಕಾಡ್ ವಿಭಾಗದಿಂದ ಮಂಗಳೂರು ವಿಭಾಗವನ್ನು ಬೇರ್ಪಡಿಸಿ, ಮಂಗಳೂರು ವಿಭಾಗವನ್ನು ನೈರುತ್ಯ ರೈಲ್ವೆಯ ಮೈಸೂರು ವ್ಯಾಪ್ತಿಗೆ ಸೇರ್ಪಡೆ ಮಾಡಿರುವ ವಿಚಾರವಾಗಿ ಮಾತನಾಡಿ, ಯಾವುದೇ ನ್ಯೂನತೆ ಇಲ್ಲದೆ ಬೇರ್ಪಡಿಸಿದ್ದೇವೆ. ಕೇರಳದಲ್ಲಿ ಪ್ರತಿಭಟನೆ ವ್ಯಕ್ತವಾಗಿದೆ, ಪ್ರತಿಭಟನೆ ಮಾಡಲಿ. ನಮ್ಮ ರಾಜ್ಯದಲ್ಲಿ ಒಂದೇ ಬಂದರು ಇದೆ, ಕೇರಳದಲ್ಲಿ 22 ಕಡೆ ಚಟುವಟಿಕೆ ನಡೆಯುತ್ತದೆ. ನಮ್ಮ ಜನವೂ ಬದುಕಬೇಕಲ್ಲ ಎಂದು ಅಧಿಕಾರಿಗಳು, ಸಂಸದರ ಜತೆ ಚರ್ಚಿಸಿ ಕ್ರಮ ಕೈಗೊಂಡಿದ್ದೇವೆ ಎಂದು ಸೋಮಣ್ಣ ಸ್ಪಷ್ಟಪಡಿಸಿದರು.





















