‘ಸರ್ಕಾರದಲ್ಲಿ ಒಗ್ಗಟ್ಟಿಲ್ಲ, ಗೊಂದಲವೇ ಹೆಚ್ಚು’; ಕಾಂಗ್ರೆಸ್ ಆಡಳಿತದ ವಿರುದ್ಧ ವಿಪಕ್ಷ ನಾಯಕ ಟೀಕೆ – ಖಜಾನೆ ಖಾಲಿ, ಅಭಿವೃದ್ಧಿ ಶೂನ್ಯ: ಕಾಂಗ್ರೆಸ್ ಒಳಜಗಳದಿಂದ ಮೂರನೇ ಸಿಎಂ ಬಂದರೂ ಅಚ್ಚರಿಯಿಲ್ಲ – ಆರ್. ಅಶೋಕ್
ಚಿತ್ರದುರ್ಗ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಸಿಎಂ ಆದ ಬಳಿಕ ಮ್ಯಾಜಿಕ್ ಎಂದು ಬಿಂಬಿಸಲಾಗಿತ್ತು, ಈಗ ನೋಡಿದರೆ ಟುಸ್ ಪಟಾಕಿ ಆಗೋಗಿದೆ ಎಂದು ಲೇವಡಿ ಮಾಡಿದರು.
ಸ್ವತಃ ಅವರೇ ಸಾರಿಗೆ ಬಸ್ ಓಡಿಸಲು ಡೀಸೆಲ್ಗೆ ಕಾಸಿಲ್ಲ ಎಂದಿದ್ದಾರೆ. ರಾಜ್ಯದಲ್ಲಿ ಕಬ್ಬು ಬೆಳೆಗಾರರು ಪರಿಹಾರ ಕೇಳಿದರೆ, ಖಜಾನೆ ಖಾಲಿಯಾಗಿದೆ ಎನ್ನುತ್ತಿದ್ದಾರೆ. ಕಳೆದ ಅಸೆಂಬ್ಲಿ ವೇಳೆ ಫೈನಾನ್ಸ್ ಇಲಾಖೆ ಖಾಲಿ ಪ್ರದರ್ಶನ ಮಾಡಿದ್ದಾರೆ. ಬ್ಯಾಂಕ್ಗಳಲ್ಲಿ ಸಾಲ ಕೊಡದ ಪರಿಸ್ಥಿತಿ ಬಂದಿದೆ. ಯಾವ ಪುರುಷಾರ್ಥಕ್ಕೆ ಸರ್ಕಾರ ನಡೆಸುತ್ತಿದ್ದಾರೆ?” ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ರಸ್ತೆಗಳು ಗುಂಡಿ ಬಿದ್ದು ಓಡಾಡಲು ಆಗುತ್ತಿಲ್ಲ. ರಾಜ್ಯದ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ನೀರಾವರಿ ಯೋಜನೆಗೆ ಅನುದಾನವಿಲ್ಲ, ಯೋಜನೆಯೇ ಇಲ್ಲ. ಬರ ಬಂದು 5 ತಿಂಗಳಾಗಿದೆ, ರೈತರ ಪಾಲಿಗೆ ಈ ಸರ್ಕಾರ ಸತ್ತೋಗಿದೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯೇ ಎಂದು ಕಿಡಿಕಾರಿದರು.
ನಾವು ರೈತರಿಗೆ 25 ಸಾವಿರ ಪರಿಹಾರಕ್ಕೆ ಡಿಮ್ಯಾಂಡ್ ಮಾಡಿದ್ದೆವು. ರಾಜ್ಯ ಸರ್ಕಾರ 2500 ರೂ. ಘೋಷಣೆ ಮಾಡಿತು. ಅದನ್ನೂ ನೀಡಲು 17 ನಿಬಂಧನೆಗಳನ್ನು ಹಾಕಿದ್ದಾರೆ. ಸುಖ ಸಂಸಾರಕ್ಕೆ 12 ಸೂತ್ರ, ರೈತರಿಗೆ 17 ಸೂತ್ರ ಹಾಕಿದೆ ಸರ್ಕಾರ. ಇಂಥ ದರಿದ್ರ ಸರ್ಕಾರವನ್ನು ರಾಜ್ಯದ ಇತಿಹಾಸದಲ್ಲೇ ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದಿಂದ ಎಲ್ಲೆಡೆ ಲೂಟಿ, ಭ್ರಷ್ಟಾಚಾರ ನಡೆಯುತ್ತಿದೆ. ಮಾಜಿ ಸಚಿವ ಬಳ್ಳಾರಿಯ ನಾಗೇಂದ್ರ ಲೂಟಿ ಮಾಡಿದರು, ಅಬಕಾರಿ ಇಲಾಖೆಯಲ್ಲಿ ಭರ್ಜರಿ ಲೂಟಿ ಮಾಡಿದರು, ಈಗ ಬೆಂಗಳೂರಿನ ಕಸದಲ್ಲೂ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಒಳಜಗಳದಿಂದ ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಿಡಿ ಬಂದ ಬಳಿಕವೇ ಈ ಎಲ್ಲ ಬೆಳವಣಿಗೆ ನಡೆಯುತ್ತಿದೆ. ಸ್ಟಿಂಗ್ ಯಾರು ಮಾಡಿದರು, ಏನು ಎಂಬುದೇ ಚರ್ಚೆಯಾಗಿತ್ತು, ಈಗ ಆ ಸ್ಟಿಂಗ್ ಕೇಸ್ನ್ನೂ ಮುಚ್ಚಿ ಹಾಕಿಬಿಟ್ಟಿದ್ದಾರೆ. ಕ್ಲೀನ್ ಚಿಟ್ ಕೊಡುವ ಅವಶ್ಯಕತೆ ಏನಿತ್ತು? ಯಾರು ಮಾಡಿದರು ಎಂದು ಈವರೆಗೆ ಹೇಳಿಲ್ಲ. ಸಿದ್ದರಾಮಯ್ಯ ಅವರಿಗೆ ಅವಮಾನ ಮಾಡಿ, ಅವರು ಹೊರಬರದಂತೆ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಶಾಸಕರಿಗೇ ಕಾಂಗ್ರೆಸ್ ಪಕ್ಷದ ಮೇಲೆ ಬೇಸರವಿದೆ. ಜನರಂತೂ ಕಾಂಗ್ರೆಸ್ಗೆ ಛೀ ಥೂ ಎಂದು ಉಗಿಯುತ್ತಿದ್ದಾರೆ. ಸಿದ್ದರಾಮಯ್ಯ ಅವರು ತೊಡೆ ತಟ್ಟಿ ನಿಂತಿದ್ದಾರೆ. ಸರ್ಕಾರದಲ್ಲಿ ಗೊಂದಲವಿದೆ, ಒಗ್ಗಟ್ಟಿಲ್ಲ. ಈ ಸರ್ಕಾರ ಬಹಳ ದಿನ ನಡೆಯುತ್ತದೆ ಎಂದು ಅನ್ನಿಸುವುದಿಲ್ಲ. ಮೂರನೇ ಸಿಎಂ ಬಂದರೂ ಆಶ್ಚರ್ಯ ಪಡದ ಪರಿಸ್ಥಿತಿ ಇದೆ ಎಂದು ಭವಿಷ್ಯ ನುಡಿದರು.
ಹಾಲಿನ ದರ ಏರಿಕೆ ಮೂಲಕ ಜನರ ಮೇಲೆ ಹೊರೆ ಹಾಕಲಾಗಿದೆ. ರೈತರ ಹಾಲಿಗೆ 7 ರೂ. ಪ್ರೋತ್ಸಾಹ ಧನ ನೀಡದೆ ಜನರಿಗೆ ಹೊರೆ ಹಾಕಲಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಇದು ನಾಲ್ಕನೇ ಸಲ ದರ ಏರಿಕೆ. ಸರ್ಕಾರ ಬಹಳ ದಿನ ಇರಲ್ಲ, ಪಾಪರ್ ಆಗಿದೆ. ಮೋದಿ ಪ್ರಧಾನಿ ಆಗುತ್ತಿರುವುದು ಕಾಂಗ್ರೆಸ್ಗೆ ಸಹಿಸಲು ಆಗುತ್ತಿಲ್ಲ ಎಂದು ಹೇಳಿದರು.
SIR ಕ್ಲಿಯರ್ ಆಗಿದೆ, ಸರಿಯಾಗಿಯೇ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಎಲ್ಲೂ ಗೆಲ್ಲಲು ಆಗುತ್ತಿಲ್ಲ. ಬ್ಯಾಲೆಟ್ನಲ್ಲೇ MLC ಎಲೆಕ್ಷನ್ ನಡೆಯಿತು, ಬಿಜೆಪಿ ಗೆದ್ದಿತು. ದೇಶದಲ್ಲಿ ಕಾಂಗ್ರೆಸ್ ಇರಲ್ಲ, ಅದಕ್ಕಾಗಿ ಕಿತಾಪತಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
- ಕಬ್ಬು ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ರೈತರ ಪ್ರತಿಭಟನೆ; ಅಂಗಡಿ, ಮಳಿಗೆ ಮುಚ್ಚಿಸಿ ಆಕ್ರೋಶ
- ಉತ್ತರ ಕರ್ನಾಟಕದ ಮಣ್ಣಿನ ಸೊಗಡಿನ ಸಿನಿಮಾ ‘ಚಂದ್ರಹಾಸ’
- ಆರ್. ಅಶೋಕ್ ಸ್ಫೋಟಕ ಭವಿಷ್ಯ: ರಾಜ್ಯದಲ್ಲಿ ‘ಮೂರನೇ ಸಿಎಂ’ ಬಂದರೂ ಅಚ್ಚರಿಯಿಲ್ಲ!
- ಬೆಲೆ ಏರಿಕೆ ಬಿಸಿ: ನಂದಿನಿ ಹಾಲಿನ ಬೆನ್ನಲ್ಲೇ ಮೊಸರಿನ ದರವೂ ಗಣನೀಯ ಹೆಚ್ಚಳ!
- ಅಕ್ಟೋಬರ್ 30ರಿಂದ ನವೆಂಬರ್ 1ರವರೆಗೆ ಮೂರು ದಿನಗಳ ಕಾಲ ಜೀ ಕನ್ನಡದಲ್ಲಿ ಕುಟುಂಬ ಅವಾರ್ಡ್ಸ್ ಸಂಭ್ರಮ!






















