SK Home Ad
Home ನಮ್ಮ ಜಿಲ್ಲೆ ಧಾರವಾಡ ರೈತರ ಹೆದ್ದಾರಿ ಬಂದ್‌ಗೆ ಬ್ರೇಕ್; ಧಾರವಾಡ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ

ರೈತರ ಹೆದ್ದಾರಿ ಬಂದ್‌ಗೆ ಬ್ರೇಕ್; ಧಾರವಾಡ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ

0
5

ಧಾರವಾಡ: ಕಬ್ಬು ಬೆಳೆಗಾರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅ.31 ರಂದು ಕರೆ ನೀಡಿರುವ ರಾಷ್ಟ್ರೀಯ ಹೆದ್ದಾರಿ ಬಂದ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಧಾರವಾಡ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಆದೇಶ ಹೊರಡಿಸಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕರ ವರದಿ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮನವಿ ಆಧರಿಸಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163ರಡಿ ಈ ಆದೇಶ ಹೊರಡಿಸಲಾಗಿದೆ.
ಜಿಲ್ಲೆಯ ವ್ಯಾಪ್ತಿಯಲ್ಲಿ ಹಾದು ಹೋಗುವ ಪುಣೆ-ಬೆಂಗಳೂರು, ಹುಬ್ಬಳ್ಳಿ-ಅಂಕೋಲಾ, ನವಲಗುಂದ-ಸೋಲಾಪುರ ಹಾಗೂ ಹುಬ್ಬಳ್ಳಿ-ಬಳ್ಳಾರಿ ಈ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಅವುಗಳ ಸುತ್ತ 5 ಕಿ.ಮೀ ವ್ಯಾಪ್ತಿಯಲ್ಲಿ ರಸ್ತೆ ತಡೆ, ವಾಹನ ಸಂಚಾರಕ್ಕೆ ಅಡಚಣೆ, ಟೋಲ್ ಪ್ಲಾಜಾ ಕಾರ್ಯಕ್ಕೆ ಅಡ್ಡಿ ಮಾಡುವುದನ್ನು ನಿಷೇಧಿಸಲಾಗಿದೆ.

ಪುಣೆ-ಬೆಂಗಳೂರು ಹೆದ್ದಾರಿಯು ಅಂತರರಾಜ್ಯ ಹೆದ್ದಾರಿಯಾಗಿದ್ದು, ಪ್ರತಿದಿನ ವಾಹನಗಳು ಸಂಚರಿಸುತ್ತವೆ. ಹೆದ್ದಾರಿ ತಡೆ ಮಾಡಿದರೆ ಸಾರ್ವಜನಿಕ ಸಾರಿಗೆ, ಆಂಬುಲೆನ್ಸ್, ತುರ್ತು ಸೇವೆಗಳಿಗೆ ಅಡಚಣೆ ಆಗುತ್ತದೆ. ಜತೆಗೆ ಬಂಕಾಪುರ, ಹಿರೇಬಾಗೇವಾಡಿ, ಹತ್ತರಗಿ, ಕೊಗನೊಳ್ಳಿ ಟೋಲ್ ಪ್ಲಾಜಾಗಳಲ್ಲಿ ಭಾರೀ ಕಂದಾಯ ನಷ್ಟವಾಗಲಿದೆ. ಹೀಗಾಗಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಯಾವ ಹೆದ್ದಾರಿಗಳಲ್ಲಿ ನಿಷೇಧ?

ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಹಾದು ಹೋಗುವ
1) ಪುಣೆ-ಬೆಂಗಳೂರು
2) ಹುಬ್ಬಳ್ಳಿ-ಅಂಕೋಲಾ
3) ನವಲಗುಂದ-ಸೋಲಾಪುರ
4) ಹುಬ್ಬಳ್ಳಿ-ಬಳ್ಳಾರಿ

ಈ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳು ಮತ್ತು ಅವುಗಳ ಸುತ್ತಮುತ್ತ 5 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ರಸ್ತೆ ತಡೆ, ವಾಹನ ಸಂಚಾರಕ್ಕೆ ಅಡಚಣೆ ಮತ್ತು ಟೋಲ್ ಸಂಗ್ರಹಕ್ಕೆ ಅಡ್ಡಿಪಡಿಸುವುದನ್ನು ನಿಷೇಧಿಸಲಾಗಿದೆ.