SK Home Ad
Home ನಮ್ಮ ಜಿಲ್ಲೆ ಚಿತ್ರದುರ್ಗ ಬರ ಪರಿಹಾರ, ಭದ್ರಾ ಯೋಜನೆಗೆ ಮೊದಲ ಆದ್ಯತೆ: ಟಿ. ರಘುಮೂರ್ತಿ

ಬರ ಪರಿಹಾರ, ಭದ್ರಾ ಯೋಜನೆಗೆ ಮೊದಲ ಆದ್ಯತೆ: ಟಿ. ರಘುಮೂರ್ತಿ

0
66
File Photo

ಸಚಿವ ಸಂಪುಟ ಅಸಮಾಧಾನಕ್ಕೆ ಹೈಕಮಾಂಡ್ ಪರಿಹಾರ ಕಂಡುಕೊಳ್ಳಲಿದೆ: ಟಿ. ರಘುಮೂರ್ತಿ

ಚಿತ್ರದುರ್ಗ: ಸಚಿವ ಸಂಪುಟ ವಿಸ್ತರಣೆಯ ಬಳಿಕ ಸಚಿವ ಸ್ಥಾನದಿಂದ ವಂಚಿತರಾದ ಶಾಸಕರ ಅಸಮಾಧಾನ ಸಹಜವಾಗಿದ್ದು, ಅದನ್ನು ಮುಖ್ಯಮಂತ್ರಿ ಹಾಗೂ ಪಕ್ಷದ ಹೈಕಮಾಂಡ್ ಸೂಕ್ತ ರೀತಿಯಲ್ಲಿ ಪರಿಹರಿಸಲಿದ್ದಾರೆ ಎಂದು ನೂತನ ಸಚಿವ ಟಿ. ರಘುಮೂರ್ತಿ ಹೇಳಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಆನೆಸಿದರೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನಕ್ಕೆ ಹಲವು ಶಾಸಕರು ಆಕಾಂಕ್ಷಿಗಳಾಗಿದ್ದರು. ಅರ್ಹತೆ ಹೊಂದಿದ್ದವರಿಗೆ ಅಸಮಾಧಾನ ಉಂಟಾಗುವುದು ಸಹಜ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರ ಅಭಿಪ್ರಾಯಕ್ಕೂ ಗೌರವವಿದ್ದು, ಮುಖ್ಯಮಂತ್ರಿ ಮತ್ತು ಹೈಕಮಾಂಡ್ ಈ ಅಸಮಾಧಾನವನ್ನು ನಿವಾರಿಸುವ ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಮಗೆ ಯಾವ ಖಾತೆ ನೀಡಲಾಗುತ್ತದೆ ಎಂಬ ಬಗ್ಗೆ ಯಾವುದೇ ನಿರೀಕ್ಷೆ ಇಲ್ಲ. ಪಕ್ಷದ ನಾಯಕತ್ವ ಯಾವ ಜವಾಬ್ದಾರಿ ನೀಡಿದರೂ ಅದನ್ನು ಸಮರ್ಥವಾಗಿ ನಿರ್ವಹಿಸಿ, ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವುದೇ ತಮ್ಮ ಗುರಿ ಎಂದು ಹೇಳಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಉಂಟಾಗಿರುವ ಬರ ಪರಿಸ್ಥಿತಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ ಸಚಿವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಿಲ್ಲೆಯ ಜನರ ಸಂಕಷ್ಟವನ್ನು ಅರಿತು ತಕ್ಷಣವೇ ನೆರವು ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದರು. ಸಚಿವ ಸ್ಥಾನ ಸಿಕ್ಕ ಸಂಭ್ರಮದಲ್ಲೇ ಕಾಲಹರಣ ಮಾಡದೆ ತಕ್ಷಣವೇ ಜನರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುವಂತೆ ಸೂಚಿಸಿರುವುದಾಗಿ ಹೇಳಿದರು.

ಬರದಿಂದ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರದಿಂದ ಅಗತ್ಯ ನೆರವು ಒದಗಿಸಲಾಗುವುದು. ಬಿತ್ತನೆ ಮಾಡಲಾಗದ ರೈತರಿಗೆ ಶೇ.25ರಷ್ಟು ವಿಮೆ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಲಾಗುವುದು. ಮಳೆ ಕೊರತೆಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಬರ ನಿರ್ವಹಣೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಕಾರ ಪಡೆಯುವ ಪ್ರಯತ್ನ ನಡೆಯಲಿದೆ ಎಂದು ತಿಳಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಆರೋಪ ಎದುರಿಸಿದ್ದ ಬಿ. ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಈ ಕುರಿತು ಸಂಪೂರ್ಣ ಮಾಹಿತಿ ನನ್ನ ಬಳಿ ಇಲ್ಲ. ಕಾನೂನು ಸಲಹೆ ಪಡೆದು ವರಿಷ್ಠರು ಅವರನ್ನು ಸಂಪುಟಕ್ಕೆ ಸೇರಿಸಿರುವರು. ಈ ಕುರಿತು ಉತ್ತರ ನೀಡಬೇಕಾದ ಮಾಹಿತಿ ಪಕ್ಷದ ವರಿಷ್ಠರ ಬಳಿಯೇ ಇದೆ” ಎಂದು ಹೇಳಿದರು.

ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸಮರ್ಪಕ ಪ್ರಾತಿನಿಧ್ಯ ಸಿಗದಿರುವ ಬಗ್ಗೆ ಮೂಡಿರುವ ಚರ್ಚೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರವನ್ನೂ ಪಕ್ಷದ ವರಿಷ್ಠರು ಸೂಕ್ತವಾಗಿ ಪರಿಗಣಿಸಿ ಮುಂದಿನ ದಿನಗಳಲ್ಲಿ ಪರಿಹಾರ ಕಂಡುಕೊಳ್ಳಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದ ಸಚಿವರು, ಕೇಂದ್ರ ಸರ್ಕಾರ ಈಗಾಗಲೇ ₹5,300 ಕೋಟಿ ಅನುದಾನ ಘೋಷಿಸಿದ್ದು, ಉಳಿದ ಅಗತ್ಯ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗುವುದು ಎಂದರು. ಯೋಜನೆ ಕಾಮಗಾರಿ ವೇಗಗೊಳಿಸಿ ಶೀಘ್ರದಲ್ಲೇ ಭದ್ರಾ ನೀರನ್ನು ಬಯಲುಸೀಮೆಗೆ ಹರಿಸುವ ಗುರಿ ಹೊಂದಿರುವುದಾಗಿ ಹೇಳಿದರು. ಜೊತೆಗೆ ಹನಿ ನೀರಾವರಿ ಯೋಜನೆಗಳ ವಿಸ್ತರಣೆ ಮತ್ತು ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೂ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.