ಬೆಂಗಳೂರು: ಮುಸ್ಲಿಂ ನಾಯಕರ ವಿರುದ್ಧದ ಕ್ರಮದಲ್ಲಿ ಏನಾದರೂ ತಪ್ಪಾಗಿದ್ದರೆ ಅದನ್ನು ಸರಿಪಡಿಸೋಣ. ಅವರು ಕಾಂಗ್ರೆಸ್‌ಗೆ ತಲಾಕ್ ನೀಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮೇಲೆ ಅಸಮಾಧಾನಗೊಂಡಿರುವ ಅಲ್ಪಸಂಖ್ಯಾತ ನಾಯಕರನ್ನು ಸಮಾಧಾನಪಡಿಸುವ ಮತ್ತು ತಪ್ಪುಗಳನ್ನು ಸರಿಪಡಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಸ್ಲಿಂ ನಾಯಕರ ವಿರುದ್ಧದ ಕ್ರಮಗಳಲ್ಲಿ ಅಥವಾ ನಡೆಗಳಲ್ಲಿ ಏನಾದರೂ ತಪ್ಪಾಗಿದ್ದರೆ, ಅದನ್ನು ಕುಳಿತು ಮಾತನಾಡಿ ಸರಿಪಡಿಸಿಕೊಳ್ಳೋಣ. ವ್ಯವಸ್ಥೆಯಲ್ಲಿ ಕೆಲವು ಸಂದರ್ಭಗಳಲ್ಲಿ ಸಣ್ಣಪುಟ್ಟ ಲೋಪಗಳು ಸಹಜ, ಅದನ್ನು ತಿದ್ದಿಕೊಂಡು ಮುಂದೆ ಹೋಗಲು ನಾವು ಸಿದ್ಧರಿದ್ದೇವೆ. ದೇಶದ ಬಡವರು, ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಕಾಂಗ್ರೆಸ್ ಪಕ್ಷದ ಮೂಲ ಉದ್ದೇಶ. ಈ ಬದ್ಧತೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಅಲ್ಪಸಂಖ್ಯಾತ ಸಮುದಾಯದ ನಾಯಕರು ಟಿಕೆಟ್ ಹಂಚಿಕೆ ಅಥವಾ ಇತರ ವಿಚಾರಗಳಿಗಾಗಿ ಬೇರೆ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಮುಖ್ಯಮಂತ್ರಿಗಳು ಮತ್ತು ಕೆಪಿಸಿಸಿ ಅಧ್ಯಕ್ಷರು ಅತೃಪ್ತ ನಾಯಕರೊಂದಿಗೆ ನೇರವಾಗಿ ಮಾತುಕತೆ ನಡೆಸಲಿದ್ದಾರೆಂದು ತಿಳಿಸಿದರು.






















