SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ರಸ್ತೆಗಳಲ್ಲಿ ಅಪಘಾತ ರಹಿತ ಸುರಕ್ಷಿತ ಸಂಚಾರಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿ: ಜಿಲ್ಲಾಧಿಕಾರಿ

ರಸ್ತೆಗಳಲ್ಲಿ ಅಪಘಾತ ರಹಿತ ಸುರಕ್ಷಿತ ಸಂಚಾರಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿ: ಜಿಲ್ಲಾಧಿಕಾರಿ

0
31

ದಾಂಡೇಲಿ (ಉತ್ತರ ಕನ್ನಡ) ಸಂ.ಕ. ಸಮಾಚಾರ : ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾರ್ವಜನಿಕರು ಮತ್ತು ವಾಹನಗಳ ಅಪಘಾತ ರಹಿತ ಸುರಕ್ಷಿತ ಸಂಚಾರಕ್ಕೆ ಅಗತ್ಯವಿರುವ ಹಾಗೂ ಪೊಲೀಸ್ ಇಲಾಖೆಯಿಂದ ಸೂಚಿಸುವ ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸೂಚನೆ ನೀಡಿದರು.

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರವಾರದ ಕಾಳಿ ಸೇತುವೆ ಮೇಲೆ ದ್ವಿಚಕ್ರ ವಾಹನಗಳು ಸಂಚರಿಸುವಾಗ ಬಲವಾದ ಗಾಳಿಯಿಂದ ವಾಹನ ಚಾಲನೆಗೆ ಅಡಚಣೆಯಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈ ಬಗ್ಗೆ ಅಗತ್ಯವಿರುವ ಸುರಕ್ಷತಾ ಕ್ರಮ ಕೈಗೊಳ್ಳಬೇಕು, ಕುಮಟಾದಲ್ಲಿ ಅಗತ್ಯವಿರುವೆಡೆಗಳಲ್ಲಿ ಡಿವೈಡರ್ ಮತ್ತು ಬೀದಿ ದೀಪಗಳನ್ನು ಅಳವಡಿಸಬೇಕು.

ನಗರದಲ್ಲಿ ಭಾರೀ ವಾಹನಗಳು ಮತ್ತು ಇತರೇ ವಾಹನಗಳ ಓವರ್ ಟೇಕ್ ನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ರಸ್ತೆ ಕಾಮಗಾರಿ ಸಂಪೂರ್ಣ ಮುಕ್ತಾಯವಾಗುವವರೆಗೆ ತಾತ್ಕಾಲಿಕ ಕ್ರಮಗಳ ಮೂಲಕ ಅಪಘಾತಗಳಾಗುವುದನ್ನು ತಪ್ಪಿಸುವಂತೆ ಸೂಚಿಸಿದರು. ಕಾರವಾರದ ಫ್ಲೈ ಓವರ್ ಕೆಳಗೆ ಅನಧಿಕೃತ ವಾಹನ ಪಾರ್ಕಿಂಗ್, ಅಂಗಡಿಗಳು ಮತ್ತು ಜನವಸತಿ ಕಂಡುಬರುತ್ತಿದ್ದು ಇದನ್ನು ತಪ್ಪಿಸಲು ಫೆನ್ಸಿಂಗ್ ಅಳವಡಿಸಿ, ಗಾರ್ಡನಿಂಗ್ ಮಾಡಿ, ಸಾರ್ವಜನಿಕರಿಗೆ ವಾಕಿಂಗ್ ಪಾಥ್ ವ್ಯವಸ್ಥೆ ಕಲ್ಪಿಸುವಂತೆ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಟರ್ಮಿನಲ್ ಮಾದರಿಯಲ್ಲಿ ವಾಹನಗಳ ನಿಲುಗಡೆಗೆ ಅನುಕೂಲವಾಗುವಂತೆ ಮುರುಡೇಶ್ವರ ಮತ್ತು ಅಂಕೋಲಾದಲ್ಲಿ ಜಾಗ ಗುರುತಿಸಿ ಈಗಾಗಲೇ ಹಸ್ತಾಂತರ ಮಾಡಲಾಗಿದ್ದು ಈ ಪ್ರದೇಶದಲ್ಲಿ ವಾಹನ ಚಾಲಕರ ವಿಶ್ರಾಂತಿಗೆ ಮತ್ತು ವಾಹನ ನಿಲುಗಡೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ತಿಳಿಸಿದರು.

ಅಂಕೋಲಾ- ಯಲ್ಲಾಪುರ ರಸ್ತೆಯಲ್ಲಿ ಬೀದಿ ದೀಪಗಳ ಸೌಲಭ್ಯ ಇಲ್ಲವಾಗಿದ್ದು, ಈ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೂಚನಾ ಫಲಕಗಳು, ಕ್ಯಾಟ್ ಐ ಗಳು, ಬ್ಲಿಂಕಿಂಗ್ ಲೈಟ್ ಗಳು, ವೇಗಮಿತಿ ಸೂಚನಾ ಫಲಕ, ಕ್ಯಾನ್ ವಾಕ್ಸ್ ಮಿರರ್‌ಗಳನ್ನು ಅಳವಡಿಸುವಂತೆ ಮತ್ತು ರಸ್ತೆಗೆ ಅಡ್ಡಲಾಗಿರುವ ಮರದ ಕೊಂಬೆಗಳನ್ನು ಅರಣ್ಯ ಮತು ಪೊಲೀಸ್ ಇಲಾಖೆ ಸಹಕಾರದೊಂದಿಗೆ ತೆರವುಗೊಳಿಸುವಂತೆ ಹಾಗೂ ಅರೆಬೈಲ್ ಘಾಟ್ ನಲ್ಲಿ ಅಳವಡಿಸಿರುವ ಅಪಘಾತ ತಡೆ ರಕ್ಷಣಾ ಕಂಬಗಳು ರಾತ್ರಿ ವೇಳೆ ಸ್ಪಷ್ಟವಾಗಿ ಗೋಚರವಾಗುವಂತೆ ಅವುಗಳಿಗೆ ರೇಡಿಯಂ ಅಳಡಿಸುವಂತೆ ಮತ್ತು ಶಿರಸಿ-ಕುಮಟಾ ರಸ್ತೆ ಕಾಮಗಾರಿಯನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸುವಂತೆ ನಿರ್ದೇಶನ ನೀಡಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಜಿಲ್ಲೆಯ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ನಿಯಮಿತವಾಗಿ ತಪಾಸಣೆಗಳನ್ನು ಕೈಗೊಂಡು ನಿಗಧಿತ ಮಿತಿಗಿಂತ ಹೆಚ್ಚಿನ ಸರಕು ಸಾಮಗ್ರಿ ಸಾಗಿಸುವ ವಾಹನಗಳ ವಿರುದ್ದ ಪ್ರಕರಣ ದಾಖಲಿಸಬೇಕು. ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಸಂಬಂಧಿಸಿದ೦ತೆ ವಿಶೇಷ ಕ್ಯಾಂಪ್‌ಗಳನ್ನು ಆಯೋಜಿಸಿ ಹೊಸದಾಗಿ ಅರ್ಜಿ ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸಿರುವವರಿಗೆ ಚಾಲನಾ ಪ್ರಮಾಣಪತ್ರಗಳನ್ನು ವಿತರಿಸಬೇಕು ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಕಳೆದ ತಿಂಗಳು ಕದ್ರಾ ರಸ್ತೆಯಲ್ಲಿ ನಿಗಧಿತ ಮಿತಿಗಿಂತ ಹೆಚ್ಚಿನ ಸರಕು ಸಾಮಗ್ರಿ ಸಾಗಿಸುತ್ತಿದ್ದ 13 ವಾಹನಗಳ ವಿರುದ್ದ ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡಲಾಗಿದ್ದು ಪ್ರಸ್ತುತ ಈ ರಸ್ತೆಯಲ್ಲಿ ನಿಗಧಿತ ಮಿತಿಗಿಂತ ಹೆಚ್ಚಿನ ಸರಕು ಸಾಮಗ್ರಿ ಸಾಗಿಸುತ್ತಿರುವುದು ಕಂಡು ಬಂದಿಲ್ಲವಾಗಿದ್ದು ಆದಾಗ್ಯೂ ಇಲಾಖೆಯಿಂದ ನಿರಂತರವಾಗಿ ಪರಿಶೀಲನೆ ಕಾರ್ಯ ನಡೆಯುತ್ತಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದರು.

ಪೊಲೀಸ್ ಇಲಾಖೆಯ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಗತ್ಯವಿರುವೆಡೆಗಳಲ್ಲಿ ಎ.ಎನ್.ಪಿ.ಆರ್ ಕ್ಯಾಮರಾಗಳನ್ನು ಅಳವಡಿಸಬೇಕು, ಬ್ಲಾಕ್ ಸ್ಪಾಟ್ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು, ವೇಗಮಿತಿ ಸೂಚನಾ ಫಲಕಗಳು ಮತ್ತು ಬ್ಲಿಂರ‍್ಸ್ ಗಳನ್ನು ಅಳವಡಿಸುವಂತೆ ಹಾಗೂ ಹೆದ್ದಾರಿಗಳಲ್ಲಿ ಕಂಡುಬರುವ ಬೀಡಾಡಿ ದನಗಳ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಸೂಚಿಸಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ, ಜಿಲ್ಲೆಯ ಎಲ್ಲಾ ಉಪ ವಿಭಾಗಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.