ಹಾರ್ಮುಜ್ ಜಲಸಂಧಿ ಸಂಕಷ್ಟದ ನಡುವೆ ಭಾರತದ ಇಂಧನ ಸರಬರಾಜು ಸ್ಥಿರ: 20 ಸಾವಿರ ಟನ್ LPG ಹೊತ್ತು ಭಾರತ ತಲುಪಿದ ಟ್ಯಾಂಕರ್
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧ ಭೀತಿ ಹಾಗೂ ಹಾರ್ಮುಜ್ ಜಲಸಂಧಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಭಾರತಕ್ಕೆ ಎಲ್‌ಪಿಜಿ ಮತ್ತು ಕಚ್ಚಾ ತೈಲ ಪೂರೈಕೆ ಮುಂದುವರಿದಿರುವುದು ಮಹತ್ವದ ಬೆಳವಣಿಗೆಯಾಗಿದೆ. ಮಾರ್ಷಲ್ ದ್ವೀಪಗಳ ಧ್ವಜ ಹೊತ್ತ ಸಿಮಿ ಎಂಬ ಎಲ್‌ಪಿಜಿ ಟ್ಯಾಂಕರ್ (Symi Tanker) ಸುರಕ್ಷಿತವಾಗಿ ಗುಜರಾತ್‌ನ ಕಾಂಡ್ಲಾದ ದೀನ್‌ದಯಾಳ್ (Deendayal Port) ಬಂದರನ್ನು ತಲುಪಿದೆ.
ಸುಮಾರು 20 ಸಾವಿರ ಟನ್ ದ್ರವ ಪ್ರೊಪೇನ್ ಮತ್ತು ಬ್ಯುಟೇನ್ ಹೊತ್ತಿದ್ದ ಈ ಟ್ಯಾಂಕರ್ ಮೇ 13ರಂದು ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತಕ್ಕೆ ಆಗಮಿಸಿದೆ. ಹಡಗಿನಲ್ಲಿ ಒಟ್ಟು 21 ಸಿಬ್ಬಂದಿ ಇದ್ದು, ಅವರಲ್ಲಿ ಎಂಟು ಉಕ್ರೇನ್ ಪ್ರಜೆಗಳು ಹಾಗೂ 13 ಫಿಲಿಪಿನೋ ಸಿಬ್ಬಂದಿ ಸೇರಿದ್ದಾರೆ ಎಂದು ವರದಿಯಾಗಿದೆ.
ಪ್ರಸ್ತುತ ಉದ್ವಿಗ್ನ ಪರಿಸ್ಥಿತಿಯ ನಡುವೆ ಹಾರ್ಮುಜ್ ಜಲಸಂಧಿ ದಾಟಿ ಭಾರತ ತಲುಪಿದ 11ನೇ ಎಲ್‌ಪಿಜಿ ಟ್ಯಾಂಕರ್ ಇದಾಗಿದೆ. ಭಾರತದ ಡಿಜಿ ಶಿಪ್ಪಿಂಗ್ (Directorate General of Shipping), ವಿದೇಶಾಂಗ ವ್ಯವಹಾರಗಳ ಸಚಿವಾಲಯ, ರಕ್ಷಣಾ ಸಚಿವಾಲಯ ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಗಳ ಸಮನ್ವಯದ ಮೂಲಕ ಈ ಸಾಗಣೆ ಮಾರ್ಗದಲ್ಲಿ ಭದ್ರತಾ ಕ್ರಮಗಳನ್ನು ಬಲಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಜಾಗತಿಕ ಇಂಧನ ಮಾರುಕಟ್ಟೆ ಮೇಲೆ ಭಾರೀ ಒತ್ತಡ ಉಂಟಾಗಿದೆ. ಕಳೆದ 75 ದಿನಗಳಿಂದ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಅಡಚಣೆಗಳಿಂದ ಭಾರತ ಸೇರಿದಂತೆ ಹಲವು ದೇಶಗಳ ಕಚ್ಚಾ ತೈಲ ದಾಸ್ತಾನು ಕಡಿಮೆಯಾಗುತ್ತಿದೆ.
ಸರಕು ವಿಶ್ಲೇಷಣಾ ಸಂಸ್ಥೆಯಾದ ಕೆಪ್ಲರ್ (Kpler) ಮಾಹಿತಿಯ ಪ್ರಕಾರ, ಭಾರತದ ಒಟ್ಟು ಕಚ್ಚಾ ತೈಲ ದಾಸ್ತಾನು ಫೆಬ್ರವರಿ ಅಂತ್ಯದಲ್ಲಿ 107 ಮಿಲಿಯನ್ ಬ್ಯಾರೆಲ್ ಇತ್ತು. ಆದರೆ ಇದೀಗ ಅದು 91 ಮಿಲಿಯನ್ ಬ್ಯಾರೆಲ್‌ಗೆ ಇಳಿದಿದೆ. ಅಂದರೆ ಸುಮಾರು 15 ಶೇಕಡಾ ಕುಸಿತ ಕಂಡಿದೆ.
ಪ್ರಸ್ತುತ ಬಳಕೆಯ ಪ್ರಮಾಣವನ್ನು ಗಮನಿಸಿದರೆ, ಭಾರತದಲ್ಲಿನ ಲಭ್ಯವಿರುವ ಕಚ್ಚಾ ತೈಲ ದಾಸ್ತಾನು ಕೇವಲ 18 ದಿನಗಳ ಬೇಡಿಕೆಯನ್ನು ಪೂರೈಸುವಷ್ಟು ಮಾತ್ರ ಉಳಿದಿದೆ ಎಂದು ಅಂದಾಜಿಸಲಾಗಿದೆ.
ಭಾರತೀಯ ತೈಲ ಸಂಸ್ಕರಣಾಗಾರಗಳು ಇನ್ನೂ ತಮ್ಮ ಕಾರ್ಯಾಚರಣೆಯನ್ನು ಸ್ಥಿರವಾಗಿ ಮುಂದುವರಿಸುತ್ತಿವೆ. ಆದರೆ ಪೂರೈಕೆಯಲ್ಲಿ ಮತ್ತಷ್ಟು ಅಡಚಣೆ ಎದುರಾದರೆ, ಕಚ್ಚಾ ತೈಲ ಸಂಸ್ಕರಣೆಯನ್ನು ಕಡಿಮೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಇಂಧನ ತಜ್ಞರು ಎಚ್ಚರಿಸಿದ್ದಾರೆ.
ಜಾಗತಿಕ ಮಟ್ಟದಲ್ಲೂ ತೈಲ ದಾಸ್ತಾನು ವೇಗವಾಗಿ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಅಂತರರಾಷ್ಟ್ರೀಯ ಇಂಧನ ಸಂಸ್ಥೆಯ (IEA) ಮಾಹಿತಿ ಪ್ರಕಾರ, ಮಾರ್ಚ್ ತಿಂಗಳಲ್ಲಿ ಜಗತ್ತಿನ ತೈಲ ದಾಸ್ತಾನು 129 ಮಿಲಿಯನ್ ಬ್ಯಾರೆಲ್ ಕುಸಿದಿದ್ದು, ಏಪ್ರಿಲ್‌ನಲ್ಲಿ ಮತ್ತಷ್ಟು 117 ಮಿಲಿಯನ್ ಬ್ಯಾರೆಲ್ ಇಳಿಕೆಯಾಗಿದೆ.
ಹಾರ್ಮುಜ್ ಜಲಸಂಧಿ ಜಾಗತಿಕ ಇಂಧನ ಸಾಗಣೆಗೆ ಅತ್ಯಂತ ಪ್ರಮುಖ ಮಾರ್ಗವಾಗಿದ್ದು, ಅಲ್ಲಿನ ಯಾವುದೇ ಅಶಾಂತಿ ನೇರವಾಗಿ ಜಾಗತಿಕ ತೈಲ ಬೆಲೆ ಮತ್ತು ಪೂರೈಕೆಯ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಭಾರತ ತನ್ನ ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಪರ್ಯಾಯ ಪೂರೈಕೆ ವ್ಯವಸ್ಥೆಗಳತ್ತಲೂ ಗಮನ ಹರಿಸುತ್ತಿದೆ ಎಂದು ತಿಳಿದುಬಂದಿದೆ.




















