Home Advertisement
Home ನಮ್ಮ ಜಿಲ್ಲೆ ಬೆಂಗಳೂರು ಪ್ರೀತಿಗೆ ವಯಸ್ಸಿನ ಹಂಗಿಲ್ಲ: 14 ವರ್ಷದ ಮಗನ ಬಿಟ್ಟು 22ರ ಯುವಕನ ಕೈಹಿಡಿದ 37ರ ಮಹಿಳೆ!

ಪ್ರೀತಿಗೆ ವಯಸ್ಸಿನ ಹಂಗಿಲ್ಲ: 14 ವರ್ಷದ ಮಗನ ಬಿಟ್ಟು 22ರ ಯುವಕನ ಕೈಹಿಡಿದ 37ರ ಮಹಿಳೆ!

0
47

ಪ್ರೀತಿಗೆ ಕಣ್ಣಿಲ್ಲ, ಅದಕ್ಕೆ ವಯಸ್ಸಿನ ಮಿತಿಯೂ ಇಲ್ಲ ಎಂಬ ಮಾತುಗಳನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಇದೀಗ ಈ ಮಾತನ್ನು ಅಕ್ಷರಶಃ ನಿಜ ಮಾಡುವಂತಹ ಘಟನೆಯೊಂದು ಸಾಕ್ಷಿಯಾಗಿದೆ. 37 ವರ್ಷದ ಮಹಿಳೆಯೊಬ್ಬಳು 22 ವರ್ಷದ ಯುವಕನ ಪ್ರೇಮಪಾಶಕ್ಕೆ ಸಿಲುಕಿ, ತನ್ನ 14 ವರ್ಷದ ಮಗನನ್ನು ತವರು ಮನೆಯಲ್ಲೇ ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾಗಿರುವ ರೋಚಕ ಘಟನೆ ಬೆಳಕಿಗೆ ಬಂದಿದೆ. ಜೀವಭಯದಲ್ಲಿರುವ ಈ ನವಜೋಡಿ ಇದೀಗ ರಕ್ಷಣೆ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಬೆಂಗಳೂರಿನ ಚಲ್ಲಘಟ್ಟ ನಿವಾಸಿಯಾಗಿರುವ 37 ವರ್ಷದ ಕವಿತಾ ಹಾಗೂ ಮೈಸೂರು ಮೂಲದ ರಮ್ಮನಹಳ್ಳಿಯ 22 ವರ್ಷದ ಯುವಕ ಭಾಸ್ಕರ್ ಈ ವಿಶಿಷ್ಟ ಪ್ರೇಮಕಥೆಯ ನಾಯಕ-ನಾಯಕಿ. ಕವಿತಾ ಪತಿ ಎಂಟು ವರ್ಷಗಳ ಹಿಂದೆಯೇ ರಕ್ತದೊತ್ತಡದ (ಲೋ ಬಿಪಿ) ಸಮಸ್ಯೆಯಿಂದ ನಿಧನರಾಗಿದ್ದರು. ಪತಿಯ ಸಾವಿನ ಬಳಿಕ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದ ಕವಿತಾ, ತನ್ನ ಮಗನೊಂದಿಗೆ ತವರು ಮನೆಯಲ್ಲಿಯೇ ಆಶ್ರಯ ಪಡೆದಿದ್ದರು.

ಇತ್ತ ಬೆಂಗಳೂರಿನಲ್ಲಿಯೇ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಟಿಟಿ ಮತ್ತು ಆಟೋ ಓಡಿಸುತ್ತಿದ್ದ ಯುವಕ ಭಾಸ್ಕರ್, ಆಗಾಗ ಕವಿತಾ ಹಾಗೂ ಆಕೆಯ ತಾಯಿಯನ್ನು ಬಂಡೆ ಮಹಾಕಾಳಮ್ಮ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಿದ್ದ. ಈ ಪ್ರಯಾಣದ ಪರಿಚಯವೇ ಕಾಲಕ್ರಮೇಣ ಇಬ್ಬರ ನಡುವೆ ಪ್ರೇಮಾಂಕುರವಾಗಲು ಕಾರಣವಾಯಿತು ಎನ್ನಲಾಗಿದೆ.

ಮನೆ ಬಿಟ್ಟ ಮಹಿಳೆ, ಗುಟ್ಟಾಗಿ ಮದುವೆ: ಇವರಿಬ್ಬರ ಪ್ರೀತಿ ಕಳೆದ ಕೆಲವು ವರ್ಷಗಳಿಂದ ಕದ್ದುಮುಚ್ಚಿ ಸಾಗುತ್ತಿತ್ತು. ಈ ಮಧ್ಯೆ, ಕವಿತಾ ಪೋಷಕರು ಆಕೆಗೆ ಬೇರೊಬ್ಬನ ಜೊತೆ ಎರಡನೇ ಮದುವೆ ಮಾಡಲು ಸಿದ್ಧತೆ ನಡೆಸಿದ್ದರು. ಇದರಿಂದ ಗಾಬರಿಗೊಂಡ ಕವಿತಾ, ಮನೆಯವರ ಒತ್ತಾಯಕ್ಕೆ ಮಣಿಯದೆ, ತನ್ನ ಹದಿಹರೆಯದ ಮಗನ ಭವಿಷ್ಯವನ್ನೂ ಲೆಕ್ಕಿಸದೆ ಪ್ರಿಯಕರ ಭಾಸ್ಕರ್ ಜೊತೆ ಮೈಸೂರಿಗೆ ಎಸ್ಕೇಪ್ ಆಗಿದ್ದಾಳೆ. ಬಳಿಕ ಮೈಸೂರಿನ ಒಂಟಿಕೊಪ್ಪಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ಇಬ್ಬರೂ ವಯಸ್ಸಿನ ಅಂತರವನ್ನು ಮರೆತು ಗುಟ್ಟಾಗಿ ಹಾರ ಬದಲಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಿಡ್ನ್ಯಾಪ್ ದೂರು ಮತ್ತು ಜೀವಬೆದರಿಕೆ: ಇತ್ತ ಮಗಳು ನಾಪತ್ತೆಯಾಗಿದ್ದರಿಂದ ಆತಂಕಗೊಂಡ ಕವಿತಾ ತಂದೆ ಮಲ್ಲಿಕಾರ್ಜುನ್, ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಭಾಸ್ಕರ್ ವಿರುದ್ಧ ‘ಮಗಳ ಅಪಹರಣ’ ಪ್ರಕರಣ ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ, ಕವಿತಾಳ ಸಂಬಂಧಿಕರು ಹಾಗೂ ಆಕೆಯ ಮಾವನ ಮಗ ನವಜೋಡಿಗೆ ಹುಡುಕಿ ಕೊಲೆ ಮಾಡುವ ಬೆದರಿಕೆ ಹಾಕಲಾರಂಭಿಸಿದ್ದಾರೆ.

ತಮ್ಮ ಕುಟುಂಬಸ್ಥರಿಂದಲೇ ಪ್ರಾಣಭೀತಿ ಎದುರಾಗಿರುವುದರಿಂದ ತೀವ್ರ ಆತಂಕಗೊಂಡಿರುವ ಭಾಸ್ಕರ್ ಹಾಗೂ ಕವಿತಾ ದಂಪತಿ, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕಚೇರಿಗೆ ಧಾವಿಸಿದ್ದು, ತಮಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದಾರೆ. ಕಾನೂನಿನ ಪ್ರಕಾರ ಇಬ್ಬರೂ ಪ್ರಾಪ್ತ ವಯಸ್ಕರಾಗಿದ್ದು, ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕು ಅವರಿಗಿದೆ. ಆದರೆ, ಮಗನನ್ನು ಅನಾಥವಾಗಿ ಬಿಟ್ಟು ಬಂದಿರುವ ತಾಯಿಯ ನಡೆ ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.