Home Advertisement
Home ಸುದ್ದಿ ರಾಜ್ಯ ಕಬಡ್ಡಿ ಮೈದಾನದಲ್ಲಿ 500 ರೂ. ಬೆಟ್ಟಿಂಗ್: ಗೃಹ ಸಚಿವ ಪರಮೇಶ್ವರ್‌ಗೆ ‘FIR’ ಕಂಟಕ!

ಕಬಡ್ಡಿ ಮೈದಾನದಲ್ಲಿ 500 ರೂ. ಬೆಟ್ಟಿಂಗ್: ಗೃಹ ಸಚಿವ ಪರಮೇಶ್ವರ್‌ಗೆ ‘FIR’ ಕಂಟಕ!

0
27

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕಾದ, ಜೂಜು-ಬೆಟ್ಟಿಂಗ್‌ಗಳನ್ನು ಮಟ್ಟಹಾಕಬೇಕಾದ ಗೃಹ ಇಲಾಖೆಯ ಸಚಿವರೇ ‘ಬೆಟ್ಟಿಂಗ್’ ಆಡಿದರೆ ಏನಾಗುತ್ತದೆ? ಇಂತಹದೊಂದು ವಿಪರ್ಯಾಸದ ಹಾಗೂ ಮುಜುಗರದ ಘಟನೆಗೆ ರಾಜ್ಯ ರಾಜಕಾರಣ ಸಾಕ್ಷಿಯಾಗಿದೆ. ಕೇವಲ 500 ರೂಪಾಯಿಗಳ ತಮಾಷೆಯ ಬೆಟ್ಟಿಂಗ್ ಇದೀಗ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕೊರಳಿಗೆ ಉರುಳಾಗಿ ಪರಿಣಮಿಸಿದ್ದು, ಅವರ ವಿರುದ್ಧವೇ ಎಫ್‌ಐಆರ್ (FIR) ದಾಖಲಿಸುವಂತೆ ನ್ಯಾಯಾಲಯ ಆದೇಶಿಸಿದೆ!

ಇತ್ತೀಚೆಗೆ ತುಮಕೂರಿನಲ್ಲಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಕಬಡ್ಡಿ ಟೂರ್ನಿ ಆಯೋಜನೆಯಾಗಿತ್ತು. ಈ ವೇಳೆ ಫೈನಲ್ ಪಂದ್ಯದಲ್ಲಿ ವಿಜಯಪುರ ಮತ್ತು ದಕ್ಷಿಣ ಕನ್ನಡ ತಂಡಗಳು ಸೆಣಸಾಡುತ್ತಿದ್ದವು. ಪಂದ್ಯದ ರೋಚಕತೆ ಕಂಡು ತಮಾಷೆಗಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಬಳಿ “ವಿಜಯಪುರ ತಂಡ ಗೆಲ್ಲುತ್ತದೆ, 500 ರೂ. ಬೆಟ್ಟಿಂಗ್ ಕಟ್ಟೋಣ” ಎಂದಿದ್ದರು. ಆದರೆ, ಅಂತಿಮವಾಗಿ ದಕ್ಷಿಣ ಕನ್ನಡ ತಂಡ 36-26 ಅಂಕಗಳಿಂದ ಜಯಗಳಿಸಿತು. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಷಣ ಮಾಡುವಾಗ ಸಚಿವರು, “ನಾನು ಡಿಸಿ ಜೊತೆ 500 ರೂ. ಬೆಟ್ಟಿಂಗ್ ಕಟ್ಟಿ ಸೋತೆ” ಎಂದು ನಗುತ್ತಲೇ ಹೇಳಿಕೊಂಡಿದ್ದರು.

ತಮಾಷೆಯ ಮಾತೇ ಉರುಳಾಯ್ತು: ತಮಾಷೆಗಾಗಿಯಾದರೂ ಸರಿ, ಸಾರ್ವಜನಿಕವಾಗಿ ಬೆಟ್ಟಿಂಗ್ ಕಟ್ಟುವುದು ಅಥವಾ ಪ್ರಚೋದಿಸುವುದು ಕಾನೂನುಬಾಹಿರ. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಹೆಚ್.ಆರ್. ನಾಗಭೂಷಣ್ ಎಂಬ ಸಾಮಾಜಿಕ ಕಾರ್ಯಕರ್ತರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಜೆಎಂ (ACJM) ಕೋರ್ಟ್‌ನ ನ್ಯಾಯಾಧೀಶರಾದ ಕೆ.ಎನ್. ಶಿವಕುಮಾರ್ ಅವರು, ಸಚಿವರ ವಿರುದ್ಧ ಎಫ್‌ಐಆರ್ ದಾಖಲಿಸಿ ಸಮಗ್ರ ತನಿಖೆ ನಡೆಸುವಂತೆ ತುಮಕೂರಿನ ಕೊಡಿಗೇಹಳ್ಳಿ ಠಾಣಾ ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.