Home Advertisement
Home ಸಿನಿ ಮಿಲ್ಸ್ ಆನ್‌ಲೈನ್ ಟೀಕೆ, ವೈವಾಹಿಕ ವಿವಾದ ನಡುವೆ ರವಿ ಮೋಹನ್ ಸ್ಪಷ್ಟನೆ

ಆನ್‌ಲೈನ್ ಟೀಕೆ, ವೈವಾಹಿಕ ವಿವಾದ ನಡುವೆ ರವಿ ಮೋಹನ್ ಸ್ಪಷ್ಟನೆ

0
58

“ನನ್ನ ಮಕ್ಕಳನ್ನು ನೋಡಲು ಬಿಡುತ್ತಿಲ್ಲ”: ನಟನ ಭಾವುಕ ಹೇಳಿಕೆ

ಚೆನ್ನೈ: ತಮಿಳು ಚಿತ್ರರಂಗದ ನಟ ಹಾಗೂ ನಿರ್ಮಾಪಕ ರವಿ ಮೋಹನ್ ತಮ್ಮ ವೈಯಕ್ತಿಕ ಜೀವನ, ವೈವಾಹಿಕ ವಿವಾದ ಮತ್ತು ಮಾನಸಿಕ ಒತ್ತಡದ ಕುರಿತು ಭಾವನಾತ್ಮಕವಾಗಿ ಮಾತನಾಡಿದ್ದು, ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ನಟನೆಯಿಂದ ವಿರಾಮ ಪಡೆಯುವುದಾಗಿ ಘೋಷಿಸಿದ್ದಾರೆ.

ಶನಿವಾರ ತಮ್ಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ಬೆಳವಣಿಗೆಗಳಿಂದಾಗಿ ಕೆಲಸದ ಮೇಲೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. “ನಾನು ಎದುರಿಸುತ್ತಿರುವ ಅನಗತ್ಯ ಅವಮಾನ ಮತ್ತು ಸೈಬರ್ ಬೆದರಿಕೆಯನ್ನು ಸಹಿಸಲು ಕಷ್ಟವಾಗುತ್ತಿದೆ” ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪತ್ನಿ ಆರತಿ ರವಿ ಅವರೊಂದಿಗಿನ ವೈವಾಹಿಕ ಭಿನ್ನಾಭಿಪ್ರಾಯದ ವಿಚಾರ ಕಳೆದ ಕೆಲ ತಿಂಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಗಾಯಕಿ ಕೆನೀಶಾ ಅವರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಬಳಿಕ ಈ ವಿವಾದ ಮತ್ತಷ್ಟು ತೀವ್ರಗೊಂಡಿತ್ತು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರವಿ ಮೋಹನ್, “ಹಲವರು ನನ್ನನ್ನು ಕೆರಳಿಸಲು ಪ್ರಯತ್ನಿಸುತ್ತಿದ್ದಾರೆ. ಯಾರಿಗಾದರೂ ಏನಾದರೂ ಹೇಳಬೇಕಿದ್ದರೆ ನೇರವಾಗಿ ಬಂದು ಹೇಳಲಿ. ಪರೋಕ್ಷವಾಗಿ ಗುರಿಯಾಗಿಸುವುದು ಬೇಡ” ಎಂದು ಎಚ್ಚರಿಕೆ ನೀಡಿದರು.

“ನಾನು ವಿಚ್ಛೇದನದ ಹಂತವನ್ನು ದಾಟಿ ಜೀವನ ಮತ್ತೆ ಸಾಮಾನ್ಯ ಸ್ಥಿತಿಗೆ ಬಂದ ಬಳಿಕ ಮಾತ್ರ ಹಿಂದಿರುಗುತ್ತೇನೆ. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಪ್ರತಿಯೊಂದು ವಿಚಾರವೂ ನನಗೆ ಗೊತ್ತಿದೆ. 23 ವರ್ಷಗಳಿಂದ ಹಗಲು-ರಾತ್ರಿ ದುಡಿದು ನಾನು ಈ ಸ್ಥಾನಕ್ಕೇರಿದ್ದೇನೆ” ಎಂದು ಹೇಳಿದರು.

ತಮ್ಮ ಕುಟುಂಬದ ಬಗ್ಗೆ ಮಾತನಾಡಿದ ಅವರು, “ನನ್ನ ಮಕ್ಕಳ ಶಿಕ್ಷಣಕ್ಕಾಗಿ ₹50 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಿದ್ದೇನೆ. ನಾನು ಕಟ್ಟಿದ ಮನೆಯನ್ನು ಬಿಟ್ಟು ಇಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ” ಎಂದು ನೋವು ಹಂಚಿಕೊಂಡರು.

ಇದೇ ವೇಳೆ ತಮ್ಮ ಕೈಗಳಲ್ಲಿ ಕಂಡುಬಂದ ಗಾಯಗಳ ಕುರಿತು ಮಾತನಾಡುತ್ತಾ, “ನನ್ನ ಮಕ್ಕಳನ್ನು ನೋಡಲು ಅವಕಾಶ ಕೊಡುತ್ತಿಲ್ಲ. ಆ ನೋವಿನಿಂದ ನಾನು ನನ್ನನ್ನೇ ನೋಯಿಸಿಕೊಳ್ಳಲು ಆರಂಭಿಸಿದ್ದೆ” ಎಂದು ಭಾವುಕರಾದರು.

ಮಹಿಳೆಯರ ಗೌರವ ಮತ್ತು ಹಕ್ಕುಗಳ ಬಗ್ಗೆ ತಾವು ಸದಾ ನಿಂತಿದ್ದೇನೆ ಎಂದು ಹೇಳಿದ ಅವರು, “ನಾನು ಮಹಿಳೆಯರ ವಿರುದ್ಧ ಎಂದಿಗೂ ಮಾತನಾಡಿಲ್ಲ. ನನ್ನ ಸಿನಿಮಾಗಳಲ್ಲೂ ಮಹಿಳಾ ಸಬಲೀಕರಣದ ಪರ ನಿಂತಿದ್ದೇನೆ. ನನ್ನ ತಾಯಿ ನನ್ನನ್ನು ಆ ರೀತಿ ಬೆಳೆಸಿಲ್ಲ” ಎಂದು ಸ್ಪಷ್ಟಪಡಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾದ ಗಾಯಕಿ ಕೆನೀಶಾ ಕುರಿತು ಮಾತನಾಡಿದ ಅವರು, “ಒಬ್ಬ ಹುಡುಗಿಯನ್ನು ಅನಗತ್ಯವಾಗಿ ಸೈಬರ್ ಬೆದರಿಕೆಗೆ ಒಳಪಡಿಸಲಾಗಿದೆ. ಅವಳು ಏನು ತಪ್ಪು ಮಾಡಿದ್ದಳು?” ಎಂದು ಪ್ರಶ್ನಿಸಿದರು.

ಕೆಲವು ಹಿರಿಯ ನಟರು ಮತ್ತು ಚಿತ್ರರಂಗದ ವ್ಯಕ್ತಿಗಳು ತಮ್ಮ ವೈಯಕ್ತಿಕ ಬದುಕಿನ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವುದಕ್ಕೂ ಅವರು ಅಸಮಾಧಾನ ವ್ಯಕ್ತಪಡಿಸಿದರು. “ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲು ಯಾರಿಗೂ ಹಕ್ಕಿಲ್ಲ” ಎಂದು ಹೇಳಿದರು.

ಸಹನಟರೊಂದಿಗೆ ಸ್ಪರ್ಧೆ ಮಾಡುವುದರಲ್ಲಿ ತಾನು ಎಂದಿಗೂ ನಂಬಿಕೆ ಇಟ್ಟಿಲ್ಲ ಎಂದು ಹೇಳಿದ ರವಿ ಮೋಹನ್, “ಸಾಮಾಜಿಕ ಜಾಲತಾಣಗಳು ಒಬ್ಬ ವ್ಯಕ್ತಿಯ ನಿಜವಾದ ವ್ಯಕ್ತಿತ್ವವನ್ನು ತೋರಿಸುವುದಿಲ್ಲ. ನನ್ನನ್ನು ನಿಜವಾಗಿ ಅರಿತಿರುವ ಜನರೇ ನನಗೆ ಮುಖ್ಯ” ಎಂದು ಹೇಳಿದರು.

ಕೊನೆಯಲ್ಲಿ ಅಭಿಮಾನಿಗಳಲ್ಲಿ ಸಮಯ ಮತ್ತು ಸ್ಥಳಾವಕಾಶಕ್ಕಾಗಿ ಮನವಿ ಮಾಡಿದ ಅವರು, “ಮೌನವಾಗಿ ನೋವು ಅನುಭವಿಸುವ ಪುರುಷರ ಸ್ಥಿತಿ ನನಗೆ ಅರ್ಥವಾಗುತ್ತದೆ. ನಾನು ಮತ್ತೆ ಮರಳುವವರೆಗೆ ಸ್ವಲ್ಪ ಸಮಯ ನೀಡಿ” ಎಂದು ವಿನಂತಿಸಿದರು.