SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಬಹುಮುಖ ಪ್ರತಿಭೆ ಎನ್. ಪ್ರಿಯಾ ನೃತ್ಯಪಯಣಕ್ಕೆ ಹೊಸ ಹೆಜ್ಜೆ

ಬಹುಮುಖ ಪ್ರತಿಭೆ ಎನ್. ಪ್ರಿಯಾ ನೃತ್ಯಪಯಣಕ್ಕೆ ಹೊಸ ಹೆಜ್ಜೆ

0
35
ವಿದುಷಿ ಲತಾ ಲಕ್ಷ್ಮೀಶ ಅವರ ಶಿಷ್ಯೆ ಪ್ರಿಯಾ ಅವರ ಭರತನಾಟ್ಯ ರಂಗಪ್ರವೇಶ ಅ. 25ರಂದು

ಗುರು ವಿದುಷಿ ಲತಾ ಲಕ್ಷ್ಮೀಶ ಅವರ ಶಿಷ್ಯೆ – ಅ. 25ರಂದು ಭರತನಾಟ್ಯ ರಂಗಪ್ರವೇಶಕ್ಕೆ ಯುವ ಕಲಾವಿದೆ ಎನ್. ಪ್ರಿಯಾ ಸಜ್ಜು

ಬೆಂಗಳೂರು: ಭರತನಾಟ್ಯ ಕ್ಷೇತ್ರದಲ್ಲಿ ತಮ್ಮ ಕಲಾಪ್ರತಿಭೆಯನ್ನು ಅನಾವರಣಗೊಳಿಸಲು ಯುವ ಕಲಾವಿದೆ ಎನ್. ಪ್ರಿಯಾ ಅವರು ಸಜ್ಜಾಗಿದ್ದಾರೆ. ಬೆಂಗಳೂರಿನ ಸುಂಕದಕಟ್ಟೆಯ ಸಂಯೋಗ ಕಲಾ ಶಾಲೆಯ ವಿದುಷಿ ಲತಾ ಲಕ್ಷ್ಮೀಶ ಅವರ ಶಿಷ್ಯೆಯಾಗಿರುವ ಪ್ರಿಯಾ ಅವರ ರಂಗಪ್ರವೇಶ ಸಮಾರಂಭ ಅಕ್ಟೋಬರ್ 25ರಂದು ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ನಡೆಯಲಿದೆ.

ಭಾನುವಾರ ಸಂಜೆ 4.30ರಿಂದ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಸ್ಪಟಿಕಪುರಿ ಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಟಿ.ಎನ್. ಜವರಾಯಿಗೌಡ ಹಾಗೂ ಚಿತ್ರನಟ ಮನೋಜ್ ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಪ್ರಿಯಾ ಅವರ ಪಾಲಕರಾದ ಮಂಜುಳಾ ಮತ್ತು ನಾರಾಯಣಸ್ವಾಮಿ ಉಪಸ್ಥಿತರಿರಲಿದ್ದಾರೆ.

ರಂಗಪ್ರವೇಶದ ಅಂಗವಾಗಿ ಪ್ರಿಯಾ ಅವರು ಕೀರ್ತನೆ, ಅಲರಿಪು, ಭೈರವಾಷ್ಟಕಂ, ವರ್ಣ, ಅಂತಪ್ಪುರ ಗೀತೆ, ದೇವರನಾಮ ಹಾಗೂ ತಿಲ್ಲಾನ ಸೇರಿದಂತೆ ವಿವಿಧ ನೃತ್ಯ ಪ್ರಕಾರಗಳನ್ನು ಪ್ರಸ್ತುತಪಡಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ವಿದುಷಿ ಲತಾ ಅವರು ನಟುವಾಂಗದಲ್ಲಿ ಸಾಥ್ ನೀಡಲಿದ್ದು, ಗಾಯನದಲ್ಲಿ ನಂದಕುಮಾರ್, ಮೃದಂಗದಲ್ಲಿ ಜನಾರ್ಧನ, ಕೊಳಲಿನಲ್ಲಿ ಕಾರ್ತಿಕ್ ಹಾಗೂ ರಿದಂ ಪ್ಯಾಡ್‌ನಲ್ಲಿ ಭಾರ್ಗವ ಹಾಲಂಬಿ ಸಹಕರಿಸಲಿದ್ದಾರೆ.

ಬಾಲ್ಯದಿಂದಲೇ ನೃತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿರುವ ಪ್ರಿಯಾ, ಗುರು ಲತಾ ಲಕ್ಷ್ಮೀಶ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ. ಹಿರಿಯ ಹಂತದ ಪರೀಕ್ಷೆಗಳನ್ನು ಪೂರ್ಣಗೊಳಿಸಿರುವ ಅವರು, ಪ್ರಸ್ತುತ ವಿದ್ವತ್ ಹಂತದ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.

ಕಲೆಯ ಜೊತೆಗೆ ಶಿಕ್ಷಣದಲ್ಲಿಯೂ ಆಸಕ್ತಿ ಹೊಂದಿರುವ ಪ್ರಿಯಾ ಅವರು ಎಂ.ಎಸ್ಸಿ. ಮೈಕ್ರೋಬಯಾಲಜಿ ಅಧ್ಯಯನ ಮಾಡುತ್ತಿದ್ದಾರೆ. ಫ್ಯಾಷನ್ ಡಿಸೈನರ್ ಆಗಿಯೂ ಗುರುತಿಸಿಕೊಂಡಿರುವ ಅವರು, ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪುರಸ್ಕಾರ ಪಡೆದಿದ್ದಾರೆ. ಅಲ್ಲದೆ, ರಾಜ್ಯಮಟ್ಟದ ವಾಲಿಬಾಲ್ ಆಟಗಾರ್ತಿಯಾಗಿಯೂ ಸಾಧನೆ ಮಾಡಿದ್ದಾರೆ.

ಪ್ರಿಯಾ ಅವರಿಗೆ ಭರತನಾಟ್ಯದ ತರಬೇತಿ ನೀಡಿರುವ ವಿದುಷಿ ಲತಾ ಲಕ್ಷ್ಮೀಶ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಭೀಮನಕೋಣೆಯವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಅವರು, ಸಂಯೋಗ ಕಲಾ ಶಾಲೆಯ ಮೂಲಕ ಸಾವಿರಾರು ಮಕ್ಕಳಿಗೆ ನೃತ್ಯ ತರಬೇತಿ ನೀಡಿದ್ದಾರೆ. ಪ್ರಿಯಾ ಅವರ ರಂಗಪ್ರವೇಶವು ಲತಾ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ 24ನೇ ರಂಗಪ್ರವೇಶ ಕಾರ್ಯಕ್ರಮವಾಗಿದೆ. ಕಲಾ ಚಟುವಟಿಕೆಗಳಲ್ಲಿ ಅವರಿಗೆ ಪತಿ ಲಕ್ಷ್ಮೀಶ ಅವರ ಸಹಕಾರವೂ ಇದೆ.

ಶಿಕ್ಷಣ, ಕ್ರೀಡೆ, ವಸ್ತ್ರ ವಿನ್ಯಾಸ ಮತ್ತು ನೃತ್ಯ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಪ್ರಿಯಾ ಅವರ ರಂಗಪ್ರವೇಶವು ಭರತನಾಟ್ಯದ ಮುಂದಿನ ಪಯಣಕ್ಕೆ ಮಹತ್ವದ ಹೆಜ್ಜೆಯಾಗಲಿದೆ.