SK Home Ad
Home ನಮ್ಮ ಜಿಲ್ಲೆ ಬೆಳಗಾವಿ ಪ್ರಿಯಕರನಿಗಾಗಿ ಪತಿಯನ್ನೇ ಹೂತು ಹಾಕಿದ ಪತ್ನಿ: 6 ತಿಂಗಳ ಬಳಿಕ ಬಯಲಾದ ಕೊಲೆ ರಹಸ್ಯ

ಪ್ರಿಯಕರನಿಗಾಗಿ ಪತಿಯನ್ನೇ ಹೂತು ಹಾಕಿದ ಪತ್ನಿ: 6 ತಿಂಗಳ ಬಳಿಕ ಬಯಲಾದ ಕೊಲೆ ರಹಸ್ಯ

0
85

ಚಿಕ್ಕೋಡಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಕೊಲೆ ಮಾಡಿ ಹೊಲದಲ್ಲಿ ಹೂತುಹಾಕಿದ್ದ ಪ್ರಕರಣ ತಾಲೂಕಿನ ಖಡಕಲಾಟದಲ್ಲಿ 6 ತಿಂಗಳ ಬಳಿಕ ಬೆಳಕಿಗೆ ಬಂದಿದೆ.

ಖಡಕಲಾಟದ ರಾಘು ಸಿದ್ದಪ್ಪ ಗಾವಡೆ (38) ಕೊಲೆಯಾದ ದುರ್ದೈವಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಪತ್ನಿ ಬಂಗಾರಿ (32) ಹಾಗೂ ಆಕೆಯ ಪ್ರಿಯಕರ ನಿಪ್ಪಾಣಿ ತಾಲೂಕಿನ ಬೇನಾಡಿ ಗ್ರಾಮದ ರಾಮಾ ಮಾಯಪ್ಪ ರಾಣಗೆ (40) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ: ಅತಿಯಾಗಿ ಮದ್ಯಪಾನ ಮಾಡುತ್ತಿದ್ದ ರಾಘು ಆಗಾಗ ಮನೆಗೆ ಬರದೇ ಇರುತ್ತಿದ್ದ. ಈ ವೇಳೆ ಆತನ ಪತ್ನಿ ಬಂಗಾರಿ ಹಾಗೂ ಗಂಡನ ಸೋದರಮಾವನ ಮಗ ರಾಮಾ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು. ಇದಕ್ಕೆ ರಾಘು ಅಡ್ಡಿಯಾಗಿದ್ದರಿಂದ ಆತನನ್ನು ಮುಗಿಸಲು ಇಬ್ಬರೂ ಸಂಚು ರೂಪಿಸಿದ್ದರು. ಫೆಬ್ರವರಿಯಲ್ಲಿ ರಾಘುವಿಗೆ ವಿಪರೀತ ಮದ್ಯ ಕುಡಿಸಿ, ಖಡಕಲಾಟ-ಅಕೋಳ ಮಾರ್ಗದ ತೋಟಕ್ಕೆ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿ, ಹೊಲದಲ್ಲೇ ಹೂತುಹಾಕಿದ್ದರು. ಬಳಿಕ ಗಂಡ ನಾಪತ್ತೆಯಾಗಿದ್ದಾನೆ ಎಂದು ಪತ್ನಿ ಸುಳ್ಳು ದೂರು ನೀಡಿದ್ದಳು.

ಆರು ತಿಂಗಳಾದರೂ ರಾಘು ಸುಳಿವು ಸಿಗದಿದ್ದಾಗ ಅನುಮಾನಗೊಂಡ ಸಂಬಂಧಿಕರು ತೀವ್ರ ವಿಚಾರಣೆ ನಡೆಸಿದಾಗ ಬಂಗಾರಿ ಸತ್ಯ ಒಪ್ಪಿಕೊಂಡಿದ್ದಾಳೆ. ಆಗಸ್ಟ್‌ 6 ರಂದು ಆಕೆಯನ್ನು ಖಡಕಲಾಟ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದ್ದು, ವಿಚಾರಣೆ ವೇಳೆ ಕೊಲೆ ರಹಸ್ಯ ಬಯಲಾಗಿದೆ.