SK Home Ad
Home ನಮ್ಮ ಜಿಲ್ಲೆ ಬೆಳಗಾವಿ ಬೆಳಗಾವಿ ಗಡಿ ವಿವಾದ: 2004ರ ದಾವೆಗೆ ಜೀವ ತುಂಬಿದ ಮಹಾರಾಷ್ಟ್ರ

ಬೆಳಗಾವಿ ಗಡಿ ವಿವಾದ: 2004ರ ದಾವೆಗೆ ಜೀವ ತುಂಬಿದ ಮಹಾರಾಷ್ಟ್ರ

0
77

ಬೆಳಗಾವಿ: ಬೆಳಗಾವಿ ಗಡಿ ವಿಚಾರದಲ್ಲಿ ʻಮಹಾಜನ ಆಯೋಗದ ವರದಿಯೇ ಅಂತಿಮ, ರಾಜ್ಯದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲʼ ಎಂದು ಕರ್ನಾಟಕ ಸರ್ಕಾರ ಬೆಳಗಾವಿ ಮಹಾನಗರ ಪಾಲಿಕೆಗೆ ಸ್ಪಷ್ಟ ಸಂದೇಶ ರವಾನಿಸಿರುವ ಬೆನ್ನಲ್ಲೇ, ಮಹಾರಾಷ್ಟ್ರ ಸರ್ಕಾರವು 2004ರಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಗಡಿ ವಿವಾದದ ಮೂಲ ದಾವೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.

ಕರ್ನಾಟಕದ ವ್ಯಾಪ್ತಿಯಲ್ಲಿರುವ ಬೆಳಗಾವಿ, ನಿಪ್ಪಾಣಿ, ಕಾರವಾರ ಸೇರಿದಂತೆ 865 ಮರಾಠಿ ಭಾಷಿಕ ಗ್ರಾಮ-ಪಟ್ಟಣಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ತನ್ನ ಹಳೆಯ ಬೇಡಿಕೆಗೆ ಸಂಬಂಧಿಸಿದ ಪ್ರಕರಣವನ್ನು ಶೀಘ್ರ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಇದರಿಂದ, ಒಂದೆಡೆ `ಗಡಿ ವಿಚಾರ ಈಗಾಗಲೇ ಇತ್ಯರ್ಥವಾಗಿದೆ’ ಎನ್ನುವ ಕರ್ನಾಟಕದ ನಿಲುವು; ಮತ್ತೊಂದೆಡೆ ʻಗಡಿ ಮರುವಿಂಗಡಣೆ ಆಗಬೇಕು’ ಎನ್ನುವ ಮಹಾರಾಷ್ಟ್ರದ ಹಕ್ಕು ಪ್ರತಿಪಾದನೆ ಮತ್ತೆ ನೇರ ಮುಖಾಮುಖಿಯಾಗಿವೆ.

ಕರ್ನಾಟಕದ ಸಂದೇಶ ಸ್ಪಷ್ಟ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಗಡಿ ವಿಚಾರಕ್ಕೆ ಸಂಬಂಧಿಸಿದ ಗೊತ್ತುವಳಿ ಕುರಿತು ಕಳೆದ ಕೆಲವು ತಿಂಗಳಿಂದ ಚರ್ಚೆ ನಡೆಯುತ್ತಿತ್ತು. ಈ ವಿಷಯವನ್ನು ಸರ್ಕಾರದ ಅಭಿಪ್ರಾಯಕ್ಕಾಗಿ ಕಳುಹಿಸಿದ್ದ ಪಾಲಿಕೆಗೆ ಇದೀಗ ರಾಜ್ಯ ಸರ್ಕಾರ ಸ್ಪಷ್ಟ ಉತ್ತರ ನೀಡಿದೆ.

ಮಹಾಜನ ಆಯೋಗದ ವರದಿ ಹಾಗೂ ಕರ್ನಾಟಕ ವಿಧಾನಮಂಡಲ ಹಿಂದೆ ಕೈಗೊಂಡಿರುವ ನಿರ್ಣಯವೇ ರಾಜ್ಯದ ಅಧಿಕೃತ ನಿಲುವು. ಅದನ್ನೇ ಅನುಸರಿಸಬೇಕು. ಇದೇ ವಿಷಯವನ್ನು ಪದೇ ಪದೇ ಸರ್ಕಾರದ ಮುಂದೆ ತರುವ ಅಗತ್ಯವಿಲ್ಲ ಎಂಬ ಅರ್ಥದಲ್ಲಿ ಪಾಲಿಕೆ ಆಯುಕ್ತರಿಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಿದೆ.

22 ವರ್ಷದ ದಾವೆ ಮತ್ತೆ ತೆರೆದ ಮಹಾರಾಷ್ಟ್ರ: ಈ ಬೆಳವಣಿಗೆಯ ನಡುವೆಯೇ ಮಹಾರಾಷ್ಟ್ರ ಸರ್ಕಾರ ತನ್ನ 2004ರ ಮೂಲ ದಾವೆಯ ಶೀಘ್ರ ವಿಚಾರಣೆಗೆ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿರುವುದು ಗಡಿ ವಿವಾದಕ್ಕೆ ಹೊಸ ರಾಜಕೀಯ ಮತ್ತು ಕಾನೂನು ಆಯಾಮ ನೀಡಿದೆ.

1956ರ ರಾಜ್ಯ ಪುನರ್‌ರಚನೆ ಸಂದರ್ಭದಲ್ಲಿ ಕೆಲವು ಮರಾಠಿ ಭಾಷಿಕ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸಲಾಗಿದೆ ಎಂಬುದು ಮಹಾರಾಷ್ಟ್ರದ ವಾದ. ಬೆಳಗಾವಿ ಸೇರಿದಂತೆ ಗಡಿ ಭಾಗದ ಹಲವು ಪ್ರದೇಶಗಳನ್ನು ತನ್ನ ರಾಜ್ಯಕ್ಕೆ ಸೇರಿಸಬೇಕು ಎಂದು ಅದು ದಶಕಗಳಿಂದ ಪ್ರತಿಪಾದಿಸುತ್ತಿದೆ.

ಆದರೆ, ಈ ವಾದವನ್ನು ಕರ್ನಾಟಕ ನಿರಂತರವಾಗಿ ತಿರಸ್ಕರಿಸಿದೆ. ಮಹಾಜನ ಆಯೋಗವು ವಿವಾದವನ್ನು ಪರಿಶೀಲಿಸಿ ವರದಿ ಸಲ್ಲಿಸಿರುವುದರಿಂದ ಗಡಿ ಪ್ರಶ್ನೆಯನ್ನು ಮತ್ತೆ ತೆರೆಯುವ ಪ್ರಶ್ನೆಯೇ ಇಲ್ಲ ಎಂಬುದು ಕರ್ನಾಟಕದ ನಿಲುವು.

ಈಗ ಕಾನೂನು ಹೋರಾಟದತ್ತ ಕಣ್ಣು: ಮಹಾರಾಷ್ಟ್ರದ ಮನವಿಯೊಂದಿಗೆ ಗಡಿ ವಿಚಾರ ಮತ್ತೆ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಚರ್ಚೆಗೆ ಬರಲು ವೇದಿಕೆ ಸಿದ್ಧವಾಗಿದೆ. ಪ್ರಕರಣವನ್ನು ಯಾವಾಗ ವಿಚಾರಣೆಗೆ ಪಟ್ಟಿ ಮಾಡಲಾಗುತ್ತದೆ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಹೀಗಾಗಿ, ಬೆಳಗಾವಿ ಪಾಲಿಕೆಯ ಗೊತ್ತುವಳಿಯಿಂದ ಆರಂಭವಾದ ಇತ್ತೀಚಿನ ಚರ್ಚೆ ಈಗ ಕರ್ನಾಟಕ-ಮಹಾರಾಷ್ಟ್ರಗಳ ಹಳೆಯ ಗಡಿ ಕಾನೂನು ಸಮರದತ್ತ ತಿರುಗಿದೆ.