SK Home Ad
Home ನಮ್ಮ ಜಿಲ್ಲೆ ಬೆಳಗಾವಿ ಮಹಿಳೆಯರಿಲ್ಲದ ಸಚಿವ ಸಂಪುಟ ಅಪೂರ್ಣ

ಮಹಿಳೆಯರಿಲ್ಲದ ಸಚಿವ ಸಂಪುಟ ಅಪೂರ್ಣ

0
30

ಬೆಳಗಾವಿ: ಸಚಿವ ಸಂಪುಟದಿಂದ ಹೊರಗುಳಿದ ಬಳಿಕ ಮೊದಲ ಬಾರಿಗೆ ಸುದೀರ್ಘವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು, ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಇರಬೇಕು ಎಂದು ಪ್ರತಿಪಾದಿಸಿದರು.

ಮಹಿಳೆಯರಿಲ್ಲದ ಸಂಪುಟ ಅಪೂರ್ಣ ಎನ್ನುವುದು ನನ್ನ ಅಭಿಪ್ರಾಯ. ಮೂರು ವರ್ಷಗಳ ಕಾಲ ಸಚಿವೆಯಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಮಹಿಳೆಯರ ಸಮಸ್ಯೆಗಳನ್ನು, ಅವರ ನೋವು-ನಲಿವುಗಳನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಮಹಿಳೆಯರಿಗೆ ನ್ಯಾಯ ಸಿಗಬೇಕು, ಅವರ ಧ್ವನಿ ಸರ್ಕಾರದಲ್ಲಿ ಇರಬೇಕು ಎಂದರು. ಜಾರ್ಖಂಡ್, ಹಿಮಾಚಲ ಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳ ಕಾಂಗ್ರೆಸ್ ಸರ್ಕಾರಗಳಲ್ಲಿ ಮಹಿಳೆಯರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಅವರು ಉಲ್ಲೇಖಿಸಿದರು.

ಕರ್ನಾಟಕದಲ್ಲಿ ಏನೋ ಒಂದು ರೀತಿಯ ಲೆಕ್ಕಾಚಾರದಲ್ಲಿ ಈ ಬಾರಿ ಬದಲಾವಣೆ ಆಗಿದೆ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಈ ವಿಚಾರದಲ್ಲಿ ನಾನು ಯಾವುದೇ ರೀತಿಯ ತೀಕ್ಷ್ಣ ಹೇಳಿಕೆ ನೀಡಲು ಹೋಗುವುದಿಲ್ಲ. ಮುಖ್ಯಮಂತ್ರಿಗಳು ಕೂಡ ಆದಷ್ಟು ಶೀಘ್ರದಲ್ಲಿ ಮಹಿಳೆಯರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಹೇಳಿದ್ದಾರೆ. ಆ ನಿರ್ಧಾರವನ್ನು ನಾವು ನೋಡೋಣ ಎಂದು ಹೇಳಿದರು.

ಸಚಿವ ಸ್ಥಾನ ಮುಂದುವರಿಸುವಂತೆ ತಾವು ಯಾರನ್ನೂ ಕೇಳಿಲ್ಲ ಎಂದು ಸ್ಪಷ್ಟಪಡಿಸಿದ ಹೆಬ್ಬಾಳಕರ್, ಹೈಕಮಾಂಡ್ ನಿರ್ಧಾರವನ್ನು ಪ್ರಶ್ನಿಸುವುದು ನನ್ನ ಕೆಲಸವಲ್ಲ. ಸಚಿವೆಯಾಗಿ ಮೂರು ವರ್ಷಗಳ ಕಾಲ ಅವಕಾಶ ನೀಡಿದ ಪಕ್ಷಕ್ಕೆ ಧನ್ಯವಾದ ಸಲ್ಲಿಸುವುದರೊಂದಿಗೆ, ಪಕ್ಷದ ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸುವುದಾಗಿ ಹೇಳಿದರು.