ಬೆಳಗಾವಿ: ಬಹುಕೋಟಿ ಕೋಟಿ ವಂಚನೆ ಆರೋಪದ ಪ್ರಕರಣದಲ್ಲಿ ಸಂಸ್ಥೆಯ ಮುಖ್ಯಸ್ಥ ಶಿವಾನಂದ ನೀಲಣ್ಣವರ ಅವರನ್ನು ಸಿಐಡಿ ಅಧಿಕಾರಿಗಳು ಸೋಮವಾರ ತಡರಾತ್ರಿ ಬೆಂಗಳೂರಿನಿಂದ ಬೆಳಗಾವಿಗೆ ಕರೆತಂದು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದರು.
ನ್ಯಾಯಾಲಯ ನೀಡಿದ್ದ 10 ದಿನಗಳ ಸಿಐಡಿ ಕಸ್ಟಡಿ ಅವಧಿ ಮೇ 27ರಂದು ಅಂತ್ಯಗೊಳ್ಳಲಿದೆ. ಆದರೆ, ನಾಳೆ ನ್ಯಾಯಾಲಯಕ್ಕೆ ರಜೆ ಇರುವ ಹಿನ್ನೆಲೆಯಲ್ಲಿ ನೀಲಣ್ಣವರ ಅವರನ್ನು ಒಂದು ದಿನ ಮುಂಚಿತವಾಗಿಯೇ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮೂವರಿಗೆ ಸಿಐಡಿ ನೋಟಿಸ್, ಠಾಣೆಗೆ ಹಾಜರು: ಪ್ರಕರಣಕ್ಕೆ ಸಂಬಂಧಿಸಿದಂತೆ ನೀಲಣ್ಣವರ ಪತ್ನಿ, ನಟ ಆರ್. ಅಭಿಲಾಷ್ ಹಾಗೂ ವ್ಯವಹಾರ ಪಾಲುದಾರ ಸುಭಾಷ್ ಅವರಿಗೆ ಸಿಐಡಿ ನೋಟಿಸ್ ಜಾರಿ ಮಾಡಿತ್ತು. ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಮೂವರೂ ಮಂಗಳವಾರ ಮಾಳಮಾರುತಿ ಠಾಣೆಗೆ ಬಂದು ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.
ಈ ಮೂವರಿಂದಲೂ ಹಣಕಾಸು ವ್ಯವಹಾರಗಳು, ಸಂಸ್ಥೆಯ ಒಳಚಟುವಟಿಕೆಗಳು, ಹೂಡಿಕೆದಾರರ ಹಣದ ಹರಿವು ಹಾಗೂ ಆಸ್ತಿ ಖರೀದಿ ಕುರಿತಂತೆ ಮಹತ್ವದ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎನ್ನಲಾಗಿದೆ.
ತನಿಖೆಯನ್ನು ಮತ್ತಷ್ಟು ಬಿಗಿಗೊಳಿಸಿರುವ ಸಿಐಡಿ, ಹೂಡಿಕೆದಾರರ ಹಣದಿಂದ ಖರೀದಿಸಲಾಗಿದೆ ಎನ್ನಲಾದ ಐಷಾರಾಮಿ ವಾಹನಗಳ ಜಪ್ತಿಗೂ ಮುಂದಾಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಡಿಫೆಂಡರ್, ಮರ್ಸಿಡಿಸ್ ಬೆಂಝ್ ಹಾಗೂ ವೆಲ್‌ಫೈರ್ ಕಾರುಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.





















