SK Home Ad
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಅಕ್ರಮ ವಾಸ್ತವ್ಯ: ಎಂಟು ಬಾಂಗ್ಲಾದೇಶಿ ಪ್ರಜೆಗಳ ಪತ್ತೆ, ಗಡಿಪಾರಿಗೆ ಸಿದ್ಧತೆ

ಅಕ್ರಮ ವಾಸ್ತವ್ಯ: ಎಂಟು ಬಾಂಗ್ಲಾದೇಶಿ ಪ್ರಜೆಗಳ ಪತ್ತೆ, ಗಡಿಪಾರಿಗೆ ಸಿದ್ಧತೆ

0
44

ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲವು ಬಾಂಗ್ಲಾದೇಶದ ಪ್ರಜೆಗಳಿರುವ ಬಗ್ಗೆ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ಶುಕ್ರವಾರ ದಾಳಿ ನಡೆಸಿ ಎಂಟು ಜನ ಬಾಂಗ್ಲಾದೇಶಿ ಪ್ರಜೆಗಳನ್ನು ಪತ್ತೆ ಹಚ್ಚಿದ್ದಾರೆ.

ಒಟ್ಟು 54 ಜನ ಕಟ್ಟಡ ಕಾರ್ಮಿಕರ ದಾಖಲಾತಿಗಳನ್ನು ಪರಿಶೀಲಿಸಿದಾಗ ಎಂಟು ಜನ ಬಾಂಗ್ಲಾ ಪ್ರಜೆಗಳು ಪತ್ತೆಯಾಗಿದ್ದಾರೆ. ಅಜರುಲ್ ಇಸ್ಲಾಂ, ಮುಹಮ್ಮದ್ ರಕೀಬ್, ಜಾಹಿದ್ ಹುಸೇನ್, ಮಹಮ್ಮದ್ ಬಿಲಾಲ್ ಹುಸೇನ್, ಸೋಯೆಬ್ ಉಲ್ಲಾ, ಮಹಮ್ಮದ್ ಸಂಟುಲ್, ಮೌಕರ್ ಆಲಿ, ಅಜರುಲ್ ಇಸ್ಲಾಂ ಪತ್ತೆಯಾಗಿರುವ ಬಾಂಗ್ಲಾ ಪ್ರಜೆಗಳು.

ಬಾಂಗ್ಲಾದೇಶದ ಪ್ರಜೆಗಳು ಸುಮಾರು ಮೂರು ತಿಂಗಳ ಹಿಂದೆ ಅಕ್ರಮವಾಗಿ ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮೂಲಕ ಭಾರತಕ್ಕೆ ಬಂದು ನಂತರ ಮುರ್ಷಿದಾಬಾದ್‌ನ ಪಶ್ಚಿಮ ಬಂಗಾಳದ ವಿಳಾಸವಿರುವ ಆಧಾರ್ ಕಾರ್ಡ್‌ಗಳಿಗೆ ಬಾಂಗ್ಲಾದೇಶ ನಿವಾಸಿಗಳ ಭಾವಚಿತ್ರವನ್ನು ಅಂಟಿಸಿ ಕಲರ್ ಜೆರಾಕ್ಸ್‌ನ್ನು ಮಾಡಿ ಎರಡು ತಿಂಗಳಿನಿಂದ ಮುಕ್ಕ ಬಂದು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು.

ಬಾಂಗ್ಲಾ ಪ್ರಜೆಗಳನ್ನು ಠಾಣೆಗೆ ಕರೆತಂದು ಕೂಲಂಕಷವಾಗಿ ಪರಿಶೀಲನೆಯನ್ನು ಮಾಡಿ ಅವರ ಗುರುತಿನ ಚೀಟಿ ನ್ಯಾಷನಲ್ ಐಡಿ ಕಾರ್ಡ್, ಜನನ ಪ್ರಮಾಣ ಪತ್ರ ಹಾಗೂ ಅವರ ಕುಟುಂಬದವರ ದಾಖಲಾತಿಗಳನ್ನು ಪರಿಶೀಲಿಸಿದಾಗ ಇವರು ಬಾಂಗ್ಲಾದೇಶ ನಿವಾಸಿಗಳೆಂದು ದೃಢಪಟ್ಟಿದೆ.

ಇವರು ಇಲ್ಲಿಗೆ ಕೂಲಿ ಕೆಲಸಕ್ಕಾಗಿ ಬಂದಿದ್ದು, ಬಾಂಗ್ಲಾದೇಶ ನಿವಾಸಿಗಳು ಯಾವುದೇ ರಹದಾರಿ ಪತ್ರ, ವೀಸಾ ಅನ್ನು ಪಡೆಯದೆ ಅಕ್ರಮವಾಗಿ ಭಾರತದ ಗಡಿಯನ್ನು ದಾಟಿ ನುಸುಳಿ ಬಂದಿರುವುದಾಗಿದೆ. ಅಕ್ರಮವಾಗಿ ನುಸುಳಿ ಭಾರತ ದೇಶವನ್ನು ಪ್ರವೇಶಿಸಿದ ಈ ಬಾಂಗ್ಲಾದೇಶದ ಪ್ರಜೆಗಳನ್ನು ಮುಂದಿನ ಕ್ರಮಕ್ಕಾಗಿ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್‌ಆರ್‌ಆರ್‌ಒ) ವರದಿ ಕಳುಹಿಸಲಾಗುತ್ತಿದೆ. ನಂತರ ಬಾಂಗ್ಲಾ ಪ್ರಜೆಗಳನ್ನು ವಶಕ್ಕೆ ಪಡೆಯಲು ಎಫ್‌ಆರ್‌ಆರ್‌ಒ ಆದೇಶ ಹೊರಡಿಸಲಿದೆ ಹಾಗೂ ಸ್ವದೇಶಕ್ಕೆ ಗಡಿಪಾರು ಮಾಡಲು ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.