SK Home Ad
Home ಸುದ್ದಿ ದೇಶ 2029ರಿಂದಲೇ ʻಒಂದು ರಾಷ್ಟ್ರ – ಒಂದು ಚುನಾವಣೆ’ ಜಾರಿ ಸಾಧ್ಯತೆ

2029ರಿಂದಲೇ ʻಒಂದು ರಾಷ್ಟ್ರ – ಒಂದು ಚುನಾವಣೆ’ ಜಾರಿ ಸಾಧ್ಯತೆ

0
36

ಪಣಜಿ: `ಒಂದು ದೇಶ, ಒಂದು ಚುನಾವಣೆ’ ಸುಧಾರಣೆ ಮುಂಬರುವ 2029ರ ಸಾರ್ವತ್ರಿಕ ಚುನಾವಣೆಯಿಂದಲೇ ಜಾರಿಯಾಗುವ ಸಾಧ್ಯತೆಗಳಿವೆ ಎಂದು ಸಂಸತ್ತಿನ ಜಂಟಿ ಸದನ ಸಮಿತಿ ಸುಳಿವು ನೀಡಿದೆ.

ಗೋವಾದ ಪಣಜಿಯಲ್ಲಿ ಶುಕ್ರವಾರ ನಡೆದ ಜಂಟಿ ಸದನ ಸಮಿತಿಯ 2 ದಿನಗಳ ಸಭೆಯ ಸಂದರ್ಭದಲ್ಲಿ, ಸಮಿತಿ ಅಧ್ಯಕ್ಷ ಪಿ.ಪಿ. ಚೌಧರಿಯವರು ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.

ಏಕಕಾಲಕ್ಕೇ ದೇಶದ ಎಲ್ಲ ಚುನಾವಣೆಗಳನ್ನೂ ನಡೆಸುವ ಕುರಿತಾದ ಮಸೂದೆಗಳನ್ನು ಜಂಟಿ ಸದನ ಸಮಿತಿ ಪರಿಶೀಲಿಸುತ್ತಿದ್ದು, 2029 ರಿಂದಲೇ ಇದನ್ನು ಜಾರಿಗೆ ತರುವ ನಿಟ್ಟಿನಲ್ಲಿ ತನ್ನದೇ ಕಾರ್ಯ ಯೋಜನೆ ರೂಪಿಸುತ್ತಿದೆ ಎಂದರು.

`ಒಂದು ದೇಶ, ಒಂದು ಚುನಾವಣೆ’ ಜಾರಿಯಿಂದ ಅಂದಾಜು 7 ಲಕ್ಷ ಕೋಟಿ ರೂ. ಆರ್ಥಿಕ ಹೊರೆಯನ್ನು ಇಳಿಸಬಹುದಾಗಿದೆ. ಈ ಸಂಬಂಧವಾಗಿ ದೇಶದ ಶೇ. 99ರಷ್ಟು ನಾಗರಿಕ ಸಮಾಜದ ಸಂಘ ಸಂಸ್ಥೆಗಳನ್ನು ಸಂಪರ್ಕಿಸಿ ಸಲಹೆ ಸೂಚನೆ ಪಡೆಯಲಾಗಿದೆ. ಬಹುತೇಕ ಸಂಘ ಸಂಸ್ಥೆಗಳು ಪ್ರಸ್ತಾವನೆಯನ್ನು ಬೆಂಬಲಿಸಿವೆ ಎಂದು ಅವರು ಸಮರ್ಥಿಸಿಕೊಂಡರು.

ಗೋವಾ ಸಭೆಯಲ್ಲಿ ಸಮಿತಿಯು 2024ರ ಸಾಂವಿಧಾನಿಕ (129ನೇ ತಿದ್ದುಪಡಿ) ಮಸೂದೆ ಕುರಿತು ಚರ್ಚೆ ಆರಂಭಿಸಿದೆ. `ಒಂದು ದೇಶ, ಒಂದು ಚುನಾವಣೆ’ ಜಾರಿಯಲ್ಲಿ ಎದುರಾಗಬಹುದಾದ ಸವಾಲುಗಳು ಮತ್ತು ಅವುಗಳನ್ನು ಎದುರಿಸುವ ದಾರಿಗಳ ಕುರಿತೂ ಗಂಭೀರ ಚರ್ಚೆ ಸಾಗಿದೆ ಎಂದರು.