SK Home Ad
Home ನಮ್ಮ ಜಿಲ್ಲೆ ಬೆಳಗಾವಿ ಗಡಿಯಲ್ಲಿ ಮತ್ತೆ ಕನ್ನಡ ಕಿಡಿ; ಪಾಲಿಕೆ ಠರಾವ್‌ಗೆ ಜೂನ್ 2 ಗಡುವು

ಗಡಿಯಲ್ಲಿ ಮತ್ತೆ ಕನ್ನಡ ಕಿಡಿ; ಪಾಲಿಕೆ ಠರಾವ್‌ಗೆ ಜೂನ್ 2 ಗಡುವು

0
57

ಬೆಳಗಾವಿ: “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಗಡಿವಿವಾದದಲ್ಲಿ ಮಹಾಜನ ವರದಿಯೇ ಅಂತಿಮ” ಎಂಬ ಠರಾವ್ ಅಂಗೀಕರಿಸಬೇಕು ಎಂಬ ಆಗ್ರಹ ಮಂಗಳವಾರ ನಗರದಲ್ಲಿ ಮತ್ತೆ ಕನ್ನಡ ಹೋರಾಟದ ಕಿಡಿ ಹೊತ್ತಿಸಿತು.

ಪಾಲಿಕೆಗೆ ಮುತ್ತಿಗೆ ಹಾಕಲು ಹೊರಟಿದ್ದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದ ಸೇರಿದಂತೆ ಕನ್ನಡ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಆರ್‌ಟಿಒ ವೃತ್ತದ ಬಳಿ ತಡೆದು ವಶಕ್ಕೆ ಪಡೆದರು.

ಈ ವೇಳೆ ರಸ್ತೆ ತಡೆ, ಘೋಷಣೆ, ಪೊಲೀಸ್ ವಾಹನದ ಎದುರು ಧರಣಿ, ಕಾರ್ಯಕರ್ತರನ್ನು ಎಳೆದು ವಾಹನಕ್ಕೆ ಹತ್ತಿಸುವ ದೃಶ್ಯಗಳಿಂದ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಲ್ಮಿಡಿ ಶಾಸನದ ಪ್ರತಿಮೆಗೆ ಕ್ಷೀರಾಭಿಷೇಕ ನೆರವೇರಿಸಿದ ಬಳಿಕ ಕನ್ನಡ ಸಂಘಟನೆಗಳ ಕಾರ್ಯಕರ್ತರು ಮೆರವಣಿಗೆ ಮೂಲಕ ಪಾಲಿಕೆಯತ್ತ ಹೊರಟರು. ಆದರೆ ಆರ್‌ಟಿಒ ವೃತ್ತಕ್ಕೆ ತಲುಪುತ್ತಿದ್ದಂತೆ ಪೊಲೀಸರು ವಾಹನಗಳನ್ನು ಅಡ್ಡಲಾಗಿ ನಿಲ್ಲಿಸಿ ಮೆರವಣಿಗೆಯನ್ನು ತಡೆದರು.

“ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ”, “ಪಾಲಿಕೆ ಠರಾವ್ ಅಂಗೀಕರಿಸಲಿ”, “ಮಹಾಜನ ವರದಿಯೇ ಅಂತಿಮ” ಎಂಬ ಘೋಷಣೆಗಳು ರಸ್ತೆಯೆಲ್ಲ ಮೊಳಗಿದವು. ಕೆಲ ಕಾರ್ಯಕರ್ತರು ರಸ್ತೆಮಧ್ಯೆ ಮಲಗಿ ಪ್ರತಿಭಟನೆ ನಡೆಸಿದರು. ಪೊಲೀಸರು ಕಾರ್ಯಕರ್ತರನ್ನು ಕೈಕಾಲು ಹಿಡಿದು ಎತ್ತಿ ವಾಹನಗಳಲ್ಲಿ ಕೂರಿಸಿದರು.

ವಾಟಾಳ್ ನಾಗರಾಜ್ ಹಾಗೂ ಸಾ.ರಾ. ಗೋವಿಂದ್ ಅವರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದಾಗ ಮತ್ತೊಂದು ಹಂತದ ಹೈಡ್ರಾಮಾ ನಡೆಯಿತು. “ಪಾಲಿಕೆ ಆಯುಕ್ತರನ್ನು ಇಲ್ಲಿಗೇ ಕರೆಸಿ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಠರಾವ್ ಅಂಗೀಕರಿಸಲು ಏನು ಅಡ್ಡಿ? ಉತ್ತರ ಕೊಡಿ” ಎಂದು ವಾಟಾಳ್ ಪಟ್ಟು ಹಿಡಿದರು.

ವಾಟಾಳ್ ಇದ್ದ ವಾಹನ ಮುಂದೆ ಸಾಗಲು ಯತ್ನಿಸಿದಾಗ ಪೊಲೀಸರು ಅದನ್ನು ತಡೆದರು. ನಂತರ ಪೊಲೀಸ್ ಅಧಿಕಾರಿಗಳು ವಾಹನಕ್ಕೆ ಹತ್ತಿ ವಾಟಾಳ್ ಅವರನ್ನು ಕೆಳಗಿಳಿಸಿ ಪೊಲೀಸ್ ವಾಹನಕ್ಕೆ ಹತ್ತಿಸಿದರು.